Advertisement

ಮಯಾಂಕ್‌ ಪ್ರತಾಪ್‌ ಸಿಂಗ್‌ ದೇಶದ ಅತಿ ಕಿರಿಯ‌ ನ್ಯಾಯಾಧೀಶ

06:49 PM Jul 22, 2020 | Karthik A |

ಸಾಧಿಸಿದರೆ ಸಬಳವನ್ನೂ ನುಂಗಬಹುದು ಎಂಬ ಗಾದೆ ಮಾತನ್ನು ಎಲ್ಲರೂ ಕೇಳಿದವರೇ. ಆದರೆ ಅದನ್ನು ನಿಜ ಮಾಡುವವರು ಕೆಲವೇ ಕೆಲವು ಮಂದಿ. ಅಂತವರಲ್ಲಿ ಮಯಾಂಕ್‌ ಪ್ರತಾಪ್‌ ಸಿಂಗ ಕೂಡ ಒಬ್ಬರು. 21ನೇ ವರ್ಷಕ್ಕೆ ಜಡ್ಜ್ ಪಟ್ಟವನ್ನು ಅಲಂಕರಿಸಿ, ದೇಶದ ಅತಿ ಕಿರಿಯ ಜಡ್ಜ್ ಎಂಬ ಹೆಗ್ಗಳಿಕೆ ಪಾತ್ರವಾದ ಇವರ ಸಾಧನೆ ಎಲ್ಲರಿಗೂ ಸ್ಫೂರ್ತಿ.

Advertisement

ರಾಜಸ್ಥಾನದ ಮಯಾಂಕ್‌ ಪ್ರತಾಪ್‌ ಸಿಂಗ್‌ 2019ರಲ್ಲಿ ನಡೆದ ರಾಜಸ್ಥಾನ ಜ್ಯುಡಿಷಿಯಲ್‌ ಸರ್ವಿಸ್‌ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಮೊದಲ ಸ್ಥಾನವನ್ನು ಪಡೆದಿದ್ದು, ಅನಂತರ ನಡೆದ ಸಂದರ್ಶನದಲ್ಲಿಯೂ ತಮ್ಮ ಸಾಧನೆಯನ್ನು ತೋರಿದ್ದಾರೆ.

ಎಲ್‌ಎಲ್‌ಬಿ ಡಿಗ್ರಿಯನ್ನು ಜೈಪುರದ ಯುನಿವರ್ಸಿಟಿ ಆಫ್ ರಾಜಸ್ಥಾನದಿಂದ ಪಡೆದುಕೊಂಡ ಅವರು ಪದವಿ ಹಂತದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿದ್ದರು.

ಪದವಿಯ ಜತೆಗೆ ಪರೀಕ್ಷೆಗಳಿಗೆ ಸಿದ್ಧವಾಗುವುದು ಮಯಾಂಕ್‌ಗೆ ಅಷ್ಟೇನೂ ಸುಲಭದ ಮಾತಾಗಿರಲಿಲ್ಲ. ದಿನದ 10 ಗಂಟೆಯನ್ನು ಕಲಿಕೆಗಾಗಿ ಮೀಸಲಿಡುತ್ತಿದ್ದರು.ಉನ್ನತ ವಿದ್ಯಾಭ್ಯಾಸ ಮುಗಿಸಿ ಜೆಇಇ ಪರೀಕ್ಷೆ ಎದುರಿಸು ಎಂಬ ಸಲಹೆಗಳ ನಡುವೆಯೇ ಅವರು ರ್‍ಯಾಂಕ್‌ನೊಂದಿಗೆ ಜೆಇಇ ಪರೀಕ್ಷೆಯನ್ನು ಜಯಿಸಿದ್ದರು. ತೇರ್ಗಡೆಯಾಗುವ ನಂಬಿಕೆಯಿದ್ದರೂ ರ್‍ಯಾಂಕ್‌ನ ನಿರೀಕ್ಷೆಯಿರಲಿಲ್ಲ.

