ಶುಕ್ರವಾರ ರಾತ್ರಿ ಒಡಿಶಾದ ಬಾಲಸೋರ್‌ನಲ್ಲಿ ಸರಕು ಸಾಗಣೆ ರೈಲು, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಯಶವಂತಪುರ-ಹೌರಾ ಎಕ್ಸ್‌ಪ್ರೆಸ್ ರೈಲುಗಳನ್ನು ಒಳಗೊಂಡಂತೆ ಸಂಭವಿಸಿದ ತ್ರಿವಳಿ ರೈಲು ದುರಂತದಲ್ಲಿ 275 ಮಂದಿ ಸಾವನ್ನಪ್ಪಿದ್ದು, ಇದು ದೇಶದ ಇತಿಹಾಸದಲ್ಲಿ ಮೂರನೇ ಮತ್ತು ಹಾಲಿ ಶತಮಾನದ ಮೊದಲ ಅತೀ ಭೀಕರ ರೈಲು ದುರಂತವೆಂಬ ಕುಖ್ಯಾತಿಗೆ ಪಾತ್ರವಾಗಿದೆ.
ರೈಲ್ವೇ ಇಲಾಖೆ, ರೈಲು ಕಾರ್ಯಾಚರಣೆಗಳಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ಗಮನಾರ್ಹ ಸುಧಾರಣೆಗಳನ್ನುಜಾರಿಗೆ ತಂದ ಬಳಿಕ ದೇಶದಲ್ಲಿ ರೈಲು ದುರಂತಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಇತ್ತೀಚಿನ ವರ್ಷಗಳಲ್ಲಂತೂ ಸಣ್ಣಪುಟ್ಟ ದುರ್ಘಟನೆಗಳನ್ನು ಹೊರತುಪಡಿಸಿದಂತೆ
ರೈಲುಯಾನ ಎಂಬುದು ದೇಶದಲ್ಲಿ ಹೆಚ್ಚು ಸುರಕ್ಷಿತ ಎಂದು ಪರಿಗಣಿಸಲ್ಪಟ್ಟಿತ್ತು. ಆದರೆ ಯಾರ ಊಹೆಗೂ ನಿಲುಕದಂತೆ ಘಟಿಸಿದ ಈ ದುರಂತ ದೇಶಾದ್ಯಂತದ ಜನರನ್ನು ದಿ ಗ್ಮೂಢರನ್ನಾಗಿಸಿದೆ. ಆರಂಭದಲ್ಲಿ ಗೂಡ್ಸ್ ರೈಲೊಂದಕ್ಕೆ ಪ್ರಯಾಣಿಕರ ರೈಲೊಂದು ಢಿಕ್ಕಿ ಹೊಡೆದು ಕೆಲವು ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಾದಾಗ ಯಾರೂ ಈ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ತಾಸು ಕಳೆದ ಬಳಿಕ ಸಾವಿನ ಸಂಖ್ಯೆ ಹೆಚ್ಚುತ್ತಿದ್ದಂತೆ, ದೇಶದ ಜನರು ಬಾಲಾಸೋರ್‌ನತ್ತ ಆತಂಕದಿಂದಲೇ ದೃಷ್ಟಿ ಬೀರತೊಡಗಿದ್ದರು.
ಮೂರು ರೈಲುಗಳು ಅಪಘಾತಕ್ಕೀಡಾಗಿದ್ದರೂ ಈವರೆಗೂ ಘಟನೆಯ ಸ್ಪಷ್ಟ ಚಿತ್ರಣ ಲಭಿಸದಿರುವುದು ದೇಶದ ಜನತೆಯಲ್ಲಿ ಒಂದಿಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ. ದುರ್ಘಟನೆ ಸಂಭವಿಸಿದ ಬಳಿಕ ಅದರ ಭೀಕರತೆಯನ್ನು ಕಂಡು
ಇದು ತಾಂತ್ರಿಕ ದೋಷ ಅಥವಾ ವಿಧ್ವಂಸಕ ಕೃತ್ಯ ಎಂಬ ಸಂಶಯಗಳು ವ್ಯಕ್ತವಾಗಿದ್ದವು. ಆದರೆ ರೈಲ್ವೇ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯ ವೇಳೆ ಸ್ಟೇಶನ್ ಮ್ಯಾನೇಜರ್ ಮಾಡಿದ ಎಡವಟ್ಟಿನಿಂದಲೇ ಈ ದುರಂತ ಸಂಭವಿಸಿದೆ ಎಂದು ಕಂಡುಬಂದಿತ್ತು. ಏತನ್ಮಧ್ಯೆ ರವಿವಾರದಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮತ್ತೆ ಈ ತ್ರಿವಳಿ ರೈಲು ದುರಂತದ ಹಿಂದೆ ವಿಧ್ವಂಸಕ ಕೃತ್ಯ ಮತ್ತು ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯನ್ನು ಹಾಳುಗೆಡವಿರುವ ಸಾಧ್ಯತೆಗಳಿವೆ. ಈ ದುರ್ಘಟನೆಯಲ್ಲಿ ರೈಲುಗಳ ಚಾಲಕರು, ಸಿಬಂದಿಯ ತಪ್ಪಾಗಲಿ, ತಾಂತ್ರಿಕ ದೋಷವಾಗಲೀ ಇಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ದುರ್ಘಟನೆಗೆ ಕಾರಣವೇನು? ಎಂಬ ಬಗೆಗಿನ ಗೊಂದಲವನ್ನು ಜೀವಂತವಾಗಿರಿಸಿದ್ದಾರೆ.
ಈ ಭೀಕರ ದುರಂತ ಸಂಭವಿಸಲು ಕಾರಣವೇನುಎಂಬುದನ್ನು ಆದಷ್ಟು ಬೇಗ ಪತ್ತೆ ಹಚ್ಚಿ ತಪ್ಪಿತಸ್ಥರನ್ನು ಕಾನೂನಿನ ಕೈಗೆ ಒಪ್ಪಿಸುವ ಕಾರ್ಯ ಸಂಬಂಧಿತ ಇಲಾಖೆಗಳಿಂದಾಗಬೇಕಿದೆ. ಒಂದು ವೇಳೆ ಇದರ ಹಿಂದೆ ವಿಧ್ವಂಸಕರ ಕೈವಾಡ ಇದ್ದದ್ದೇ ಆದಲ್ಲಿ ಅವರನ್ನು ಮತ್ತು ಇಷ್ಟೊಂದು ದೊಡ್ಡ ದುಷ್ಕೃತ್ಯ ಎಸಗಲು ವಿಧ್ವಂಸಕರಿಗೆ ಹೇಗೆ ಸಾಧ್ಯವಾಯಿತು?ವಿಧ್ವಂಸಕರ ಜತೆ ರೈಲ್ವೇ ಸಿಬಂದಿ ಕೈಜೋಡಿಸಿದ್ದರೇ? ಮತ್ತಿತರ ಪ್ರಶ್ನೆಗಳಿಗೆ ತನಿಖೆಯ ವೇಳೆ ಉತ್ತರ ಕಂಡುಕೊಳ್ಳಬೇಕಿದೆ. ತನ್ಮೂಲಕ ದೇಶದ ಜನರ ಮನಸ್ಸಿನಲ್ಲಿ ಮೂಡಿರುವ ಎಲ್ಲ ಪ್ರಶ್ನೆಗಳು ಮತ್ತು ಗೊಂದಲಗಳನ್ನು ಪರಿಹರಿಸಬೇಕು.