ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಕುರಿತು ನಗರ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸೋಮವಾರ ಈ ಕುರಿತು ಸಭೆ ನಡೆಸಿದ ಅವರು, ಸೆ.28ರಂದು ಮೇಯರ್ ಹಾಗೂ ಉಪಮೇಯರ್ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಏನೆಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದಿದ್ದಾರೆ. ನಿಗದಿತ ಅವಧಿಯಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಿರುವ ಪಾಲಿಕೆ ಸದಸ್ಯರು, ಶಾಸಕರು, ಸಂಸದರಿಗೆ ಚುನಾವಣೆ ಸಭೆಯ ಸೂಚನಾ ಪತ್ರ ಕಳುಹಿಸುವಂತೆ ತಿಳಿಸಿದ್ದಾರೆ.
ಚುನಾವಣಾ ಸಭೆಯ ದಿನದಂದು ಸಭಾಂಗಣದಲ್ಲಿ ವಿದ್ಯುತ್ ವ್ಯವಸ್ಥೆ, ಸಿಬ್ಬಂದಿ ನೇಮಕದ ಕುರಿತು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿರುವ ಅವರು, ಚುನಾವಣೆಯ ದಿನ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ಪಡೆ, ಆ್ಯಂಬುಲೆನ್ಸ್, ಆರೋಗ್ಯ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಚುನಾವಣೆಯ ದಿನ ಕೆಂಪೇಗೌಡ ಪೌರಸಭಾಂಗಣಕ್ಕೆ ನಿಗದಿತ ವೇಳೆಗೆ ಆಗಮಿಸಿದವರಿಗೆ ಮಾತ್ರ ಅವಕಾಶ ನೀಡುವಂತೆ ಮತ್ತು ಮತದಾರರನ್ನು ಹೊರತುಪಡಿಸಿ ಅಂಗ ರಕ್ಷಕರು ಅಥವಾ ಬೆಂಬಲಿಗರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡದಂತೆ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್, ಬಿಬಿಎಂಪಿಯ ವಿಶೇಷ ಆಯುಕ್ತೆ (ಆಡಳಿತ) ಸಾವಿತ್ರಿ, ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಕೆ.ಆರ್.ಪಲ್ಲವಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ನೋಡಲ್ ಅಧಿಕಾರಿ ನೇಮಕ: ಚುನಾವಣೆ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ಹಾಗೂ ಶಾಸಕರು ಸೇರಿ ಒಟ್ಟು 266 ಮತದಾರರಿದ್ದು, ಅವರನ್ನು ಗುರುತಿಸಿ ಹಾಜರಾತಿ ಪಡೆಯಲು ಒಬ್ಬ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡುವಂತೆ ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.