Advertisement

ವಿಶ್ವ ಪರಿಸರ ದಿನದ ಆಚರಣೆ ತನ್ನ ಮಹತ್ವ ಕಳೆದುಕೊಳ್ಳದಿರಲಿ

06:29 PM Jun 05, 2020 | mahesh |

ನಮ್ಮ ಪೃಥ್ವಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ. ಇದು ನಮ್ಮ ವಾಸಸ್ಥಾನ. ಭೂಮಿಯಲ್ಲಿನ ಜೀವಿಗಳ ಉಗಮ, ವಿಕಾಸ, ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ಪಂಚಭೂತಗಳಿಂದ ನಿರ್ಮಿತವಾದ ನಮ್ಮ ಪರಿಸರ. ಸಂಕ್ಷಿಪ್ತವಾಗಿ ಹೇಳುವುದಾದರೆ ನಮ್ಮ ಸುತ್ತಲಿನ ವಾತಾವರಣವೇ ಪರಿಸರ.

Advertisement

21ನೇ ಶತಮಾನದ ಸ್ಪರ್ಧಾತ್ಮಕ, ಯಾಂತ್ರಿಕ ಜೀವನದ ಜಂಜಾಟದಲ್ಲಿ ನಾವೆಲ್ಲರೂ ತಲ್ಲೀನರಾಗಿದ್ದೇವೆ. ಅಭಿವೃದ್ಧಿ, ಹಣದ ಬೆನ್ನತ್ತಿ ಓಡುವ ಈ ಓಟದಲ್ಲಿ, ಪ್ರಕೃತಿ, ಪರಿಸರದ ಕುರಿತಾದ ಆಸ್ಥೆ ಮರೆಯಾಗಿದೆ. ಆ ಕಾರಣದಿಂದ ದಿನೇ ದಿನೇ ಪ್ರಕೃತಿ ತನ್ನ ತನವನ್ನು ಕಳೆದುಕೊಳ್ಳುತ್ತಿದೆ. ತನ್ನ ಜೀವವೈವಿಧ್ಯತೆಯನ್ನು, ತನ್ನ ನೈಸರ್ಗಿಕ ಸೌಂದರ್ಯ, ತನ್ಮಯತೆಯನ್ನು ಕಳೆದುಕೊಳ್ಳುತ್ತಿದೆ.

ನಮ್ಮ ಸುತ್ತಲಿನ ಸ್ವಚ್ಛತಾ ಸಮಸ್ಯೆಯೇ ಇರಲಿ ಅಥವಾ ಜಾಗತಿಕವಾಗಿ ತಾಪಮಾನ ಏರಿಕೆ, ಮಾಲಿನ್ಯದಂತ ಸಮಸ್ಯೆಗಳೇ ಇರಲಿ ಪರಿಸರ ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳು ಒಂದೆರಡಲ್ಲ. ಅತಿಯಾದ ಪ್ಲಾಸ್ಟಿಕ್‌ ಬಳಕೆಯಿಂದ ಭೂಮಿ ಮೇಲ್ಮೈ ಅಷ್ಟೇ ಅಲ್ಲದೆ ಸಮುದ್ರ ಜೀವಿಗಳೂ ತೊಂದರೆಗೆ ಸಿಲುಕಿರುವ ದುರಂತ ನಮ್ಮ ಕಣ್ಣ ಮುಂದಿದೆ. ಹವಾಮಾನ ಬದಲಾವಣೆ, ಪ್ರಾಕೃತಿಕ ವಿಕೋಪಗಳ ಇತ್ತೀಚೆಗೆ ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಆದ್ದರಿಂದ ಇಂಥ ವಿಷಮ ಸ್ಥಿತಿಯಲ್ಲಿ ಭವಿಷ್ಯಕ್ಕಾಗಿ, ಮುಂದಿನ ಪೀಳಿಗೆಗೆ ಭೂಮಿಯನ್ನು ಉಳಿಸುವ ನಿಟ್ಟಿನಲ್ಲಿ ಇಂದಿನ ಯುವ ಜನಾಂಗವಾದ ನಮ್ಮ ಕರ್ತವ್ಯ, ನಮ್ಮ ಪಾತ್ರ ಬಲು ದೊಡ್ಡದು.

ಜಾಗತಿಕ ತಾಪಮಾನ ಏರಿಕೆಯ, ಹವಾಮಾನ ವೈಪರೀತ್ಯ, ಮಾಲಿನ್ಯ ಇತ್ಯಾದಿಗಳನ್ನು ತಡೆಗಟ್ಟಲು ವಿಶ್ವ ಸಂಸ್ಥೆ, ಪ್ರತೀ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಇವುಗಳ ಬೆಂಬಲವಾಗಿ ನಿಲ್ಲಬೇಕಾಗಿದೆ. ಪರಿಸರ ಸಂರಕ್ಷಣೆಯ ಕೂಗು ಕೇವಲ ಒಂದೇ ದಿನಕ್ಕೆ ಸೀಮಿತವಾದರೆ ವಿಶ್ವ ಪರಿಸರ ದಿನಾಚರಣೆ ತನ್ನ ಅರ್ಥ ಕಳೆದುಕೊಂಡಂತೆ. ಪರಿಸರ ಸಂರಕ್ಷಣೆ ಕೇವಲ ಒಂದು ದಿನ ಅಥವಾ ಕೆಲ ದಿನಗಳ ಗದ್ದಲವಲ್ಲ. ಒಂದು ಗಿಡ ನೆಡುವ ಕೆಲಸವಲ್ಲ, ಬದಲಾಗಿ ಇದು ನಮ್ಮ ಭೂಮಿಯ ಉಳಿವಿನ ಕೂಗು. ನಮ್ಮ ಪೃಥ್ವಿಯನ್ನು ಉಳಿಸಬೇಕು ಎಂದು ನೆನಪಿಸುವ ಕರೆಗಂಟೆ. ಈ ಭೂಮಿ ಕೇವಲ ಮನುಷ್ಯರದ್ದಲ್ಲ ಬದಲಾಗಿ ಇದು ಸಕಲ ಜೀವ ವೈವಿಧ್ಯಕ್ಕು ಸೇರಿದೆ ಎಂದು ನಾವು ಅರ್ಥೈಸಿಕೊಳ್ಳಬೇಕಾದ ಸಮಯ.

ಭಾರತೀಯ ಸಂಸ್ಕೃತಿ ಪಂಚಭೂತಗಳನ್ನು ಆರಾಧಿಸುವ ಸಂಸ್ಕೃತಿ. ಹಾಗಾಗಿ ನಮ್ಮ ಜೀವ ಪದ್ಧತಿಯಲ್ಲಿ ಸರ್ವ ಜೀವಿಗಳಿಗೂ ಬದುಕುವ ಎಲ್ಲ ಅವಕಾಶ, ವ್ಯವಸ್ಥೆಗಳಿವೆ. ಈ ವಿಚಾರವನ್ನು ನಾವು ಮನಗಂಡಾಗ ಮಾತ್ರ ಈ ದಿನಾಚರಣೆಗೆ ನಾವು ನಿಜ ಅರ್ಥ ನೀಡಿದಂತೆ.

Advertisement

ಶ್ರೀದೇವಿ, ಸಂತ ಫಿಲೋಮಿನಾ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next