Advertisement

ಅಗ್ನಿವೀರರ ಭವಿಷ್ಯ ಅತಂತ್ರವಾಗದಿರಲಿ

01:05 AM Aug 01, 2022 | Team Udayavani |

ಸಕ್ರಿಯ ಸೇವೆಯಲ್ಲಿರುವ ಯೋಧರ ವಯಸ್ಸು ವೃದ್ಧಿಸುತ್ತಿರುವುದರ ಕುರಿತು ಸೇನೆಯ ಆಂತರಿಕ ವಲಯದಲ್ಲಿ ಕಾಲ ಕಾಲಕ್ಕೆ ಚರ್ಚೆ ನಡೆಯುತ್ತಲೇ ಬಂದಿದೆ. ಗಡಿಯಲ್ಲಿ ಆಕ್ರಮಣಕಾರಿ ಮನೋಭಾವ ತೋರುತ್ತಿರುವ ಎಳೆಯ ವಯಸ್ಸಿನ ಚೀನೀ ಸೈನಿಕರ ಎದುರು ನಮ್ಮ ಸೈನಿಕರು ಮತ್ತು ಅಧಿಕಾರಿಗಳು ವಯಸ್ಸು ಮೀರಿದವರಂತೆ ಕಾಣುತ್ತಿದ್ದುದು ದೀರ್ಘ‌ಕಾಲದಿಂದ ಸರಕಾರಕ್ಕೆ ಮತ್ತು ಸೇನೆಗೆ ತುಸು ಚಿಂತೆಯ ವಿಷಯವಾಗಿ ಕಾಡಿತ್ತು ಎನ್ನುವುದು ಸುಳ್ಳಲ್ಲ. ಕಾರ್ಗಿಲ್‌ ಯುದ್ಧದ ಅನಂತರ ಈ ಕುರಿತ ಚರ್ಚೆ ಕಾವು ಪಡೆದುಕೊಂಡಿತು ಎನ್ನಬಹುದು. 40-42ರ ಆಸುಪಾಸು ಇರುತ್ತಿದ್ದ ಕಂಪೆನಿ ಮತ್ತು ಬಟಾಲಿಯನ್‌ ಕಮಾಂಡರ್‌ ವಯಸ್ಸು 30-35ರ ಆಸುಪಾಸಿಗೆ ಇಳಿಸಬೇಕು ಎನ್ನುವ ಕಾರಣದಿಂದಾಗಿಯೇ ಅಧಿಕಾರಿಗಳ ಪ್ರಮೋಶನ್‌ ತ್ವರಿತಗೊಳಿಸುವ ಎವಿ ಸಿಂಗ್‌ ಸಮಿತಿಯ ವರದಿಯ ಶಿಫಾರಸುಗಳನ್ನು 2004ರಲ್ಲಿ ಅನುಷ್ಠಾನಗೊಳಿಸಲಾಯಿತು.

Advertisement

ಯುವ ಯೋಧರ ಲಭ್ಯತೆ
ಜವಾನರ ವಿಷಯದಲ್ಲೂ ಇದು ಸಮಾನವಾಗಿಯೇ ಅನ್ವಯವಾಗುತ್ತದೆ. ಯಾವುದೇ ಬೆಟಾಲಿಯನ್‌ ಒಂದರಲ್ಲಿ ಸೈನಿಕರ ಆನ್‌ ರೋಲ್‌ ಸಂಖ್ಯೆ ಸುಮಾರು 800 ಇದ್ದರೆ ರಜೆ, ತರಬೇತಿ, ತಾತ್ಕಾಲಿಕ ನಿಯೋಜನೆ, ಲೋ ಮೆಡಿಕಲ್‌ ಕೆಟಗರಿ ಎಂದೆಲ್ಲಾ ಕಳೆದು ಸುಮಾರು 300 ಜವಾನರಷ್ಟೇ ತುರ್ತು ಕಾರ್ಯಾಚರಣೆಗೆ ಲಭ್ಯವಾಗುತ್ತಾರೆ. ಅವರಲ್ಲೂ ಅರ್ಧದಷ್ಟು ಯೋಧರು 35ಕ್ಕಿಂತ ಹೆಚ್ಚಿನ ವಯೋಮಿತಿಯವರಾಗಿರುತ್ತಾರೆ. ಅರ್ಥಾತ್‌ 800 ಸೈನಿಕರಿರುವ ಬೆಟಾಲಿಯನ್‌ನಲ್ಲಿ ಯಾವುದೇ ಸಮಯದಲ್ಲಿ 150 ಯುವ ಯೋಧರನ್ನು ಒಟ್ಟುಗೂಡಿಸುವುದು ಕಷ್ಟ ಎನಿಸುತ್ತದೆ. ದೇಶದ ರಕ್ಷಣೆಯ ಭಾರ ಹೊತ್ತಿರುವ ಸೇನೆ ದಿನದಿಂದ ದಿನಕ್ಕೆ ವಯೋವೃದ್ಧ ಪಡೆಯಾಗುವುದನ್ನು ತಡೆಯುವ ಕುರಿತು ದೀರ್ಘ‌ ಕಾಲದಿಂದ ಚಿಂತನ-ಮಂಥನ ನಡೆದಿತ್ತು.

