ಮಾಯಕೊಂಡ: ಕಳೆದ ನಾಲ್ಕೈದು ವರ್ಷಗಳ ಭೀಕರ ಬರದಿಂದಾಗಿ ಹೋಬಳಿಯ ಬಹುತೇಕ ರೈತರ ಅಡಿಕೆ ತೋಟಗಳು ಒಣಗಿ ಹೋಗಿವೆ. ತೋಟ ಉಳಿಸಿಕೊಳ್ಳಲು ಭಗೀರಥ ಯತ್ನ ಮಾಡಿದ ರೈತರು ಈಗ ಕಣ್ಣೀರು ಸುರಿಸುತ್ತ ಅಡಿಕೆ ಮರಗಳಿಗೆ ಕೊಡಲಿ ಮತ್ತು ಜೆಸಿಬಿಯಿಂದ ಮುಕ್ತಿ ಕಾಣಿಸುತ್ತಿದ್ದಾರೆ.
ನಿರಂತರ ಮಳೆಯ ಅಭಾವದಿಂದ ಅಂತರ್ಜಲ ಮಟ್ಟ ಕುಸಿದ ಪರಿಣಾಮ ಮಾಯಕೊಂಡ ಮತ್ತು ಹೋಬಳಿಯ ಅಡಿಕೆ ತೋಟಗಳಿಗೆ ಸಂಕಷ್ಟ ಎದುರಾಗಿದೆ. ಟ್ಯಾಂಕರ್ ಮೂಲಕ ನೀರು ಹರಿಸಿದರೂ ಹಣಕಾಸಿನ ತೊಂದರೆಯಿಂದಾಗಿ ತೋಟ ರಕ್ಷಿಸಿಕೊಳ್ಳಲು ಆಗದೇ ಕೈಚೆಲ್ಲಿದ ಕೆಲವು ರೈತರು 15-20 ವರ್ಷಗಳಿಂದ ಫಲ ನೀಡುತ್ತಿದ್ದ ಮರಗಳನ್ನು ಕಡಿದು ಹಾಕಿದ್ದಾರೆ. ಇಂತಹ ರೈತರ ಕರುಣಾಜನಕ ಕಥೆಗಳು ಹೋಬಳಿಯ ಪ್ರತಿ ಹಳ್ಳಿಯಲ್ಲಿ ಕಾಣಸಿಗುತ್ತವೆ.
ಮಾಯಕೊಂಡ ಗ್ರಾಮದ ರೈತ ನಾಗರಾಜು ಸಾವಿರ ಅಡಿಗೂ ಆಳ ನಾಲ್ಕೈದು ಕೊಳವೆಬಾವಿ ಕೊರೆಸಿದರೂ ನೀರು ಹತ್ತದೇ ಸುಮಾರು ಎರಡು ಎಕರೆ ಜಮೀನಿನಲ್ಲಿ ಬೆಳೆದ ಸಾವಿರಕ್ಕೂ ಹೆಚ್ಚು ಅಡಕೆ ಮರಗಳನ್ನು ಕಡಿದು ಹಾಕುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ 3 ಲಕ್ಷ ರೂ. ಬ್ಯಾಂಕ್ ಸಾಲ ಮಾಡಿದ್ದೆ. ಅದರ ಬಡ್ಡಿ ಮತ್ತು ಸಾಲ ದಿನದಿಂದ ದಿನಕ್ಕೆ ಬೆಳೆಯುತ್ತಿದೆ ಎನ್ನುತ್ತಾರೆ ರೈತ ನಾಗರಾಜು.
ಹುಚ್ಚವ್ವನಹಳ್ಳಿಯ ಕುಮಾರ್ ದಶಕಗಳ ಹಿಂದೆ 2 ಎಕರೆ ಅಡಿಕೆ ತೋಟ ಬೆಳೆಸಿದ್ದರು. ಪ್ರತಿ ವರ್ಷ ಉತ್ತಮ ಆದಾಯವೂ ಬರುತ್ತಿತ್ತು. ಕಳೆದ ಐದು ವರ್ಷಗಳಿಂದ ತಲೆದೋರಿದ ಬರ ಪರಿಸ್ಥಿತಿಗೆ ಕೊಳವೆ ಬಾವಿಗಳಲ್ಲಿನ ನೀರೂ ಬತ್ತಿದೆ. ಅಡಕೆ ಮರ ಉಳಿಸಲು ಲಕ್ಷಾಂತರ ರೂ. ಸಾಲ ಮಾಡಿ ಎರಡು ವರ್ಷಗಳಿಂದ ಟ್ಯಾಂಕರ್ ಮೂಲಕ ನೀರುಣಿಸಿದರೂ ಕೊನೆಗೂ ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ, ಸಾಸ್ವೆಹಳ್ಳಿ ಏತ ನೀರಾವರಿ ಮೂಲಕ ಕೆರೆ, ಕಟ್ಟೆಗಳಲ್ಲಿ ನೀರು ನಿಂತರೆ ಮತ್ತೆ ತೋಟ ಮಾಡುತ್ತೇನೆ ಎನ್ನುತ್ತಾರೆ ಕುಮಾರ್.
