ಬೆಂಗಳೂರು: ಮೇಯರ್ ಜಿ. ಪದ್ಮಾವತಿಯವರು ಹಿರಿಯ ಅಧಿಕಾರಿ ಗಳೊಂದಿಗೆ ಮಂಗಳವಾರ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಿಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ದಯಾನಂದ ನಗರ , ಪ್ರಕಾಶ್ ನಗರ , ರಾಜಾಜಿನಗರ ಹಾಗೂ ಶಿವನಗರ ವಾರ್ಡ್ ಗಳಲ್ಲಿ ಪರಿಶೀಲನೆ ನಡೆಸಿದ ಅವರು, ನಗರೋತ್ಥಾನ ಅನುದಾನದಡಿ ಕೈಗೆತ್ತಿ ಕೊಂಡಿರುವ 24.5 ಕೋಟಿ ವೆಚ್ಚದ ಕಾಮಗಾರಿ ಗಳನ್ನು 2 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಈ ಸಂಬಂಧ ಪಾಲಿಕೆ ಆಯುಕ್ತರೊಂದಿಗೆ ವಿಶೇಷ ಸಭೆ ನಡೆಸಿದ ಮೇಯರ್, ಈಗಾಗಲೇ ಪ್ರಾರಂಭವಾಗಿರುವ ಕಾಮಗಾರಿಗಳನ್ನು ಶೀಘ್ರವೇ ಮುಗಿಸಲು ತಿಳಿಸಿದರು. ಕಾಮಗಾರಿ ಪೂರ್ಣಗೊಳ್ಳದೇ ಇದ್ದರೆ ಎಂಜಿನಿಯರ್‌ಗಳನ್ನೇ ನೇರ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಹಿಂದಿನ ವರ್ಷ ಪ್ರಾರಂಭಗೊಂಡಿರುವ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಲು ಸೂಚಿಸಿದರು. ಪ್ರಾರಂಭಿಸಿದೇ ಇರುವ ಕಾಮಗಾರಿಗಳ ಡಿಪಿಆರ್ ತಯಾರಿಸಲು ತಾಕೀತು ಮಾಡಿದರು. ಪ್ರಸ್ತಕ ಸಾಲಿನ ಕಾಮಗಾರಿಗಳು 43 ಪ್ಯಾಕೇಜ್‌ಗಳಲ್ಲಿದ್ದು, ಅದರ ಒಟ್ಟು ಮೊತ್ತ 585 ಕೋಟಿಯಾಗಿದೆ.
ಅವುಗಳನ್ನು ಶೀಘ್ರವಾಗಿ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಎಲ್ಲ ಕಾಮಗಾರಿಗಳಿಗೆ ಡಿಪಿಆರ್ ಸಿದ್ಧಪಡಿಸಿ 15 ದಿನದೊಳಗೆ ಕಾಮಗಾರಿಗೆ ಚಾಲನೆ ನೀಡಬೇಕು ಎಂದು ಸೂಚಿಸಿದರು.