Advertisement
ಮಳೆಯಿಂದಾಗಿ ಯಾವುದೇ ಸಾವು-ನೋವುಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಮಳೆಯ ಅನಾಹುತಗಳ ತಡೆಗೆ ಪಾಲಿಕೆಯನ್ನು ಸಿದ್ಧಗೊಳಿಸುವುದು ಅವರ ಮುಂದಿರುವ ಪ್ರಮುಖ ಸವಾಲಾಗಿದೆ. ಇದರೊಂದಿಗೆ ಬಿಬಿಎಂಪಿ ಆಡಳಿತ ವೈಖರಿ ವಿರುದ್ಧ ತೀವ್ರ ಗರಂ ಆಗಿರುವ ಹೈಕೋರ್ಟ್‌ನ ಸೂಚನೆಗಳನ್ನು ಸಮರ್ಪಕವಾಗಿ ಪಾಲಿಸುವ ಬಹುದೊಡ್ಡ ಸವಾಲು ಅವರ ಮುಂದಿದೆ.
Related Articles
ರಾಜಕಾಲುವೆ ಒತ್ತುವರಿ ತೆರವು: ರಾಜಕಾಲುವೆ ಒತ್ತುವರಿ ತೆರವು ವಿಚಾರದಲ್ಲಿ ಬಿಬಿಎಂಪಿ ಹಲವಾರು ಗೊಂದಲಗಳನ್ನು ಸೃಷ್ಟಿಸಿದೆ. ಮೊದಲಿಗೆ ಸಾಮಾನ್ಯ ಜನರ ಮನೆಗಳನ್ನು ತೆರವು ಮಾಡಿದ ಪಾಲಿಕೆ, ಪ್ರಭಾವಿಗಳ ಒತ್ತುವರಿ ತೆರವಿಗೆ ಹಿಂದೇಟು ಹಾಕುತ್ತಿದೆ ಎಂಬ ಆರೋಪವಿದೆ. ಅದರಿಂದ ಮುಕ್ತವಾಗಬೇಕಾದರೆ ಮತ್ತೆ ಕಾರ್ಯಾಚರಣೆ ಆರಂಭಿಸಿ ಪ್ರಭಾವಿಗಳ ಒತ್ತುವರಿಯನ್ನು ತೆರವುಗೊಳಿಸುವ ಮೂಲಕ ಮಳೆ ಅನಾಹುತಗಳನ್ನು ತಡೆಯಬೇಕಿದೆ.
Advertisement
ಸಮಗ್ರ ಅಭಿವೃದ್ಧಿ ಆದ್ಯತೆಯಾಗಬೇಕು: ನಗರದ ಪ್ರತಿಷ್ಠಿತ ಜಯನಗರ ವಾರ್ಡ್‌ನಿಂದ ಪಾಲಿಕೆಗೆ ಆಯ್ಕೆಯಾಗಿರುವ ಗಂಗಾಂಬಿಕೆಯವರು ಕೇಂದ್ರ ಭಾಗದ ವಾರ್ಡ್‌ಗಳ ಜತೆ ಜತೆಗೆ, ಕೊಳೆಗೇರಿಗಳು ಹೆಚ್ಚಿರುವ ಹಾಗೂ ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿರುವ ವಾರ್ಡ್‌ಗಳ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡುವ ಮೂಲಕ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಿದೆ.
ಅವಧಿ ಅರಿವು ಕೆಲಸ ಮಾಡಬೇಕಿದೆ: ಬಿಬಿಎಂಪಿ ಮೇಯರ್ ಅವಧಿ ಒಂದು ವರ್ಷವಾಗಿರುವುದರಿಂದ ಒಂದು ವರ್ಷದಲ್ಲಿ ಅನುಷ್ಠಾನವಾಗುವ ಯೋಜನೆಗಳಿಗೆ ಮುಂದಾಗಬೇಕಿದೆ. ಜತೆಗೆ ಹಿಂದಿನ ಅವಧಿಯಲ್ಲಿ ಘೋಷಣೆ ಮಾಡಲಾಗಿರುವ ಯೋಜನೆಗಳನು ಮುಂದುವರಿಸುವ ಮೂಲಕ ಸಂಪೂರ್ಣವಾಗಿ ಯೋಜನೆಗಳು ಫಲಾನುಭವಿಗಳಿಗೆ ತಲುಪುವಂತೆ ಮಾಡಬೇಕಿದೆ. ಅದರಲ್ಲಿಯೂ ಪ್ರಮುಖವಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಶೀಘ್ರ ಜನರಿಗೆ ತಲುಪಿಸಲು ಕ್ರಮಕೈಗೊಳ್ಳಬೇಕಿದೆ.
