ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನುಮುಂದೆ ಪ್ರತಿ ದಿನ ಎರಡು ಗಂಟೆ ಬಿಬಿಎಂಪಿಯ ಎಂಟು ವಲಯದ ಜಂಟಿಆಯುಕ್ತರು, ಮುಖ್ಯ ಎಂಜಿನಿಯರ್ ಹಾಗೂ ಎಲ್ಲ ಇಲಾಖೆಯ ಮುಖ್ಯಸ್ಥರು ಪ್ರತಿದಿನ ತಮ್ಮ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಪರಿಶೀಲನೆ ನಡೆಸಬೇಕು ಎಂದು ಮೇಯರ್ ಗೌತಮ್ ಕುಮಾರ್ ಸೂಚನೆ ನೀಡಿದ್ದಾರೆ.
ಭಾನುವಾರ ಅನಿರೀಕ್ಷಿತವಾಗಿ ಪಶ್ಚಿಮ ವಲಯದ ಸಂಪಿಗೆ ರಸ್ತೆ, ಶ್ರೀರಾಮಪುರ ಸೇರಿದಂತೆ ವಿವಿಧ ರಸ್ತೆಗಳಲ್ಲಿ ರಸ್ತೆ ಗುಂಡಿ ತಪಾಸಣೆ ನಡೆಸಿದ ಅವರು, ರಸ್ತೆ ಬದಿಯಲ್ಲಿನ ತ್ಯಾಜ್ಯ ಹಾಗೂ ರಸ್ತೆ ಗುಂಡಿಗಳನ್ನು ನೋಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಮುಂದಿನ ಶುಕ್ರವಾರದೊಳಗೆ ಪಶ್ಚಿಮ ವಲಯದ ಎಲ್ಲ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಬೇಕು ಎಂದು ವಲಯದ ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಜತೆಗೆ ಪಾಲಿಕೆಯ ಎಂಟು ವಲಯದ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ ಹಾಗೂ ಕಾರ್ಯಪಾಲಕ ಎಂಜಿನಿಯರ್ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ವಲಯದ ರಸ್ತೆಗಳಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸಿ ಪರಿಶೀಲನೆ ನಡೆಸಬೇಕು ಎಂದು ಆದೇಶಿಸಿಲಾಗಿದೆ ಎಂದು ಹೇಳಿದರು.
ಸರ್ಮಪಕವಾಗಿ ರಸ್ತೆ ನಿರ್ವಹಣೆ ಮಾಡದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ ಪಾಲಿಕೆ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದರು.
ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಪಶ್ಚಿಮ ವಲಯದಲ್ಲಿ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸಂಪಿಗೆ ರಸ್ತೆ, ಸವಿತ ಚಿತ್ರಮಂದಿರ ರಸ್ತೆ, ಶ್ರೀರಾಮಪುರ ರೈಲ್ವೆ ಅಂಡರ್ ಪಾಸ್ ಸೇರಿದಂತೆ ವಿವಿಧ ರಸ್ತೆ ತಪಾಸಣೆ ಮಾಡಲಾಗಿದೆ. ಇದೇ ರೀತಿ ಬೇರೆ ಬೇರೆ ವಲಯಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.