ಹೆತ್ತವರ ನಿರಂತರ ಪ್ರೋತ್ಸಾಹ
ಪ್ರತಿಯೊಬ್ಬ ಸಾಧಕನ ಹಿಂದೆಯೂ ಅವರಿಗೆ ಸ್ಫೂರ್ತಿಯಾಗುವ ಅಥವಾ ಪ್ರೋತ್ಸಾಹ ನೀಡುವ ಕೆಲವು ವ್ಯಕ್ತಿಗಳು ಇದ್ದೇ ಇರುತ್ತಾರೆ. ತಮ್ಮ ಸಾಧನೆಗೆ ಹೆತ್ತವರ ಪ್ರೋತ್ಸಾಹವೇ ಕಾರಣ ಎಂದು ಮಯಾಂಕ್‌ ಹೇಳುತ್ತಾರೆ.

Advertisement

ಮಗ ಓರ್ವ ಉತ್ತಮ ಅಧ್ಯಾಪಕನಾಗಬೇಕೆಂದು ಆಗ್ರಹಿಸಿದ್ದ ಪಾಲಕರು ಆತನ ಕನಸು ನ್ಯಾಯಾಂಗ ವ್ಯವಸ್ಥೆಯಲ್ಲಿದೆ ಎಂದು ತಿಳಿದಾಗ ಅದನ್ನು ವಿರೋಧಿಸಲಿಲ್ಲ. ಅದರ ತಯಾರಿಗೆ ತಾವೂ ಸಾಥ್‌ ನೀಡಿದರು. ಆ ಬೆಂಬಲವೇ ದೇಶದ ಅತಿ ಕಿರಿಯ ಜಡ್ಜ್ ಎಂಬ ಪಟ್ಟ ಒಲಿಯಲು ಕಾರಣ.

ಸಂದರ್ಶನದಲ್ಲೂ ಮಿಂಚಿದ ಮಯಾಂಕ್‌
ಪರೀಕ್ಷೆಯಲ್ಲಿ ಉತ್ತಮ ಅಂಕ ತೆಗೆದ ಕೆಲವರು ಸಂದರ್ಶನದಲ್ಲಿ ಎಡವುದುಂಟು. ಅಲ್ಲಿ ಕುಳಿತ ದಿಗ್ಗಜರ ಪ್ರಶ್ನೆಗೆ ಉತ್ತರಿಸಲಾಗದೆ ತಡವರಿಸುತ್ತಾರೆ. ಆದರೆ ಪರಿಣಿತರು ಹಾಗೂ ಹೈಕೋರ್ಟ್‌ ಜಡ್ಜ್ ನಡೆಸಿದ ಸಂದರ್ಶನದಲ್ಲಿಯೂ ಮಯಾಂಕ್‌ ಉತ್ತಮ ಅಂಕ ಪಡೆದಿದ್ದರು.

ಶಬರಿಮಲೆ ಹಾಗೂ ಅಯೋಧ್ಯೆ ತೀರ್ಪಿನ ಕುರಿತು ಸಂದರ್ಶನದಲ್ಲಿ ಪ್ರಶ್ನೆಗಳಿದ್ದವು. ಅವುಗಳಿಗೆ ಸಮತೂಕದ ಉತ್ತರ ನೀಡಿದ್ದರು. ಯುವ ಜನತೆ ತಮ್ಮ ಗಮನವನ್ನು ಚಂಚಲಗೊಳಿಸುವ ವಿಷಯಗಳಿಂದ ದೂರವಿದ್ದರೆ ಸಾಧನೆಯ ಹಾದಿ ಕಠಿನವಿಲ್ಲ ಎಂಬುದಕ್ಕೆ ಮಯಾಂಕ್‌ ಉತ್ತಮ ಉದಾಹರಣೆ.

-ಸುಶ್ಮಿತಾ ಶೆಟ್ಟಿ, ಸಿರಿಬಾಗಿಲು

 

Advertisement

Udayavani is now on Telegram. Click here to join our channel and stay updated with the latest news.

Next