ಲಕ್ನೋ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ ಬಹುಜನ್ ಸಮಾಜ ಪಕ್ಷದ ಶಾಸಕ ರಮಾ ಬಾಯಿಯನ್ನು ಪಕ್ಷದ ವರಿಷ್ಠೆ ಮಾಯಾವತಿ ಭಾನುವಾರ ಅಮಾನತುಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮುಸ್ಲಿಮೇತರ ವಲಸಿಗ ನಿರಾಶ್ರಿತರಿಗೆ ಭಾರತದ ಕಾಯಂ ಪ್ರಜೆಯನ್ನಾಗಿ ಅವಕಾಶ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾಯಾವತಿ ಕಟುವಾಗಿ ಟೀಕಿಸಿದ್ದರು. ಏತನ್ಮಧ್ಯೆ ಬಿಎಸ್ಪಿ ಪಕ್ಷದ ಶಾಸಕಿ ಸಿಎಎಯನ್ನು ಬೆಂಬಲಿಸಿದ್ದಕ್ಕೆ ಪಕ್ಷದಿಂದ ಅಮಾನತುಗೊಳಿಸಿರುವುದಾಗಿ ವರದಿ ವಿವರಿಸಿದೆ.
ರಮಾ ಬಾಯಿ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಪಾಥೇರಿಯಾ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿದ್ದಾರೆ. ಶನಿವಾರ ಸಂಜೆ ರಮಾ ಬಾಯಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಭಾಗವಹಿಸಿದ್ದರು.
ಬಿಎಸ್ಪಿ ಶಾಸಕಿ ರಮಾ ಬಾಯಿ ಸಿಎಎ ಬೆಂಬಲಿಸಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಟ್ವೀಟರ್ ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಮಾಯಾವತಿ, ಬಿಎಸ್ಪಿ ಶಿಸ್ತಿನ ಪಕ್ಷವಾಗಿದೆ. ಯಾರು ಶಿಸ್ತನ್ನು ಉಲ್ಲಂಘಿಸುತ್ತಾರೋ ಅಂತಹ ಸಂಸದ, ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪಕ್ಷದ ಯಾವುದೇ ಸಮಾರಂಭದಲ್ಲಿಯೂ ಭಾಗವಹಿಸದಂತೆ ನಿಷೇಧ ಹೇರಲಾಗಿದೆ ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.