Advertisement

ಮೂರು ತಿಂಗಳು ಮೊದಲೇ ಮೇಯರ್‌ ಚುನಾವಣೆ

01:19 AM Jun 04, 2019 | Team Udayavani |

ಬೆಂಗಳೂರು: ಮೇಯರ್‌ ಮತ್ತು ಉಪಮೇಯರ್‌ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಂತೆಯೇ ಈ ಬಾರಿ ಪಾಲಿಕೆ ಅಧಿಕಾರ ಚುಕ್ಕಣಿ ಹಿಡಿಯುವ ಕುರಿತು ಕಾಂಗ್ರೆಸ್‌ ಮತ್ತು ಬಿಜೆಪಿ ಪಾಳಯದಲ್ಲಿ ಲೆಕ್ಕಾಚಾರ ಆರಂಭವಾಗಿದೆ.

Advertisement

ಕೆಲ ದಿನಗಳ ಹಿಂದೆ ನಡೆದ ಲೋಕಸಭಾ ಚುನಾವಣೆ ಹಾಗೂ ವಾರ್ಡ್‌ನ ಉಪಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೆ ಹಿನ್ನಡೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವೀರಪ್ಪಮೊಯ್ಲಿ ಸೋತು ಬಿಜೆಪಿಯ ಬಚ್ಚೇಗೌಡ ಗೆಲುವು ಸಾಧಿಸಿದ್ದಾರೆ. ಇನ್ನು ಬಿಬಿಎಂಪಿ ವಾರ್ಡ್‌ ಉಪಚುನಾವಣೆಯಲ್ಲಿ ಕಾವೇರಿಪುರ ವಾರ್ಡ್‌ ಬಿಜೆಪಿ ಪಾಲಾಗಿದೆ.

ಹೀಗಾಗಿ, ಬಿಬಿಎಂಪಿ ವಿರೋಧ ಪಕ್ಷ ಬಿಜೆಪಿಯ ಸಂಖ್ಯಾಬಲ ಒಂದಂಕಿ ಹೆಚ್ಚಾಗಿದ್ದು, ಕಾಂಗ್ರೆಸ್‌ ಬಲ ಒಂದಂಕಿ ಕುಗ್ಗಿದೆ. ಪ್ರಸ್ತುತ ಮೇಯರ್‌ ಮತ್ತು ಉಪಮೇಯರ್‌ ಮತದಾರರ ಪಟ್ಟಿಯಲ್ಲಿ 262 ಮಂದಿ ಮತದಾರರಿದ್ದು, 132 ಮ್ಯಾಜಿಕ್‌ ಸಂಖ್ಯೆಯಾಗಿದೆ. ಸದ್ಯ ಬಿಜೆಪಿಯಲ್ಲಿ ಬಿಬಿಎಂಪಿ ಸದಸ್ಯರು, ಶಾಸಕರು, ಸಂಸದರು, ವಿಧಾನಪರಿಷತ್‌ ಸದಸ್ಯರು ಸೇರಿ 125 ಮತದಾರರಿದ್ದಾರೆ.

ಇನ್ನು ಉಳಿದ 7 ಮತಗಳು ಹೊಂದಿಸಲು ಬಿಜೆಪಿ ಪಾಳಯದಲ್ಲಿ ತಂತ್ರಗಾರಿಕೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಆಪರೇಷನ್‌ ಕಮಲ ನಡೆಸಲು ಹಾಗೂ ಚುನಾವಣೆ ದಿನ ಸದಸ್ಯ ಮತದಾರರನ್ನು ಗೈರಾಗುವಂತೆ ಮಾಡಲು ಎಲ್ಲ ತಂತ್ರವನ್ನು ಹೆಣೆಯುತ್ತಿದೆ.

ಈಗಾಗಲೇ ಜೆಡಿಎಸ್‌ ಮಂಜುಳಾ ನಾರಾಯಣಸ್ವಾಮಿ ಮತ್ತು ದೇವದಾಸ್‌ ನೇರವಾಗಿ ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದು, ಮುಂದಿನ ಮೇಯರ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಬಹುದು. ಅದೇ ರೀತಿ ಉಳಿದ ಅತೃಪ್ತ ಮೈತ್ರಿ ಸದಸ್ಯರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ.

