ಬೀದರ: ಮಾನವ ಜನಾಂಗದ ಕಲ್ಯಾಣವನ್ನು ಬಯಸಿದ ಜಗದ್ಗುರು ರೇಣುಕಾದಿ ಪಂಚಾಚಾರ್ಯರ ಜಯಂತಿ ಯುಗಮಾನೋತ್ಸವ ಆಚರಿಸಬೇಕೆಂಬ ಬೇಡಿಕೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಬೇಮಳಖೇಡ ಹಿರೇಮಠದ ಡಾ| ರಾಜಶೇಖರ ಶಿವಾಚಾರ್ಯರು ಬೇಸರ ವ್ಯಕ್ತಪಡಿಸಿದರು.
ನೌಬಾದ್ ಜ್ಞಾನ ಶಿವಯೋಗಾಶ್ರಮದಲ್ಲಿ ನಡೆದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪಂಚಾಚಾರ್ಯರು ಜಗದ ಬೆಳಕಾಗಿರುವರು. ಸಕಲ ಜೀವರಾಶಿಗಳ ಕಲ್ಯಾಣ ಬಯಸಿದ ಕರುಣಾ ಮೂರ್ತಿಗಳು. ಧರ್ಮದ ವಿರುದ್ಧ ಅಧರ್ಮವು ತಾಂಡವವಾಡುತ್ತಿದ್ದಾಗ ಅವತರಿಸಿದ ಮಹಾಮಹಿಮರು. ವೀರಶೈವ ಧರ್ಮವನ್ನು ಸಂಸ್ಥಾಪಿಸಿ ಶಿವ ಸಿದ್ಧಾಂತವನ್ನು ಬೋಧಿಸಿದ ಜ್ಞಾನ ಚೈತನ್ಯರು. ದೇಶದ ಆಯ್ದ ಐದು ಭಾಗದಲ್ಲಿ ವೀರಶೈವ ಪಂಚಪೀಠಗಳನ್ನು ಸಂಸ್ಥಾಪಿಸಿ ಗುರು ಪರಂಪರೆಗೆ ನಾಂದಿ ಹಾಡಿದ ವಿಭೂತಿಗಳು. ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹರ್ಷಿಗೆ ಬೋಧಿಸಿದ ಸಿದ್ಧಾಂತ ಸಾರವೇ ಸಿದ್ಧಾಂತ ಶಿಖಾಮಣಿ. ಇದು ವೀರಶೈವ ಧರ್ಮ ಗ್ರಂಥವಾಗಿದೆ ಎಂದರು.
ಪಂಚಪೀಠಗಳು ದೇಶದ ಏಕತೆ, ಸಂಸ್ಕೃತಿ ಪರಂಪರೆಗೆ ಅಮೂಲ್ಯ ಕೊಡುಗೆ ನೀಡುತ್ತಿವೆ. ಧಾರ್ಮಿಕ ಜನಜಾಗೃತಿಯ ಜೊತೆಗೆ ಶೈಕ್ಷಣಿಕ, ಸಾಮಾಜಿಕ, ಕೃಷಿ, ಸಾಂಸ್ಕೃತಿಕ, ದಾಸೋಹ ಮುಂತಾದ ಹತ್ತು ಹಲವಾರು ವಿಧಾಯಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿವೆ. ಪಂಚಪೀಠಗಳ ಶಾಖಾಮಠಗಳು ದೇಶಾದ್ಯಂತ ಸಾವಿರಾರು ಸಂಖ್ಯೆಯಲ್ಲಿದ್ದು, ಸಮಾಜೋಧಾರ್ಮಿಕ ಜಾಗೃತಿ ಕಾರ್ಯ ಮಾಡುತ್ತಿವೆ ಎಂದರು.
ರಾಜ್ಯದಲ್ಲಿ ಬಹುತೇಕ ಮಹಾತ್ಮರ ಜಯಂತಿಗಳನ್ನು ರಾಜ್ಯ ಸರ್ಕಾರ ಆಚರಿಸಿಕೊಂಡು ಬರುತ್ತಿದ್ದು, ಅದರಂತೆ ಬಹುಸಂಖ್ಯಾತರಾದ ವೀರಶೈವ ಲಿಂಗಾಯತರ ಪರಮಾರಾಧ್ಯರೆನಿಸಿದ ಪಂಚಾಚಾರ್ಯರ ಜಯಂತಿ ಆಚರಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆಯಾಗಿದ್ದರೂ ರಾಜ್ಯ ಸರ್ಕಾರ ಪರಿಗಣಿಸುತ್ತಿಲ್ಲ. ಈಗಲಾದರೂ ಸರ್ಕಾರ ಬರುವ ಯುಗಾದಿ ಹಬ್ಬದ ನಂತರ 5ನೇ ದಿನಕ್ಕೆ ಅಂದರೆ ಸ್ಕಂದ ಷಷ್ಠಿಯಂದು ಪಂಚಾಚಾರ್ಯರ ಜಯಂತಿ ಯುಗಮಾನೋತ್ಸವ ಆಚರಿಸಬೇಕೆಂದು ಒತ್ತಾಯಿಸಿದರು.
ನಗರಸಭೆ ಸದಸ್ಯೆ ಮಹಾದೇವಿ ಬಸವರಾಜ ಹುಮನಾಬಾದೆ ದಂಪತಿಯಿಂದ ಪೂಜೆ ನೆರವೇರಿತು. ಮಾದಪ್ಪಾ ಭಂಗೊರೆ, ಕುಶಾಲರಾವ ಯಾಬಾ, ಕಾಶಿನಾಥ ಶಂಭು, ಕಂಟೆಪ್ಪ ಭಂಗೊರೆ, ಮಹಾಂತೇಶ ಡೊಂಗರಗಿ, ಸಂಗಮೇಶ ಹುಮನಾಬಾದೆ, ಚಂದ್ರಪ್ಪಾ ಭಂಗೂರೆ, ಧನರಾಜ ಖತಗಾಂವ, ಸಂಜುಕುಮಾರ, ಗುರುದೇವ ಕೋಳಾರ (ಕೆ), ಶಂಕಯ್ನಾ ಆಲೂರ (ಕೆ), ಸತೀಶ, ಶಿವಾರಜ ಕೋಟೆ ಮುಂತಾದ ಗಣ್ಯರು ಇದ್ದರು.