ಮಾಯಕೊಂಡ ಹೋಬಳಿಯ ಕೆಲ ರೈತರು ಲಕ್ಷಾಂತರ ರೂ. ಖರ್ಚು ಮಾಡಿ ಭದ್ರಾ ಚಾನಲ್ನಿಂದ ಪೈಪ್‌ಲೈನ್ ಮೂಲಕ ನೀರನ್ನು ತಂದು ಅಡಕೆ ಮರಗಳನ್ನು ಉಳಿಸಿಕೊಂಡರೆ ಇನ್ನೂ ಕೆಲ ರೈತರು ಟ್ಯಾಂಕರ್ ಮೂಲಕ ನೀರು ತರಿಸುತ್ತಿದ್ದಾರೆ. ಈಗ ಭದ್ರಾ ಕಾಲುವೆ ನೀರು ಕೂಡ ನಿಂತಿದ್ದು, ಬೋರ್‌ವೆಲ್ ನೀರೇ ಗತಿಯಾಗಿದೆ. ಪ್ರತಿ 5 ಸಾವಿರ ಲೀ. ನೀರು ಟ್ಯ್ರಾಕ್ಟರ್ ಲೋಡಿಗೆ 700 ರಿಂದ 800 ರೂ. ಹಾಗೂ 30 ಸಾವಿರ ಲೀ. ಲಾರಿ ಲೋಡ್‌ಗೆ 4500- 5000 ರೂ. ನೀಡಬೇಕಾಗುತ್ತದೆ. ಹೊಂಡದಲ್ಲಿ ನೀರು ಸಂಗ್ರಹಿಸಿ ಹನಿ ನೀರಾವರಿ ಮೂಲಕ ನೀರು ಹಾಯಿಸಲಾಗುತ್ತದೆ. ಫಸಲು ಕಡಿಮೆ ಬಂದರೂ ಅಡಕೆ ಮರಗಳು ಉಳಿದರೆ ಸಾಕು ಎಂಬ ಮನೋಸ್ಥಿತಿಯಲ್ಲಿ ರೈತರಿದ್ದು, ಮುಂದಿನ ಬಾರಿ ಮಳೆ ಬಂದರೆ ಉತ್ತಮ ಫಸಲು ಸಿಗಬಹುದೆಂಬ ಆಶಾಭಾವನೆಯಲ್ಲಿದ್ದಾರೆ.
ಮಾಯಕೊಂಡ ಮತ್ತು ಆನಗೋಡು ಹೋಬಳಿ ವ್ಯಾಪ್ತಿಯಲ್ಲಿ ಈವರೆಗೆ ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಮರಗಳು ನಾಶವಾಗಿರುವ ಅಂದಾಜು ಇದೆ. ಟ್ಯಾಂಕರ್ ಮತ್ತು ಭದ್ರಾ ನಾಲೆಯಿಂದ ನೀರು ತರುತ್ತಿರುವ ರೈತರ ತೋಟಗಳು ಉತ್ತಮ ಸ್ಥಿತಿಯಲ್ಲಿವೆ. ಇನ್ನು ಒಂದು ತಿಂಗಳಲ್ಲಿ ಮಳೆ ಬಾರದ್ದಿದ್ದರೆ ಕಳೆದ ವರ್ಷಕ್ಕಿಂತ ಈ ಬಾರಿ ಜಾಸ್ತಿ ಹಾನಿಯಾಗುತ್ತದೆ.
•
ಯತಿರಾಜು,
ಹಿರಿಯ ಸಹಾಯಕ ನಿರ್ದೇಶಕರು, ದಾವಣಗೆರೆ ಜಿ.ಪಂ.
ಶಶಿಧರ್ ಶೇಷಗಿರಿ