Advertisement

ಸತ್ಸಂಗದಿಂದ ಮಾಯೆ ದೂರ

07:25 AM Aug 07, 2017 | |

ಶಿವಮೊಗ್ಗ: ಆತ್ಮಶಕ್ತಿ ಜಾಗೃತಗೊಂಡರೆ ಜೀವನದಲ್ಲಿ ಎಲ್ಲವನ್ನೂ ಸಾಧಿಸಲು ಸಾಧ್ಯವಾಗುತ್ತದೆ. ಸತ್ಸಂಗ, ಸತ್‌ಚಿಂತನೆಗಳಿಂದ ನಮ್ಮಲ್ಲಿ ಮಾಯೆ ದೂರವಾಗುತ್ತದೆ ಎಂದು ಉಪನ್ಯಾಸಕ ಜಿ.ಎಸ್‌. ನಟೇಶ್‌ ಹೇಳಿದರು.

Advertisement

ಡಿವಿಜಿ ಕಗ್ಗ ಬಳಗ, ವಿನೋಬನಗರ ಸತ್ಸಂಗ ಸಮಿತಿ ಹಾಗೂ ವಿಪ್ರ ಟ್ರಸ್ಟ್‌ ಆಶ್ರಯದಲ್ಲಿ ಏರ್ಪಡಿಸಿದ್ದ “ಕಗ್ಗ ಬೀರಿದ ಜ್ಞಾನದ ಬೆಳಕು’ ತಿಂಗಳ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಮಾಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ, ಭಗವಂತನ ಸೇವೆಯೆಂದು ತಿಳಿದು ಸಮರ್ಪಿಸಬೇಕು. ನಿಷ್ಕಲ್ಮಶವಾದ ಭಕ್ತಿಯಿಂದ ಭಗವಂತನಲ್ಲಿ ಬೇಡಬೇಕು. ಭಗವಂತನ ಇಚ್ಛೆಯಂತೆ
ಜೀವನವನ್ನು ಆರಂಭಿಸಿದಾಗ ನಮಗೆಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಶರೀರವೇ ಒಂದು ಪುಟ್ಟ ವಿಶ್ವ. ಭಗವಂತನ ಶಕ್ತಿಯನ್ನು ತಿಳಿಯುವುದೇ ಮಾನವ ಜೀವನದ ಪರಮಗುರಿ. ಮನುಷ್ಯ ಇಂದು ಆಸ್ತಿ- ಅಂತಸ್ತು- ಹಣ- ಅಧಿಕಾರ ಇತ್ಯಾದಿ ಆಸೆಗಳಿಂದ ಪ್ರಾಮಾಣಿಕ ನಿಷ್ಠೆಗಳಿಂದ ದೂರವಾಗುತ್ತಿದ್ದಾನೆ. ಶರೀರ ಒಂದಲ್ಲಾ ಒಂದು ದಿನ ವಾಪಾಸ್ಸು ಹೋಗುವುದು ಖಂಡಿತ. ಇದನ್ನು ಅರಿತು ಮುನ್ನಡೆಯಬೇಕು ಎಂದು ಹೇಳಿದರು. ಯಾರು ಹಣದ ವಿಷಯದಲ್ಲಿ ಪರಿಶುದ್ಧರಾಗಿರುತ್ತಾರೋ, ಅಂತವರಿಗೆ ಭಗವಂತನ ಕೃಪೆ ಸದಾ ಇರುತ್ತದೆ. ನಾವು ಮಾಡುವ ಒಳ್ಳೆಯ ಕೆಲಸಗಳಿಂದ ನಮಗೆ ಉತ್ತಮ ಫಲಗಳು ಸಿಗುತ್ತದೆ. ಆದ್ದರಿಂದ ಯಾವ ನಿರೀಕ್ಷೆಯೂ, ಪ್ರತಿಫಲ ಅಪೇಕ್ಷೆಯೂ ಇಲ್ಲದೇ ಜೀವನದ ನಿಜವಾದ ಸುಖ ಸಂತೋಷಗಳನ್ನು ಪಡೆಯಬೇಕು. ಯಾರ ಮನಸ್ಸು ಸದಾ ಭಗವಂತನಲ್ಲಿ ಇರುತ್ತೋ ಅವನಿಗೆ ಆತ್ಮಸುಖ ಶಾಶ್ವತವಾಗಿ ಲಭಿಸುತ್ತದೆ ಎಂದರು. 

