Advertisement

ಜಿಲ್ಲೆಯಲ್ಲಿ ಅರಣ್ಯ ಬೆಳೆಸಲು 2 ಲಕ್ಷ ಬೀಜದುಂಡೆ ಸಿದ್ಧ

10:11 AM Jun 05, 2019 | Naveen |

ದಾವಣಗೆರೆ: ಪ್ರಾದೇಶಿಕ ಅರಣ್ಯ ಇಲಾಖೆಯಿಂದ ಬುಧವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜೊತೆಗೆ ಸಾರ್ವಜನಿಕರಿಗೆ ಉಚಿತವಾಗಿ ಸಸಿಗಳನ್ನು ವಿತರಿಸುವ, ಸಸಿಗಳನ್ನು ನಾಟಿ ಮಾಡುವ ಕೆಲಸದ ಜೊತೆಗೆ ಈ ತಿಂಗಳ ಅಂತ್ಯದವರೆಗೆ ಜಿಲ್ಲೆಯ ಕಾಯ್ದಿಟ್ಟ ಅರಣ್ಯ ಪ್ರದೇಶಗಳಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಬೀಜದ ಉಂಡೆ ನಾಟಿ ಮಾಡಲು ಇಲಾಖೆ ಸಜ್ಜುಗೊಂಡಿದೆ.

Advertisement

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಸಂಘ-ಸಂಸ್ಥೆಗಳು , ಶಾಲಾ-ಕಾಲೇಜುಗಳು, ಎನ್‌ಜಿಓ ಸಂಸ್ಥೆಗಳ ಸ್ವಯಂ ಸೇವಕರು, ವಿದ್ಯಾರ್ಥಿಗಳನ್ನು ಬಳಸಿಕೊಂಡು ಲಕ್ಷಾಂತರ ಬೀಜದ ಉಂಡೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ತಿಂಗಳ ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾದಾಗ ಬೀಜದುಂಡೆಗಳು ಮೊಳಕೆಯೊಡೆದು ಅರಣ್ಯ ಸಮೃದ್ಧವಾಗಿ ಬೆಳೆಯಲಿ ಎಂಬುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ.

ಬೀಜಗಳ ವಿಶೇಷ: ಹೊಂಗೆ, ಬೇವು, ಎಬ್ಬೇವು, ಗಂಧ, ಕರಿಜಾಲಿ, ಆಲ, ಅರಳಿ, ನಲ್ಲಿ, ನೇರಳೆ, ಮುತ್ತುಗ, ಸೀಮೆ ತಂಗಡಿ, ಸೀಮಾರೂಬ ಸೇರಿದಂತೆ ನಾನಾ ಜಾತಿಯ ಸಸ್ಯರಾಶಿ ಬೀಜಗಳನ್ನು ಸಂಗ್ರಹಿಸಿ ಬೀಜದ ಉಂಡೆಗಳಾಗಿ ಸಿದ್ಧ ಮಾಡಿಕೊಳ್ಳಲಾಗಿದೆ.

ಜಗಳೂರು ತಾಲೂಕಿನಲ್ಲಿ ಗುರುಸಿದ್ದಾಪುರ ಪ್ರೌಢಶಾಲೆ, ಹೊಸಕೆರೆ ಪ್ರೌಢಶಾಲೆ, ಪ್ರೈಮರಿ ಶಾಲೆಗಳ ಮಕ್ಕಳು, ವಿದ್ಯಾರ್ಥಿಗಳು ಸಾವಿರಾರು ಬೀಜದುಂಡೆಗಳನ್ನು ತಯಾರಿಸಿದ್ದು, ರಂಗಯ್ಯನದುರ್ಗ ವನ್ಯಜೀವಿಧಾಮದ ಮಡ್ರಹಳ್ಳಿ, ಮಲೆಮಾಚಿಕೆರೆಯ ಕಾಯ್ದಿಟ್ಟ ಅರಣ್ಯದಲ್ಲಿ ಸುಮರು 50 ಹೆಕ್ಟೇರ್‌ ಪ್ರದೇಶದಲ್ಲಿ ಜೂ.6, 7, 8ರಂದು ಬೀಜದುಂಡೆ ಅಭಿಯಾನ ಹಮ್ಮಿಕೊಂಡು ಬೀಜದ ಉಂಡೆಗಳನ್ನು ಭೂಮಿಯಲ್ಲಿ ಹೂಳಲಾಗುವುದು ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಅರಬಘಟ್ಟದ ಸರ್ಕಾರಿ ಶಾಲೆ, ಸ್ವಾಮೀ ವಿವೇಕಾನಂದ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆಗಳಲ್ಲಿಯೂ ಬೀಜದ ಉಂಡೆ ಅಭಿಯಾನ ಹಮ್ಮಿಕೊಂಡು ಒಟ್ಟು ತಾಲೂಕಿನಿಂದ 50ಸಾವಿರದಷ್ಟು ಬೀಜದ ಉಂಡೆಗಳನ್ನು ಸಿದ್ಧಪಡಿಸಲಾಗಿದೆ.

Advertisement

ಸಾಮಾಜಿಕ ಅರಣ್ಯ ಇಲಾಖೆ ಬೆಳಗ್ಗೆ 10.30ಕ್ಕೆ ದಾವಣಗೆರೆಯ ವಿಮಾನಮಟ್ಟಿ ಹಾಗೂ ಶಾಮನೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಜೊತೆಗೆ ಇಲಾಖೆ ಆವರಣದಲ್ಲಿ ಸಾರ್ವಜನಿಕರಿಗೆ ಸಸಿ ವಿತರಿಸಲಾಗುತ್ತಿದೆ. ಒಟ್ಟಾರೆ ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ಸಾಮಾಜಿಕ ಆರಣ್ಯ ಇಲಾಖೆಗಳು ಜಿಲ್ಲೆಯಲ್ಲಿ ವನ ಮಹೋತ್ಸವ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಪರಿಸರ ರಕ್ಷಣೆಯ ಜಾಗೃತಿ ಹಾಗೂ ಸಾಮಾಜಿಕ ಕಳಕಳಿ ಬೆಳಸಲು ಮುಂದಾಗಿವೆ.

ಸಸಿಗಳನ್ನು ಕಾಳಜಿಯಿಂದ ಬೆಳೆಸಿ
ಪ್ರಾದೇಶಿಕ ಅರಣ್ಯ ವಿಭಾಗದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬುಧವಾರ ನಗರದಲ್ಲಿ ವನ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಶಿರಮಗೊಂಡನಹಳ್ಳಿ ಸಮೀಪದ ಹದಡಿ ರಸ್ತೆ ಹಾಗೂ ವಿಮಾನಮಟ್ಟಿಯ ಟಿ.ವಿ. ಸ್ಟೇಷನ್‌ ರಸ್ತೆಯ 2 ಮಾರ್ಗಗಳಲ್ಲಿ ಸಾಂಕೇತಿಕವಾಗಿ ಸಸಿಗಳನ್ನು ನಾಟಿ ಮಾಡಲಾಗುತ್ತಿದೆ. ಜೊತೆಗೆ ಸಸಿ ವಿತರಣೆ ಮಾಡಲಾಗುತ್ತಿದ್ದು, ಕಾಳಜಿಯಿಂದ ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು.
ಚಂದ್ರಶೇಖರ ನಾಯ್ಕ,
ಉಪ ಅರಣ್ಯ ಸಂರಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next