ಮುಂಬಯಿ: ಜಾಗತಿಕ ಷೇರುಮಾರುಕಟ್ಟೆಯಲ್ಲಿನ ನೀರಸ ವಹಿವಾಟು, ಡೆಲ್ಟಾಗಿಂತ ಅಪಾಯಕಾರಿಯಾದ ಬೋಟ್ಸ್ ವಾನಾ ವೈರಸ್ ಪತ್ತೆಯಾದ ಪರಿಣಾಮ ಶುಕ್ರವಾರ(ನವೆಂಬರ್ 26) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಪಾತಾಳಕ್ಕೆ ಕುಸಿಯುವ ಮೂಲಕ ಹೂಡಿಕೆದಾರರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಮಗ ಕಾಲೇಜಿಗೆ ಹೋದ ವೇಳೆ ಸೊಸೆ ಮೇಲೆ ಅತ್ಯಾಚಾರ ಎಸಗಿದ ಮಾವ: ಕೊಲೆ ಬೆದರಿಕೆ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 1,687.94 ಅಂಕ ಇಳಿಕೆಯಾಗಿದ್ದು, 57,107.15 ಅಂಕಗಳಲ್ಲಿ ಭಾರೀ ನಷ್ಟದೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಎನ್ ಎಸ್ ಇ ನಿಫ್ಟಿ ಕೂಡಾ 509.80 ಅಂಕ ಕುಸಿತಗೊಂಡಿದ್ದು, 17,026.50 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ.
ಜೆಎಸ್ ಡಬ್ಲ್ಯು ಸ್ಟೀಲ್, ಹಿಂಡಲ್ಕೋ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಅದಾನಿ ಪೋರ್ಟ್ಸ್ ಷೇರುಗಳು ನಷ್ಟ ಕಂಡಿವೆ. ಮತ್ತೊಂದೆಡೆ ಸಿಪ್ಲಾ, ಡಾ.ರೆಡ್ಡೀಸ್ ಲ್ಯಾಬ್, ನೆಸ್ಲೆ ಮತ್ತು ಟಿಸಿಎಸ್ ಷೇರುಗಳು ಲಾಭಗಳಿಸಿದೆ.
ಇಂದು ಬೆಳಗ್ಗೆ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಆರಂಭಿಕ ಹಂತದಲ್ಲಿಯೇ 1,408.29 ಅಂಕ ಕುಸಿತಗೊಂಡಿದ್ದು, 57,315 ಅಂಕಗಳೊಂದಿಗೆ ವಹಿವಾಟು ಆರಂಭಿಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 426 ಅಂಕಗಳಷ್ಟು ಇಳಿಕೆಯಾಗಿದ್ದು, 17,110 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು.