Advertisement

Mother: ಕೈ ತುತ್ತು ತಿನ್ನಿಸಿದ ಜೀವ ನಲುಗದಿರಲಿ

02:52 PM Mar 17, 2024 | Team Udayavani |

ತಾಯಿಯೇ ಮೊದಲ ಗುರುವು

Advertisement

ತಾಯಿತಾನೆ ನಮ್ಮ ಒಲವು

ಅವಳಿಂದಲೇ ನಮ್ಮೆಲ್ಲ ಗೆಲುವು

ತುಂಬುವಳು ನಮ್ಮಲ್ಲಿ ಛಲವು

ನಮ್ಮ ಗೆಲುವಲಿ ಬೀಗುವುದು ಅವಳ ಮನವು

Advertisement

ನಮ್ಮೆಲ್ಲರ ಸಮಸ್ಯೆಯ ಪರಿಹರಿಸುವ ಸೂತ್ರವು ಅವಳೇ

ಹೀಗೆ ತಾಯಿಯ ಬಗ್ಗೆ ಹೇಳುತ್ತಾ ಹೋದರೆ ಬರೆಯಲು ಪದ ಗಳೇ ಸಾಲದು. ಅಷ್ಟು ಮಹತ್ವವನ್ನು ಹೊಂದಿದವಳು ತಾಯಿ.

ಇಂತಹ ದೈವತ್ವದ ಗುಣ ಹೊಂದಿದ ತಾಯಿಯನ್ನು ನಾವೆಲ್ಲ ಎಷ್ಟು ಅರ್ಥ ಮಾಡಿಕೊಂಡಿದ್ದೇವೆ. ಪ್ರತಿನಿತ್ಯದ ಪ್ರತಿಯೊಂದು ಆಗು ಹೋಗುಗಳಲ್ಲಿಯೂ ತಾಯಿಯ ಪಾತ್ರ ಅಪಾರವಾದುದು, ಅತಿಮುಖ್ಯವಾಗಿ ಬೇಕಾದುದಾಗಿದೆ. ನಮ್ಮೆಲ್ಲರ ನೋವಿನಲ್ಲಿ ಸಂತೈಸುವ, ನಲಿವಿನಲ್ಲಿ ಜತೆನಿಂತು ನಲಿಯುವ ಮನವು ಅವಳದು. ಇಂತಹ ತಾಯಿಯನ್ನು ನಾವೆಷ್ಟು ಅರ್ಥಮಾಡಿಕೊಂಡೇವು, ಅವಳ ನಗು ನಲಿವಲ್ಲಿ ನಾವೆಷ್ಟು ಪಾಲು ಕೊಂಡೇವು…

ಹೌದಲ್ಲವೇ, ಬೆಳಗಾದರೆ ಎಲ್ಲರಿಗೂ ಅಡಿಗೆ-ತಿಂಡಿ ತಯಾರು ಮಾಡಬೇಕು. ಸ್ನಾನಕ್ಕೆ ನೀರು ಬಿಸಿಮಾಡಬೇಕು. ಶಾಲೆಗೆ, ಕಾಲೇಜಿಗೆ, ಕಚೇರಿಗೆ, ಕೆಲಸಕ್ಕೆ ಹೋಗುವವರಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಡಬೇಕು. ಕೆಲವು ಮನೆಗಳಲ್ಲಿನ ಹೆಂಗಸರು ತಾವೂ ಕೆಲಸಕ್ಕೆ ಹೋಗಲು ತಯಾರಿ ಮಾಡಿಕೊಳ್ಳಬೇಕು.

ಒಂದು ಬಾಟಲಿಗೆ ನೀರು ಹಾಕಿಲ್ಲವೆಂದರೂ ಮಕ್ಕಳು ಅಮ್ಮಾ ನೀರು ಹಾಕಿಲ್ಲ, ಅಮ್ಮಾ ಶೂ ಕೊಡು, ಅಮ್ಮಾ ತಿಂಡಿ ಕೊಡು, ಅಮ್ಮಾ ಟೈಮಾಯ್ತು, ಬೇಗ ತಲೆ ಬಾಚಮ್ಮ, ಲೇ ಆಫೀಸಿಗೆ ಟೈಮಾಯ್ತು ಶರ್ಟ್‌ ಐರನ್‌ ಮಾಡಿದ್ದೀಯಾ ಹೀಗೆ ಒಂದಾ ಎರಡಾ ಮೈ ತುಂಬಾ ಇರುವ ಕೆಲಸಗಳನ್ನು ಕೆಲಸ ಎಂದು ಭಾವಿಸದೆ ತನ್ನ ಜವಾಬ್ದಾರಿ ಎಂದು ಭಾವಿಸಿ ಖುಷಿಯಾಗಿ ಎಲ್ಲರನ್ನೂ ಅವರವರ ಕೆಲಸಗಳಿಗೆ ಕಳುಹಿಸಿ ತನ್ನ ಮನೆಕೆಲಸಗಳನ್ನು ಮುಗಿಸಿ ತಾನೂ ತಿಂಡಿ ತಿನ್ನುವಾಗ ಸಮಯ ಬೆಳಗ್ಗೆ 11 ಅಥವಾ 12ಗಂಟೆಯಾದರೂ ಆದೀತು.

ಅನಂತರ ಮಧ್ಯಾಹ್ನದ ಅಡುಗೆ ಮಾಡಿ, ಬಟ್ಟೆ, ಮನೆ ಶುಚಿಗೊಳಿಸುವುದು. ಸಂಜೆ ಮಕ್ಕಳ ಓದಿನಲ್ಲಿ ಸಹಭಾಗಿಯಾಗಿ ಅವರಿಗೆ ತಿನ್ನುವ, ಉಡುವ ಎಲ್ಲವನ್ನೂ ಸರಿದೂಗಿಸಿ ರಾತ್ರಿ ಊಟಕ್ಕೆ ತಯಾರಿ ಮಾಡಿ ಎಲ್ಲರಿಗೂ ಬಡಿಸಿ ತಾನು ತಿನ್ನುವಾಗ ರಾತ್ರಿ 10 ಅಥವಾ11 ಗಂಟೆಯಾದರೂ ಆಯಿತು. ಕೆಲಸಕ್ಕೆ ಹೋಗುವ ಮಹಿಳೆಯರಿಗಂತೂ ಮನೆಯಲ್ಲಿ ಈ ಎಲ್ಲ ಕೆಲಸಗಳ ಜತೆ ಕೆಲಸದ ಜಾಗದಲ್ಲಿಯೂ ಒತ್ತಡದ ಕೆಲಸ ಮಾಡಿಕೊಂಡು ಎರಡೂ ಕಡೆ ಸರಿದೂಗಿಸಿಕೊಂಡು ಹೋಗುವುದು ಮಲ್ಟಿಟಾಸ್ಕಿಂಗ್‌ ಇದ್ದ ಹಾಗೆ. ಇಂತಹ ತಾಯಿಯನ್ನು ನಾವೆಂದಾದರೂ ಅರ್ಥ ಮಾಡಿಕೊಂಡಿದ್ದೇವೆಯೇ…

ಪ್ರತೀ ದಿನ ಪ್ರತೀ ನಿಮಿಷ ನಮ್ಮ ಏಳಿಗೆಗಾಗಿಯೇ, ನಮ್ಮ ಖುಷಿಯಲ್ಲಿಯೇ ತನ್ನ ಖುಷಿಯನ್ನು ಕಾಣುವ ಕರುಣಾಮಯಿ ತಾಯಿಯನ್ನು ನಾವೆಷ್ಟು ತಿಳಿದುಕೊಂಡೇವು. ಅವಳ ಕೆಲಸಗಳಲ್ಲಿ ನಾವೆಷ್ಟು ಭಾಗಿಯಾದೇವು…

ಸ್ವಲ್ಪವೂ ಬೇಸರವಿಲ್ಲದೆ ಪ್ರತಿನಿತ್ಯ ದುಡಿಯುವ ಜೀವನ ಅವಳದು. ಮನೆ, ಗಂಡ, ಮಕ್ಕಳೆಂದು ಮನೆಯವರಿಗಾಗಿಯೇ ಜೀವ ಮುಡಿಪಾಗಿಟ್ಟ ತ್ಯಾಗಮಯಿ ಅವಳು.

