Advertisement

ಸಿನಿಮಾ ಕನಸಿನ ರವೀಂದ್ರ ರಾವ್‌: ಸಂಕಲನದಿಂದ ನಿರ್ಮಾಣದತ್ತ

05:01 PM Aug 06, 2023 | Team Udayavani |

ಎಲ್ಲರನ್ನು ಕೈ ಬೀಸಿ ಕರೆಯುವ ಕ್ಷೇತ್ರವೊಂದಿದ್ದರೆ ಅದು ಸಿನಿಮಾ ರಂಗ. ಇಲ್ಲಿ ಬೇರೆ ಬೇರೆ ಕ್ಷೇತ್ರದವರು ಬಂದು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಎಂ.ಎನ್‌.ರವೀಂದ್ರ ರಾವ್‌ ಕೂಡಾ ಸೇರಿದ್ದಾರೆ.

Advertisement

ಬೆಂಗಳೂರು ದೂರದರ್ಶನ ವಿಭಾಗದಲ್ಲಿ ಸುಮಾರು 30 ವರ್ಷಕ್ಕೂ ಹೆಚ್ಚು ಕಾಲ ಸಂಕಲನಕಾರರಾಗಿ, ಹಲವು ಧಾರಾವಾಹಿಗಳನ್ನು, ಸಂಗೀತ, ನೃತ್ಯ, ಯಕ್ಷಗಾನ,ದಿವ್ಯದರ್ಶನ, ಕ್ರೀಡೆ, ಸಾಕ್ಷ್ಯಚಿತ್ರ, ಚಿತ್ರಮಂಜರಿ, ಚಲನಚಿತ್ರ, ಬೆಳಕು, ತಟ್ಟಂತೇಳಿ…

ಹೀಗೆ ಹಲವು ಕಾರ್ಯಕ್ರಮಗಳ ವಿಡಿಯೋಗಳನ್ನು ಎಡಿಟ್‌ ಮಾಡಿದ ಅನುಭವವಿರುವ ರವೀಂದ್ರ ರಾವ್‌ ಈಗ ನಿವೃತ್ತರಾಗಿದ್ದಾರೆ. ಹಾಗಂತ ಅವರು ಸುಮ್ಮನೆ ಕುಳಿತಿಲ್ಲ. ತಮ್ಮ ಆಸಕ್ತಿಯ ಕ್ಷೇತ್ರವಾದ ಸಿನಿಮಾಕ್ಕೆ ಬಂದಿದ್ದಾರೆ. ಅದು ನಿರ್ಮಾಪಕರಾಗಿ. ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸಬೇಕೆಂಬ ಉದ್ದೇಶದಿಂದ ಬಂದಿರುವ ರವೀಂದ್ರ ರಾವ್‌ ಈಗಾಗಲೇ “ಮಾಯೆ ಅಂಡ್‌ ಕಂಪೆನಿ’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಚಿತ್ರೀಕರಣ ಪೂರೈಸಿ, ಬಿಡುಗಡೆಯ ಹಂತಕ್ಕೆ ಬಂದಿರುವ ಈ ಚಿತ್ರವನ್ನು ಸಂದೀಪ್‌ ಕುಮಾರ್‌ ನಿರ್ದೇಶಿಸಿದ್ದಾರೆ. “ಮಾತೃಶ್ರೀ ವಿಷನ್‌’ ಎಂಬ ಬ್ಯಾನರ್‌ ಹುಟ್ಟುಹಾಕಿರುವ ರವೀಂದ್ರ ರಾವ್‌ ಅವರಿಗೆ ಮುಂದಿನ ದಿನಗಳಲ್ಲಿ ಆ ಬ್ಯಾನರ್‌ನಡಿ ವಿಭಿನ್ನ ಸಿನಿಮಾಗಳನ್ನು ನಿರ್ಮಿಸುವ ಕನಸಿದೆ.

“ಮಾಯೆ ಅಂಡ್‌ ಕಂಪೆನಿ’ ಸಿನಿಮಾಕ್ಕೂ ಮೊದಲು “ಎವಿಡೆನ್ಸ್‌’ ಎಂಬ ಸಿನಿಮಾಕ್ಕೆ ರವೀಂದ್ರ ರಾವ್‌ ಅವರು ಸಹನಿರ್ಮಾಪಕರಾಗಿದ್ದರು. ಇನ್ನು, ಉಮಾ ಚಿತ್ರಮಂದಿರಲ್ಲಿ ತಾಂತ್ರಿಕ ವಿಭಾಗದಲ್ಲಿ, ವಸಂತ್‌ ಕಲರ್‌ಲ್ಯಾಬ್‌, ಲಕ್ಷ್ಮೀ ಫಿಲಂ ಎಡಿಟಿಂಗ್‌ ಕಂಪೆನಿ, ಸಿನೇಟ್ರಾನಿಕ್ಸ್‌ನ ತಾಂತ್ರಿಕ ವಿಭಾಗದಲ್ಲಿ ರವೀಂದ್ರ ರಾವ್‌ಅವರು ಸೇವೆ ಸಲ್ಲಿಸಿದ್ದಾರೆ.

ಇನ್ನು, ಸಂಕಲನಕಾರರಾಗಿ 1976ರಿಂದ ಇವತ್ತಿನವರೆಗೆ ಎಲ್ಲಾ ಬಗೆಯ ಸಿನಿಮಾ ಜಾನರ್‌ಗಳನ್ನು ನೋಡಿರುವ ರವೀಂದ್ರ ರಾವ್‌ ಅವರಿಗೆ ಇವತ್ತಿನ ಪ್ರೇಕ್ಷಕ ಯಾವ ರೀತಿಯ ಸಿನಿಮಾಗಳನ್ನು ಬಯಸುತ್ತಾನೆ ಎಂಬ ಅರಿವಿದೆ. ಅದೇ ಕಾರಣದಿಂದ ತುಂಬಾ ಚೂಸಿಯಾಗಿ ಕಥೆಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇನ್ನು ಬೆಂಗಳೂರು ದೂರದರ್ಶನದ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ರವೀಂದ್ರ ರಾವ್‌ ಅವರಿಗೆ ಅನೇಕ ಸಂಸ್ಥೆಗಳು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿವೆ.

Advertisement

“ನಾವು ಮಾಡುವ ಸಿನಿಮಾ ಜನರನ್ನು ತಲುಪುವ ಜೊತೆಗೆ ಅವರಿಗೊಂದು ಸಂದೇಶ ನೀಡುವಂತಿರಬೇಕು. ಆ ತರಹದ ಸಿನಿಮಾಗಳನ್ನು ನಿರ್ಮಿಸಬೇಕೆಂಬುದು ನನ್ನ ಉದ್ದೇಶ’ ಎನ್ನುತ್ತಾರೆ ರವೀಂದ್ರ ರಾವ್‌.

Advertisement

Udayavani is now on Telegram. Click here to join our channel and stay updated with the latest news.

Next