ಬೆಂಗಳೂರು: ನಾಡಪ್ರಭು ಕೇಂಪೇಗೌಡರ ಇತಿಹಾಸ ಹಾಗೂ ಸಾಧನೆ ಸಾರುವ ನಿಟ್ಟಿನಲ್ಲಿ ನಗರ ಮೆಯೋಹಾಲ್‌ನಲ್ಲಿ ನಿರ್ಮಾಣವಾಗುತ್ತಿರುವ ವಸ್ತು ಸಂಗ್ರಹಾಲಯದ ಡಿಜಿಟಲೀಕರಣಕ್ಕೆ ಮಹಾನಗರ ಪಾಲಿಕೆ ವತಿಯಿಂದ 7.5 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಬಿಬಿಎಂಪಿ ಮೇಯರ್ ಸಂಪತ್‌ರಾಜ್ ಭರವಸೆ ನೀಡಿದ್ದಾರೆ.
ಬುಧವಾರ ನಡೆಯಲಿರುವ ಕೆಂಪೇಗೌಡರ ದಿನಾಚರಣೆ ಪ್ರಯುಕ್ತ ಮಂಗಳವಾರ ಮೆಯೋಹಾಲ್‌ಗೆ ಭೇಟಿ ನೀಡಿ ವಸ್ತು ಸಂಗ್ರಹಾಲಯ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ವಸ್ತು ಸಂಗ್ರಹಾಲಯಕ್ಕೆ ಡಿಜಿಟಲ್ ರೂಪ ನೀಡಿ ಮೇಲ್ದರ್ಜೆಗೇರಿಸಲು ಈಗಾಗಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು. ಮುಂದಿನ ನಾಲ್ಕು ತಿಂಗಳೊಳಗೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ವಸ್ತು ಸಂಗ್ರಹಾಲಯದ ಮೊದಲ ಮಹಡಿಯಲ್ಲಿ ಕೆಂಪೇಗೌಡರ ಸಾಧನೆ ತಿಳಿಸುವ ಡಿಜಿಟಲ್ ಲೈಟಿಂಗ್ ಮೂಲಕ 20 ನಿಮಿಷಗಳ ವಿಡಿಯೋ ಚಿತ್ರ, 3ಡಿ ಮಾದರಿಯಲ್ಲಿ ಕೆಂಪೇಗೌಡ ಹಾಗೂ ಅವರ ವಂಶಸ್ಥರಿಗೆ ಸೇರಿದ ವಸ್ತುಗಳನ್ನು ವಿವಿಧ ಕಡೆಗಳಿಂದ ಸಂಗ್ರಹಿಸಿ ಪ್ರರ್ದಶಿಸಲಾಗುತ್ತದೆ ಎಂದರು.
ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಮಾಗಡಿ, ನೆಲಮಂಗಲ, ದೊಡ್ಡಬಳ್ಳಾಪುರ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಕೆಂಪೇಗೌಡರಿಗೆ ಸಂಬಂಧಿಸಿದ ವಸ್ತುಗಳನ್ನು ಸಂಗ್ರಹಿಸುವ ಕೆಲಸ ಆಗಬೇಕು. ಸಂಗ್ರಹಾಲಯಕ್ಕೆ ಬರುವ ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ಕೆಂಪೇಗೌಡರ ಸಾಧನೆಗಳ ಬಗ್ಗೆ ಮಾಹಿತಿ ನೀಡಲು ತರಬೇತಿ ಪಡೆದ ಮಾರ್ಗದರ್ಶಕರನ್ನು ನೇಮಕ ಮಾಡಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಮಾತನಾಡಿ, ಸಂಗ್ರಹಾಲಯದ ನಿರ್ವಹಣೆಗೆ ಪುರಾತತ್ವ ಇಲಾಖೆಯಿಂದ ಅಧಿಕಾರಿಗಳನ್ನು ನಿಯೋಜಿಸಬೇಕು. ಸಂಗ್ರಹಾಲಯ ಡಿಜಿಟಲ್ ರೂಪ ಪಡೆದ ನಂತರ ಅಲ್ಲಿ ಕೆಫೆಟೇರಿಯಾ ನಿರ್ಮಿಸಿ, ಕೆಂಪೇಗೌಡರ ಕಾಲದಲ್ಲಿ ಬಳಸುತ್ತಿದ್ದ ಆಹಾರ ಪದ್ಧತಿಯನ್ನು ಪರಿಚಯಿಸಬೇಕು ಎಂದು ಸಲಹೆ ನೀಡಿದರು.
ಸಂಗ್ರಹಾಲಯ ಒಳ-ಹೊರ ಭಾಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ ಹಾಗೂ ಭದ್ರತಾ ಸಿಬ್ಬಂದಿ ನೇಮಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇದೇ ವೇಳೆ ಸಮಿತಿಯ ಸದಸ್ಯ ಮರಿಮಲ್ಲಪ್ಪ ಅವರು 17ನೇ ಶತಮಾನದ ಹಳೆಯ 973 ಗ್ರಾಂ ತೂಕದ ತಾಮ್ರದ ಶಾಸನವನ್ನು ಪ್ರದರ್ಶಿದರು. ಈ ವೇಳೆ ಉಪಮೇಯರ್ ಪದ್ಮಾವತಿ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಸಂಗಹ್ರಾಲಯ ವಸ್ತು ವಿನ್ಯಾಸಗಾರ ಸೂರ್ಯ ಪ್ರಕಾಶ್ ಉಪಸ್ಥಿತರಿದ್ದರು.