ಜಗತ್ತಿನ ಆದಿ ಸತ್ವವನ್ನು ತಿಳಿಯುತ್ತಾ ಸಮಾಜದ ಋಣವನ್ನು ತೀರಿಸುತ್ತಾ ಆಶಯ ಇಲ್ಲದವರಿಗೆ ಆಶಯ, ಆಹಾರ ಇಲ್ಲದವರಿಗೆ ಆಹಾರ, ವಿದ್ಯೆ ಇಲ್ಲದವರಿಗೆ ವಿದ್ಯೆ ಎಂಬ ಉದ್ದೇಶದೊಂದಿಗೆ ಸೇವೆ ಮಾಡಬೇಕು. ಮನೆಯೇ ಮಠವಾಗಬೇಕು. ವಿಪರ್ಯಾಸವೆಂದರೆ, ಮಠಗಳಲ್ಲಿಯೇ
ಈಗ ಮನೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಆತ್ಮಬಲ ಜಾಗೃತಗೊಳಿಸಿ ಜೀವನದ ಯಶಸ್ಸು ಸಾಧಿಸಬೇಕಾಗಿದೆ. ಯಾಂತ್ರಿಕತೆಯಲ್ಲಿ ನಮ್ಮ ಸಮಾಜ ಜಾಗೃತವಾಗುತ್ತಿದೆ. ಆತ್ಮಶಕ್ತಿಯ ಕೊರತೆ ಎಲ್ಲರನ್ನೂ ಕಾಡತೊಡಗಿದೆ. ಭಗವಂತ ದೊಡ್ಡ ದೀಪವಾದರೆ, ಆತ್ಮವು
ಸಣ್ಣ ಕಿಡಿ. ಜೀವಗಳಿಗೆ ಶಕ್ತಿಯನ್ನು ತುಂಬುವ ಅಪಾರವಾದ ಭಗವಂತನ ಶಕ್ತಿ ವಿಶ್ವದ ಎಲ್ಲ ಕಡೆಯಲ್ಲಿಯೂ ಇದೆ ಎಂದು ಹೇಳಿದರು.

ನುಡಿದಂತೆ ನಡೆದವರು ಡಿ.ವಿ. ಗುಂಡಪ್ಪನವರು. ಡಿವಿಜಿಯವರು ಅತ್ಯಂತ ಸರಳ ಜೀವನ ನಡೆಸಿದವರು. ಶ್ರೀಮಂತಿಕೆ ಬಂದಾಗಲೂ ಅದನ್ನು ನಯವಾಗಿ ತಿರಸ್ಕರಿಸಿ, ಯಾವ ಸ್ಥಾನಮಾನ, ಪ್ರಶಸ್ತಿಗಳಿಗಾಗಿ ಅದರ ಹಿಂದೆ ಹೋಗದೆ, ಈ ನಾಡಿಗಾಗಿ ಅಪಾರ ಸೇವೆಯನ್ನು ಸಲ್ಲಿಸಿ, ತಮ್ಮ ಹೆಸರನ್ನು ಎಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಬದುಕಿದವರು ಎಂದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸತ್ಸಂಗ ಸಮಿತಿ ಅಧ್ಯಕ್ಷೆ ಪ್ರತಿಮಾ ಉಡುಪ, ಡಿವಿಜಿಯವರ ಕಗ್ಗ ನಮ್ಮ ಬದುಕಿಗೆ ತುಂಬಾ ಹತ್ತಿರವಾದ ಗ್ರಂಥ. ನಿತ್ಯ ಪಾರಾಯಣಕ್ಕೆ ಯೋಗ್ಯವಾದ ಗ್ರಂಥ. ನಮ್ಮೆಲ್ಲರ ಜೀವನದಲ್ಲಿ ಸಹಜವಾಗಿ ಉದ್ಭವಿಸುವಂತಹ ಸಮಸ್ಯೆಗಳಿಗೆ ಇದರಲ್ಲಿ
ಉತ್ತರ ಸಿಗುತ್ತದೆ. ಇದನ್ನು ಕನ್ನಡದ ಭಗವದ್ಗೀತೆ ಎಂದು ಕರೆಯುತ್ತಾರೆ ಎಂದು ಅಭಿಪಾಯಪಟ್ಟರು. ವಿಪ್ರ ಟ್ರಸ್ಟ್‌ ಅಧ್ಯಕ್ಷ ಶಾಮಪ್ರಸಾದ್‌ ಇದ್ದರು. ಶಬರೀಶ್‌ ಕಣ್ಣನ್‌ ಪ್ರಾಸ್ತಾವಿಕವಾಗಿ  ಮಾತನಾಡಿದರು. ಸಂಧ್ಯಾ ಶರ್ಮ ಸ್ವಾಗತಿಸಿದರು. ಭಾಗೀರಥಿ ವಂದಿಸಿದರು. ವೀಣಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next