ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ಫೆ.24ಕ್ಕೆ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಅಧಿಕಾರದ ಗದ್ದುಗೆಗೇರಲು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪೈಪೋಟಿ ಆರಂಭಿಸಿವೆ. ಮೈಸೂರಿನ ಪ್ರಥಮ ಪ್ರಜೆಯಾಗಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವ ಕುತೂಹಲ ಕೆರಳಿಸುವಂತೆ ಮಾಡಿವೆ. ಜ.17ರಂದು ಹಾಲಿ ಮೇಯರ್ ತಸ್ನಿಂ ಹಾಗೂ ಉಪ ಮೇಯರ್ ಶ್ರೀಧರ್ ಅವರ ಅಧಿಕಾರದ ಅವಧಿಯು ಅಂತ್ಯವಾಗಿದ್ದು, ಫೆ.24ರಂದು ನೂತನ ಮೇಯರ್ ಆಯ್ಕೆ ನಡೆಯಲಿದೆ. ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ ಡಾ.ಜಿ.ಸಿ.ಪ್ರಕಾಶ್ ಅವರು ಚುನಾವಣೆ ದಿನಾಂಕದ ಅಧಿಸೂಚನೆ ಹೊರಡಿಸಿದ್ದು, ಅಂದು ಬೆಳಗ್ಗೆ 11 ಗಂಟೆಗೆ ನಡೆಯುವ ವಿಶೇಷ ಸಭೆಯಲ್ಲಿ ಹಾಜರಿರುವಂತೆ ಸದಸ್ಯರಿಗೆ ಸಭಾಸೂಚನಾ ಪತ್ರಗಳನ್ನು ಕಳುಹಿಸಿದ್ದಾರೆ.
ಫೆ. 24ರಂದು ಬೆಳಗ್ಗೆ 8ರಿಂದ 10 ಗಂಟೆಯವರೆಗೆ ನಾಮಪತ್ರಗಳ ಸ್ವೀಕಾರ ನಡೆಯಲಿದೆ. ನಂತರ, 11 ಗಂಟೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ಹಾಗೂ ಉಪಮಹಾಪೌರ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ಎರಡು ಸ್ಥಾನಗಳಿಗೆ ಚುನಾವಣೆ ನಡೆಯುವ ಜತೆಗೆ ನಾಲ್ಕು ಸ್ಥಾಯಿಗಳ ತಲಾ ಏಳು ಸದಸ್ಯರ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಮೇಯರ್ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಹೊಂದಿರುವ ಸದಸ್ಯರಿಗೆ ಸಭಾಸೂಚನಾ ಪತ್ರಗಳನ್ನು ಕಳುಹಿಸಲಾಗಿದೆ.
ಪೈಪೋಟಿ ಜೋರು: ಮೇಯರ್ ಸ್ಥಾನಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಪಾಲಿಕೆಯಲ್ಲಿ 65 ಸದಸ್ಯರ ಪೈಕಿ 32 ಮಹಿಳಾ ಸದಸ್ಯರಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನ ಪುಷ್ಪಲತಾ ಜಗನ್ನಾಥ್,ಜೆಡಿಎಸ್‌ನ ತಸ್ನಿಂ ಮೇಯರ್ ಆಗಿದ್ದಾರೆ. ಉಳಿದ 30ಮಹಿಳಾ ಸದಸ್ಯರೂ ಮೇಯರ್ ಸ್ಥಾನಕ್ಕೆ ಅರ್ಹರು. ಸಾಮಾನ್ಯ ವರ್ಗದ ಮಹಿಳೆಗೆ ಈ ಸ್ಥಾನ ಮೀಸಲಾಗಿರುವುದರಿಂದ ಯಾವುದೇ ಸಮುದಾಯದಸದಸ್ಯೆ ಈ ಸ್ಥಾನಕ್ಕೆ ಏರಬಹುದಾಗಿದೆ. ಹೀಗಾಗಿ ಭಾರಿಪೈಪೋಟಿ ಕಂಡುಬಂದಿದೆ. ಉಪಮೇಯರ್ ಸ್ಥಾನ ಕೂಡ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಬಿರುಸಿನ ಸ್ಪರ್ಧೆ ಇದೆ. ಮೇಯರ್ ಸ್ಥಾನ ಮಹಿಳೆಯರಿಗೆ ನಿಗದಿಯಾಗಿರುವುದರಿಂದ ಉಪ ಮೇಯರ್ ಸ್ಥಾನ ಪುರುಷ ಸದಸ್ಯರಿಗೆ ದೊರೆಯಲಿದೆ. 3 ಪಕ್ಷಗಳಿಗೂ ಸ್ಪಷ್ಟ ಬಹುಮತವಿಲ್ಲ. ಸ್ವತಂತ್ರವಾಗಿ ಅಧಿಕಾರ ಹಿಡಿಯುವಷ್ಟು ಸಂಖ್ಯಾ ಬಲವೂ ಇಲ್ಲ. ಹೀಗಾಗಿ ಮೈತ್ರಿ ಅನಿವಾರ್ಯ ವಾಗಿದ್ದು, ಜೆಡಿಎಸ್ ಕಿಂಗ್ ಮೇಕರ್ ಆಗಿದೆ.
ಪಕ್ಷಗಳ ಬಲಾಬಲ :
65 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರರು ಇದ್ದಾರೆ. ಈ ಪೈಕಿ ಪಕ್ಷೇತರ ಸದಸ್ಯರಾಗಿ ಆಯ್ಕೆಗೊಂಡಶಮಿವುಲ್ಲಾ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಪಾಲಿಕೆಗೆಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸಹ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಸದಸ್ಯಬಲ ಒಟ್ಟು 75 ಇದ್ದು, ಈ ಪೈಕಿ ಬಿಜೆಪಿ 25, ಜೆಡಿಎಸ್ 23, ಕಾಂಗ್ರೆಸ್ 21, ಬಿಎಸ್‌ಪಿ 1 ಹಾಗೂ ಐವರು ಪಕ್ಷೇತರ ಸದಸ್ಯರು ಇದ್ದಾರೆ.