ನಟಿ ಮಯೂರಿ ಮತ್ತು ಅವಿನಾಶ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ “ಮೌನಂ’ ಚಿತ್ರ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಕೆಲ ಕಲಾವಿದರನ್ನು ಹೊರತುಪಡಿಸಿದರೆ ಬಹುತೇಕ ಇದು ಹೊಸಬರ ಪ್ರಯತ್ನ. ಆ ಪ್ರಯತ್ನ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್‌ನಲ್ಲೇ ಕಾಣಸಿಗುತ್ತದೆ. ಅಂದಹಾಗೆ, ಈ ಚಿತ್ರವನ್ನು ರಾಜ್ ಪಂಡಿತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. “ನಿಹಾರಿಕಾ ಮೂವೀಸ್’ ಬ್ಯಾನರ್‌ನಲ್ಲಿ ಶ್ರೀಹರಿ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ, ನಿರ್ಮಾಪಕರಿಬ್ಬರಿಗೂ ಇದು ಮೊದಲ ಪ್ರಯತ್ನ. ತಮ್ಮ ಚಿತ್ರದ ಕುರಿತು ಹೇಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದ ನಿರ್ದೇಶಕರು ಹೇಳಿದ್ದಿಷ್ಟು. “ಇದು ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಮನುಷ್ಯನಿಗೆ ಮನುಷ್ಯನೇ ಶತ್ರು.ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟಹಾಕುವ ಮೊದಲು ನಮ್ಮ ಒಳಗಡೆ ಇರುವ ಶತ್ರುವನ್ನು ಮಟ್ಟಹಾಕಬೇಕು ಎಂಬ ಅಂಶ ಚಿತ್ರದ ಹೈಲೈಟ್ ಎಂದು ವಿವರಿಸಿದ ನಿರ್ದೇಶಕರು, ಈ ಹಿಂದೆ ಕಿರುಚಿತ್ರವೊಂದನ್ನು ಮಾಡಿದ್ದೆ. ಅದಾದ ಬಳಿಕ ಸಿನಿಮಾ ಮಾಡುವ ಕನಸು ಇತ್ತು. ಆದರೆ, ಆ ಕನಸು ಇಂದು “ಮೌನಂ’ ಮೂಲಕ ಈಡೇರಿದೆ’ ಎಂದರು.
ನಟಿ ಮಯೂರಿ ಅವರಿಗೆ ಇಲ್ಲಿ ಹೊಸ ರೀತಿಯ ಪಾತ್ರ ಸಿಕ್ಕಿದೆಯಂತೆ. ಮೋಷನ್ ಪೋಸ್ಟರ್ ನೋಡಿದವರಿಗೆ ಹೊಸದೇನೋ ಇದೆ ಎನಿಸುವುದು ನಿಜ. ಆ ಬಗ್ಗೆ ಹೇಳುವ ಮಯೂರಿ, “ಇಲ್ಲಿ ಎರಡು ಶೇಡ್ ಇದೆ. ಒಂದು ಶೇಡ್‌ನಲ್ಲಿ ಮೌನವಾಗಿರುವ, ಹೋಮ್ಲಿ ಲುಕ್‌ನಲ್ಲಿ ಕಾಣಿಸಿಕೊಂಡರೆ, ಇನ್ನೊಂದು ಶೇಡ್‌ನಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಅದು ಯಾಕೆ ಅನ್ನೋದನ್ನು ಚಿತ್ರದಲ್ಲೇ ತಿಳಿಯಬೇಕು’ ಎನ್ನುತ್ತಾರೆ ಅವರು.
ಚಿತ್ರದಲ್ಲಿ ಅವಿನಾಶ್ ಅವರದು ಪ್ರಮುಖ ಪಾತ್ರವಿದೆಯಂತೆ. ಅವರು ಇಲ್ಲಿಯವರೆಗೆ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, “ಮೌನಂ’ ಪಾತ್ರ ಹೊಸ ಅನುಭವ ಕಟ್ಟಿಕೊಟ್ಟಿದೆಯಂತೆ. ಸಾಮಾನ್ಯವಾಗಿ ಅವರು ಮನೆಯಲ್ಲಿ ಯಾವ ಸಿನಿಮಾ ಬಗ್ಗೆಯೂ ಮಾತಾಡುವುದಿಲ್ಲವಂತೆ. ಆದರೆ, ಈ ಚಿತ್ರದ ಪಾತ್ರದ ಬಗ್ಗೆ ಮನೆಯಲ್ಲೂ ಚರ್ಚೆ ಮಾಡುತ್ತಾರಂತೆ. ಅಷ್ಟರ ಮಟ್ಟಿಗೆ ಪಾತ್ರ ಕಾಡಿದೆಯಂತೆ. ಅವರು ಮೊದಲ ಬಾರಿಗೆ 6 ಶೇಡ್‌ಗಳಿರುವ ವಿಭಿನ್ನ ಪಾತ್ರಗಳಲ್ಲಿಕಾಣಿಸಿಕೊಂಡಿರುವುದು ವಿಶೇಷವಂತೆ.
“ಮೌನಂ’ ಈಗ ಯು/ಎ ಪ್ರಮಾಣ ಪತ್ರ ಪಡೆದಿದ್ದು, ಫೆಬ್ರವರಿ ವೇಳೆಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಉಳಿದಂತೆ ಚಿತ್ರದಲ್ಲಿ ಬಾಲಾಜಿ ಶರ್ಮ, ಹನುಮಂತೇಗೌಡ, ರಿತೇಶ್, ಕೆಂಪೇಗೌಡ, ಗುಣವಂತ ಮಂಜು, ನಯನಾ (ಕಾಮಿಡಿ ಲಕಿಲಾಡಿಗಳು), ಸಿಂಚನಾ, ಮಂಜುಳಾ ರೆಡ್ಡಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಶಂಕರ್ ಛಾಯಾಗ್ರಹಣವಿದೆ. ಗುರುಮೂರ್ತಿ ಹೆಗಡೆ ಸಂಕಲನವಿದೆ. ಆರವ್ ರಿಶಿಕ್ ಸಂಗೀತ ನೀಡಿದ್ದಾರೆ. ಆಕಾಶ್ ಸಾಹಿತ್ಯ ಬರೆದರೆ, ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು ಸಾಹಸವಿದೆ.