ಬಸವನಬಾಗೇವಾಡಿ: ನಮಗೆ ಜನ್ಮ ನೀಡಿದ ತಾಯಿಯೇ ದೇವರು. ನಮಗೆ ಬದುಕು ಕಟ್ಟಿಕೊಟ್ಟ ದೇವರು ಶಿಕ್ಷಕರ ಋಣ ಎಷ್ಟು ಜನ್ಮವೆತ್ತಿದ್ದರು ತೀರದು ಎಂದು ಬೆಂಗಳೂರಿನ ಕಲಿಕಾ ತರಬೇತಿದಾರ ಡಾ| ನಾ.ಸೋಮೇಶ್ವರ ಹೇಳಿದರು.
ಶನಿವಾರ ಪಟ್ಟಣದ ವಿಜಯಪುರ ರಸ್ತೆಯ ಬಸವ ಭವನದಲ್ಲಿ ಜಿಪಂ ಹಾಗೂ ಶಿಕ್ಷಣ ಮತ್ತು ಸಾಕ್ಷರತಾ, ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ, ಚಾಣಕ್ಯ ಕರಿಯರ ಅಕಾಡೆಮಿ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕಲಿಕಾ ಕಾರ್ಯಗಾರದ ಕಲಿಕೆ ಗ್ರಹಿಕೆ ವಿಷಯದ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಗುರುವಿನಿಂದ ಪಡೆದ ಜ್ಞಾನವನ್ನು ಸಾವಿರಾರು ಕೈಗಳಿಗೆ ಹಂಚುವ ಕೆಲಸವಾಗಬೇಕು. ಅವಾಗ ಸಮಾಜದ ಋಣ ಮುಟ್ಟಿಸಿದ್ದಂತಾಗುತ್ತದೆ. ಭಾರತ ಮತ್ತು ಕರ್ನಾಟಕದಲ್ಲಿ ಸಿಗುವ ಕನ್ನಡ ಜಾನಪದ, ಕಲೆ, ಸಂಸ್ಕೃತಿ, ಸಂಪ್ರದಾಯ ಬೇರ ಯಾವ ದೇಶದಲ್ಲಿ ಸಿಗುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿ ಆಸ್ತಿ, ಸಂಪತ್ತನ್ನು ಗಳಿಸಿ ನಮ್ಮ ಕೈಯಲ್ಲಿ ಎಲ್ಲವೂ ಇದೆ. ದೇಶ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ನೋಡಿ ಕಲಿಯಬೇಕು. ಕೇಳಿ ಕಲಿಯಬೇಕು. ಮಾಡಿ ಕಲಿಯಬೇಕು. ಉತ್ತಮ ಅಭ್ಯಾಸ ರೂಢಿಸಿಕೊಂಡು ಪಾಠವನ್ನು ನೆನಪಿಟ್ಟಿಕೊಳ್ಳಬೇಕಾದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ಆಗಾಗ್ಗೆ ವೈದ್ಯಕೀಯ ಪರೀಕ್ಷೆ ಮಾಡಿಸುವ ಮೂಲಕ ಮಕ್ಕಳ ಉತ್ತಮ ಆರೋಗ್ಯಕ್ಕೆ ಗಮನ ಹರಿಸಬೇಕು. ಪಂಚೇಂದ್ರಿಯಗಳು ಆರೋಗ್ಯವಾಗಿದ್ದರೆ ಮಾತ್ರ ನಾವು ಮಾಡುವ ಕಾರ್ಯದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಜಗತ್ತು ವೈಜ್ಞಾನಿಕವಾಗಿ ಮುಂದುವರಿದಿದೆ. ಆದರೆ ಮನುಷ್ಯತ್ವವನ್ನು ಮರೆಯುತ್ತಿದ್ದೇವೆ. ಹೀಗೆ ಮುಂದುವರಿದರೆ ಜಗತ್ತಿಗೆ ಆಪತ್ತು ತಪ್ಪಿದ್ದಲ್ಲ. ಆದ್ದರಿಂದ ಪ್ರತಿಯೊಬ್ಬರು ಮನುಷ್ಯತ್ವ ಮರೆಯಬಾರದು. ಪಕ್ಷಿ, ಪ್ರಾಣಿಗಳು ಕೂಡಾ ಪ್ರೀತಿಯಿಂದ ಬದುಕುತ್ತವೆ. ನಾವು ಮನುಷ್ಯರು ಅನ್ನುವುದನ್ನು ಮರೆಯಬಾರದು. ಮರೆತರೆ ಅನಾಹುತಗಳು ಉಂಟಾಗುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ತರುವ ಕೆಲಸವಾಗಬೇಕು, ಅಂದಾಗ ಮಾತ್ರ ಇಂತಹ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರಿ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಕರ್ನಾಟಕ ರಾಜ್ಯ ವಿಮಾ ಸಹಕಾರಿ ಸಲಹಾ ಮಂಡಳಿ ಅಧ್ಯಕ್ಷ ಶಿವನಗೌಡ ಬಿರಾದಾರ, ನ್ಯಾಯವಾದಿ ಬಿ.ಕೆ. ಕಲ್ಲೂರ, ನಿವೃತ್ತ ವಿಶೇಷ ಭೂ ಸ್ವಾಧೀನಾಧಿ ಕಾರಿ ಎಂ.ಎನ್. ಚೋರಗಸ್ತಿ, ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ ಸೇರಿದಂತೆ ಅನೇಕರು ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಂಗಮೇಶ ಪೂಜಾರಿ ಸ್ವಾಗತಿಸಿದರು. ಶಿಕ್ಷಕ ಅಶೋಕ ಹಂಚಲಿ ನಿರೂಪಿಸಿದರು. ಕಾರ್ಯಾಗಾರದಲ್ಲಿ ತಾಲೂಕಿನ ವಿವಿಧ ಪ್ರೌಢಶಾಲೆಗಳಿಂದ 450ಕ್ಕೂ ಹೆಚ್ಚು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.