ಅರಿಯಿರಿ, ತಿಳಿಯಿರಿ ಇನ್ನು ಮುಂದಾದರೂ ಅವಳ ಬಗ್ಗೆ ಆಲೋಚಿಸಿ. ಅವಳ ಕೆಲಸಗಳಲ್ಲಿ ಸಣ್ಣದಾಗಿಯಾದರೂ ಭಾಗವಹಿಸಿ. ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳೇ ನಿಮ್ಮ ಅಮ್ಮನನ್ನು ಕೀಳಾಗಿ, ಕೇವಲವಾಗಿ ಕಾಣಬೇಡಿ. ಅವಳು ಹೇಗಿದ್ದರೂ ಅಮ್ಮ ಅಮ್ಮನೇ. ಅಮ್ಮ ಕೊಡುವ ಪ್ರೀತಿಯನ್ನು ಬೇರೆ ಯಾರೂ ಕೊಡಲಾರರು. ಪಕ್ಕದ ಮನೆಯ ಆಂಟಿ ತುಂಬಾ ಚೆನ್ನಾಗಿದ್ದಾರೆಂದು ಅವರನ್ನು ಅಮ್ಮನೆಂದು ಕರೆಯಲು ಸಾಧ್ಯವೇ…?

ಅಮ್ಮನನ್ನು ನೀನು ಓದಿಲ್ಲ ನಿನಗೆ ಇದರ ಬಗ್ಗೆ ತಿಳಿದಿಲ್ಲ ಎಂದೆಲ್ಲ ಜರಿಯಬೇಡಿ. ಅವಳ ಅನುಭವದ ಪ್ರೀತಿಯ ಮುಂದೆ ನಿಮ್ಮ ತಿಳುವಳಿಕೆ ಶೂನ್ಯ. ಅವಳಿಗೆ ಸಿಗಬೇಕಾದ ಸ್ಥಾನಮಾನ, ಪ್ರೀತಿ ಪ್ರೇಮವನ್ನು ನೀಡಿ. ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು, ವಿಚಾರವನ್ನು ಅವಳ ಮುಂದೆ ಹಂಚಿಕೊಳ್ಳಿ. ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಕಾರ ಮೂರ್ತಿಯೇ ಅವಳು ಎಂಬುದನ್ನು ಮರೆಯದಿರಿ.

ಆದರೂ… ಅಮ್ಮನ ಮಡಿಲಲ್ಲಿ ಆಡಿ ಕಳೆದ ಆ ಕ್ಷಣಗಳು ಅಮ್ಮನ ಲಾಲಿಹಾಡು ಆಟ ಆಡಿಸುತ್ತಾ ಊಟ ಮಾಡಿಸುತ್ತಿದ್ದ ರೀತಿ, ಆಡಿ ಬಿದ್ದು ಬಂದಾಗ ಸಂತೈಸುತ್ತಿದ್ದ ರೀತಿ ಇವೆಲ್ಲವೂ ಮತಾöವ ಜನ್ಮದಲ್ಲೂ ನಮಗೆ ಮತ್ತೆ ದೊರೆಯದ ಆನಂದದ ಕ್ಷಣಗಳು.

ಅಮ್ಮನ ನಡೆ ನುಡಿಯನ್ನು ಕಲಿಯಿರಿ, ಅವಳ ಮಮಕಾರವ ಅರಿಯಿರಿ, ಇನ್ನಾದರೂ ಅವಳ ಅರಿತು ನಡೆಯಿರಿ. ಮರೆಯಾದರೆ ಮತ್ತೆ ಸಿಗಲಾರದ ಮಾಣಿಕ್ಯವು ಅವಳು. ಹಾಗಾಗಿ ನಮ್ಮ ಜನುಮ ಇರುವವರೆಗೆ ಕೈ ತುತ್ತು ತಿನ್ನಿಸಿದ ಜೀವ ನಲುಗದಿರಲಿ. ಅವಳ ಮನವು ನಮ್ಮಿಂದಾಗಿ, ನಮ್ಮ ನಡವಳಿಕೆಯಿಂದಾಗಿ ಬೇಸರಿಸದಿರಲಿ, ಅವಳ ಅರಿತು ಬಾಳಿರಿ.

-ಭಾಗ್ಯ ಜೆ.

ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next