Advertisement

ಈ ಬಾರಿಯು ಮೇಯರ್‌, ಉಪಮೇಯರ್‌ ಚುನಾವಣೆಯಲ್ಲಿ ಪಕ್ಷೇತರ ಸದಸ್ಯರು ಪ್ರಮುಖ ಪಾತ್ರವಹಿಸಲಿದ್ದು, ಸದ್ಯ ಇರುವ ಏಳು ಮಂದಿ ಪಕ್ಷೇತರರಲ್ಲಿ ಐದು ಸದಸ್ಯರು ಮೈತ್ರಿ ಅಭ್ಯರ್ಥಿಗಳಿಗೆ ಉಳಿದ ಇಬ್ಬರು ಬಿಜೆಪಿಗೆ ಬೆಂಬಲ ಸೂಚಿಸಬಹುದು. ಇನ್ನು ಮೈತ್ರಿ ಜತೆಗಿರುವ ಐದು ಮಂದಿ ಪಕ್ಷೇತರರನ್ನು ಸೆಳೆಯಲು ಬಿಜೆಪಿ ತಂತ್ರಗಾರಿಕೆ ರೂಪಿಸುತ್ತಿದೆ.

ಬಿಜೆಪಿ ಕುತಂತ್ರದಿಂದ ಅಧಿಕಾರ ಹಿಡಿಯಲು ಎಷ್ಟೇ ಪ್ರಯತ್ನ ಪಟ್ಟರೂ ಕೂಡಾ ಕಳೆದ ನಾಲ್ಕು ಬಾರಿಯಂತೆ ಈ ಬಾರಿಯೂ ಬಿಬಿಎಂಪಿಯಲ್ಲಿ ಮೈತ್ರಿ ಅಭ್ಯರ್ಥಿಗಳೇ ಮತ್ತೂಮ್ಮೆ ಮೇಯರ್‌ ಮತ್ತು ಉಪಮೇಯರ್‌ ಆಗಲಿದ್ದಾರೆ.
-ಎಂ.ಶಿವರಾಜು, ಆಡಳಿತ ಪಕ್ಷದ ಮಾಜಿ ನಾಯಕ

ಒಟ್ಟು ಮತದಾರರು: 262
ಮ್ಯಾಜಿಕ್‌ ಸಂಖ್ಯೆ: 132

ಮತದಾರರ ಲೆಕ್ಕಾಚಾರ
ಕಾಂಗ್ರೆಸ್‌
ಬಿಬಿಎಂಪಿ ಸದಸ್ಯರು: 76
ಲೋಕಸಭಾ ಸದಸ್ಯ: 01
ರಾಜ್ಯಸಭಾ ಸದಸ್ಯರು: 06
ಶಾಸಕರು: 15
ವಿಧಾನಪರಿಷತ್‌ ಸದಸ್ಯರು: 10
ಒಟ್ಟು: 108

ಜೆಡಿಎಸ್‌
ಬಿಬಿಎಂಪಿ ಸದಸ್ಯರು: 14
ಲೋಕಸಭಾ ಸದಸ್ಯ: 00
ರಾಜ್ಯಸಭಾ ಸದಸ್ಯರು: 01
ಶಾಸಕರು: 02
ವಿಧಾನಪರಿಷತ್‌ ಸದಸ್ಯರು: 05
ಒಟ್ಟು: 22

ಬಿಜೆಪಿ
ಬಿಬಿಎಂಪಿ ಸದಸ್ಯರು: 101
ಲೋಕಸಭಾ ಸದಸ್ಯ: 04
ರಾಜ್ಯಸಭಾ ಸದಸ್ಯರು: 02
ಶಾಸಕರು: 11
ವಿಧಾನಪರಿಷತ್‌ ಸದಸ್ಯರು: 07
ಒಟ್ಟು: 125

ಪಕ್ಷೇತರರು
ಬಿಬಿಎಂಪಿ ಸದಸ್ಯರು: 07
ಒಟ್ಟು: 07

Advertisement

Udayavani is now on Telegram. Click here to join our channel and stay updated with the latest news.

Next