ಮುದ್ದೇಬಿಹಾಳ: “ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಸಹಿತ ನೀರಾವರಿ ವಿಷಯದಲ್ಲಿ ನಾನು ಮಾಡಿದ ಹಗರಣವನ್ನು ಶ್ವೇತಪತ್ರದ ಮೂಲಕ ಹೊರಗೆ ತರುವುದಾಗಿ ನೀರಾವರಿ ಮಂತ್ರಿ ಎಂ.ಬಿ. ಪಾಟೀಲ ಹೇಳಿದ್ದಾರಂತೆ. ನಾಲ್ಕು ವರ್ಷದ ಅಧಿಕಾರ ಅವಧಿಯಲ್ಲಿ ಎಂ.ಬಿ.ಪಾಟೀಲ ಕತ್ತೆ ಕಾಯ್ತಿದ್ರಾ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹರಿಹಾಯ್ದಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆಗ ಏಕೆ ಹಗರಣ ಹೊರಹಾಕಲಿಲ್ಲ? ಯಾಕೆ ಆಗ ತಡೆದಿದ್ದರು. ಈಗಲೂ ಕಾಲ ಮಿಂಚಿಲ್ಲ. 24 ಗಂಟೆಯೊಳಗೆ ನನ್ನ ಹಗರಣ ಹೊರ ಹಾಕೋಕೆ, ಶ್ವೇತಪತ್ರ ಬಿಡುಗಡೆ ಮಾಡೋಕೆ ಹೇಳಿ. ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ’ ಎಂದರು.
ನನ್ನ ಅಧಿಕಾರಾವಧಿಯಲ್ಲಿ ನೀರಾವರಿ ವಿಷಯದಲ್ಲಿ ಒಂದೇ ಒಂದು ರೂಪಾಯಿ ಹಗರಣ ನಡೆದಿದ್ದರೆ ಇವರು ಹೊರ ಹಾಕಲಿ ಅದಕ್ಕೆ ತಕ್ಕ ಉತ್ತರ ಕೊಡಲು ನಾನು ಸಿದ್ಧನಿದ್ದೇನೆ ಎಂದರು.
ಕೃಷ್ಣೆ ಮೇಲೆ ಆಣೆ ಅಂತ ಹೇಳಿ ಹೋರಾಟ ಮಾಡ್ಕೊಂಡು ಬಂದೋರು, ಕೃಷ್ಣೆ ನೀರಾವರಿಗೆ ವರ್ಷಕ್ಕೆ 10 ಸಾವಿರ
ಕೋಟಿ ಖರ್ಚು ಮಾಡ್ತೇವೆ ಅಂತ ಹೇಳಿಕೊಂಡವರು ಇದುವರೆಗೆ ಒಟ್ಟು 6 7 ಸಾವಿರ ಕೋಟಿ ಖರ್ಚು ಮಾಡಿದ್ದಾರೆ ಅಂದ್ರೆ ಇದು ಜನತೆಗೆ, ನಂಬಿಕೆ, ವಿಶ್ವಾಸಕ್ಕೆ ಮಾಡಿದ ದ್ರೋಹ ಎಂದು ಹೇಳಿದರು.