ಆರ್ಥಿಕ ಪರಿಸ್ಥಿತಿ ವೃದ್ಧಿಗೊಳಿಸಬೇಕು: ನಗರದಲ್ಲಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕಾದರೆ ಸರ್ಕಾರದ ಅನುದಾನಕ್ಕೆ ಕಾಯುವಂತಹ ಪರಿಸ್ಥಿತಿಯಿದೆ. ಹೀಗಾಗಿ ಆಸ್ತಿ ತೆರಿಗೆ ಸಂಗ್ರಹ, ಜಾಹೀರಾತು ಅಕ್ರಮ ತಡೆ, ಓಎಫ್ಸಿ, ಉದ್ದಿಮೆ ಪರವಾನಗಿಗಳಲ್ಲಿನ ಸೋರಿಕೆ ತಡೆಗೆ ಕ್ರಮಕೈಗೊಂಡು ಹೆಚ್ಚಿನ ಆದಾಯ ತರುವ ಮೂಲಕ ಬಿಬಿಎಂಪಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಅಗತ್ಯವಿದೆ.
ಬಿಜೆಪಿಯನ್ನು ಸಮರ್ಥವಾಗಿ ಎದುರಿಸಬೇಕಿದೆ: ಕಳೆದ ಮೂರು ವರ್ಷಗಳಿಂದ ಪಾಲಿಕೆಯಲ್ಲಿ ಮೈತ್ರಿ ಆಡಳಿತದ ವಿರುದ್ಧ ಪ್ರತಿಯೊಂದಕ್ಕೂ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಹಾಗೂ ಸಭಾತ್ಯಾಗಕ್ಕೆ ಮುಂದಾಗುತ್ತಿದ್ದಾರೆ. ಪ್ರಮುಖವಾಗಿ ಕೌನ್ಸಿಲ್ ಸಭೆಗಳಲ್ಲಿ ಧರಣಿ ಮಾಡುವ ಮೂಲಕ ಯಾವುದೇ ಪ್ರಮುಖ ನಿರ್ಣಯ ಅಡ್ಡಿಪಡಿಸುವುದು ನಡೆಯುತ್ತಿದೆ. ಈ ಬಾರಿಯೂ ಅಧಿಕಾರದಿಂದ ದೂರ ಉಳಿದ ಪರಿಣಾಮ ಬಿಜೆಪಿ ಮತ್ತೆ ಪ್ರತಿಭಟನೆಯ ಹಾದಿ ಹಿಡಿಯಲಿದ್ದು, ಅದನ್ನು ಸಮಪರ್ಥವಾಗಿ ಎದುರಿಸಿ ಆಡಳಿತ ನಡೆಸುವ ಅನಿವಾರ್ಯತೆಯಿದೆ.
ಚುನಾವಣೆಗೆ ಸಿದ್ಧರಾಗಬೇಕಿದೆ: ಇಂದಿರಾ ಕ್ಯಾಂಟೀನ್, ಪೌರಕಾರ್ಮಿಕರಿಗೆ ಬಿಸಿಯೂಟ, ನೇರ ವೇತನದಂತಹ ಯೋಜನೆಗಳಿಂದ ಬೆಂಗಳೂರಿನಲ್ಲಿ ಪಕ್ಷದ ವರ್ಚಸ್ಸು ಹೆಚ್ಚಾಗಿದ್ದು, ವಿಧಾನಸಭಾ ಚುನಾವಣೆಯ ಮೂರು ಸ್ಥಾನಗಳು ಹೆಚ್ಚಾಗಿವೆ. ಹೀಗಾಗಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವಂತಹ ಯೋಜನೆಗಳನ್ನು ಜಾರಿಗೊಳಿಸುವುದು ಅನಿವಾರ್ಯವಾಗಿದೆ. ವಿರೋಧ ಪಕ್ಷದಿಂದ ಎದುರಾಗುವ ಟೀಕೆಗಳನ್ನು ಎದುರಿಸಿ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಜನರನ್ನು ತಮ್ಮತ್ತ ಸೆಳೆಯುವಂತೆ ಮಾಡುವ ಮಹತ್ತರ ಜವಾಬ್ದಾರಿ ಗಂಗಾಂಬಿಕೆ ಅವರ ಮೇಲಿದೆ.
ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಿ: ಘನತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಹೈಕೋರ್ಟ್ ಸೂಚನೆ ನೀಡುವ ಮೊದಲೇ ಮೇಯರ್ ಗಂಗಾಂಬಿಕೆ ಅವರು ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ನಿರ್ಗಮಿತ ಮೇಯರ್ ಆರ್.ಸಂಪತ್‌ರಾಜ್ ಸಲಹೆ ನೀಡಿದ್ದಾರೆ.
ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಅವರು, ಮುಂದೆ ನಗರದಲ್ಲಿ ಸೃಷ್ಟಿಯಾಗಲಿರುವ ತ್ಯಾಜ್ಯ ಸಮಸ್ಯೆಗೆ ಆದ್ಯತೆಯ ಮೇಲೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಮುಂದುವರಿಸುವ ಜತೆಗೆ, ಒಂದು ವರ್ಷದ ಅವಧಿಯಲ್ಲಿ ಜನರಿಗೆ ತಲುಪಿಸಬಹುದಾದ ಯೋಜನೆಗಳನ್ನು ಅನುಷ್ಠಾನಗೊಳಿಸಲಿ ಎಂದು ಸಲಹೆ ನೀಡಿದರು.
* ವೆಂ.ಸುನೀಲ್‌ಕುಮಾರ್