ಶಾರ್ಟ್‌ ಸರ್ವೀಸ್‌ ಕಮಿಷನ್‌ ಮಾದರಿ
ಸೇನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಖಾಲಿ ಹುದ್ದೆ ಭರ್ತಿ ಕೂಡ ದೀರ್ಘ‌ ಸಮಯದಿಂದ ಆಗಾಗ್ಗೆ ಮುನ್ನೆಲೆಗೆ ಬರುತ್ತಿತ್ತು. ವಿದೇಶಗಳಲ್ಲಿದ್ದಂತೆ ಕಡ್ಡಾಯ ಮಿಲಿಟರಿ ಸೇವೆಯ ಕುರಿತು ಎಕೆ ಆಂಟನಿ ರಕ್ಷಣ ಮಂತ್ರಿಯಾಗಿರುವಾಗಲೂ ಸಂಸತ್ತಿನಲ್ಲೇ ಪ್ರಸ್ತಾಪಿಸಲಾಗಿತ್ತು. ಅದು ನಮ್ಮ ದೇಶದಲ್ಲಿ ಸಾಧ್ಯವಿಲ್ಲ ಎಂದು ಕೈ ಬಿಡಲಾಗಿತ್ತು. ಅಧಿಕಾರಿಗಳ ನೇಮಕಾತಿಯಲ್ಲಿ ಈಗಾಗಲೇ ಪಿಂಚಣಿ ಸೌಲಭ್ಯವಿಲ್ಲದ 10 ವರ್ಷದ ಅವಧಿಗೆ ನೇಮಕಗೊಳ್ಳುವ ಶಾರ್ಟ್‌ ಸರ್ವೀಸ್‌ ಕಮಿಷನ್‌ ವ್ಯವಸ್ಥೆ ಜಾರಿಯಲ್ಲಿದೆ.

ಹೆಚ್ಚು ಕಡಿಮೆ ಅದೇ ಮಾದರಿಯಲ್ಲಿ ಇದೀಗ ಅಗ್ನಿಪಥ ಯೋಜನೆಯಡಿ ನಾಲ್ಕು ವರ್ಷಗಳ ಅವಧಿಗೆ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಸೇನೆಗೆ ಯುವ ಸೈನಿಕರ ಲಭ್ಯತೆ ಹೆಚ್ಚಾಗುವುದಲ್ಲದೇ ಟೂ ಫ್ರಂಟ್‌ ಯುದ್ಧದಂತಹ ತುರ್ತು ಸಂದರ್ಭದಲ್ಲಿ ನಾಗರಿಕ ಸಮಾಜದಿಂದ ದೊಡ್ಡ ಸಂಖ್ಯೆಯ ತರಬೇತಾದ ಸ್ವ ಇಚ್ಛೆಯ ಸೈನಿಕರೂ ಸಿಗುತ್ತಾರೆ ಎನ್ನುವ ತರ್ಕ ಇದೆ.

ಕಿರು ಅವಧಿಯ ಸೈನ್ಯ ಸೇವೆಯ ಅವಕಾಶ
ಇದು ಕಡಿಮೆ ಅವಧಿಗೆ ಸೇನೆಗೆ ಸೇರಲು ಇಚ್ಛಿಸುವ ಅನೇಕ ಯುವಕ-ಯುವತಿಯರಿಗೆ ಅವಕಾಶ ಒದಗಿಸಿಕೊಡುತ್ತದೆ. ಕಿರು ಅವಧಿಗೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಾಗರಿಕ ಬದುಕಿಗೆ ಮರಳಬೇಕೆಂಬ ಇಚ್ಛೆಯ ಅನೇಕ ಯುವಕರೂ ಇದ್ದಾರೆ. ವರ್ತಮಾನದಲ್ಲೂ 5-6 ವರ್ಷ ಸೇವೆ ಸಲ್ಲಿಸಿ ಪೆನ್ಶನ್‌ ಇಲ್ಲದೇ ಸೇವಾಮುಕ್ತಿ ಪಡೆಯುವ ಅನೇಕ ಯೋಧರೂ ಇದ್ದಾರೆ. ಕೆಲವೊಮ್ಮೆ ಅಂತಹ ಯೋಧರಿಗೆ ಸಕಾಲದಲ್ಲಿ ಡಿಸಾcರ್ಜ್‌ ಸಿಗುವುದೂ ಇಲ್ಲ. ಸುಮಾರು ಹತ್ತು ವರ್ಷ ಸೇವೆ ಸಲ್ಲಿಸಿದ, ಡಿಸಾcರ್ಜ್‌ ಸಿಗದ ಕಾರಣ ಅನಿವಾರ್ಯವಾಗಿ 5-6 ವರ್ಷ ನಿರುತ್ಸಾಹದಿಂದ ಸೇವೆ ಯಲ್ಲಿ ಮುಂದುವರೆಯುವ ಉದಾ ಹರಣೆಗಳೂ ಕಡಿಮೆ ಏನಿಲ್ಲ. ಅನೇಕ ಉದ್ಯಮಿಗಳ, ವ್ಯಾಪಾರಸ್ಥ ಕೌಟುಂಬಿಕ ಹಿನ್ನೆಲೆಯ ಯುವಕರು 5-6 ವರ್ಷದ ಸೀಮಿತ ಅವಧಿಗೆ ಸೇವೆ ಸಲ್ಲಿಸುವ ಇಚ್ಚುಕರಾಗಿರುತ್ತಾರೆ. ಅಗ್ನಿಪಥ ಯೋಜನೆ ಇಂತಹ ಉತ್ಸಾಹಿ ಯುವಕರನ್ನು ಆಕರ್ಷಿಸಬಹುದು.

Advertisement

ಹಿರಿತನ ಮತ್ತು ಉತ್ಸಾಹ
ಇಂದಿನ ಉದ್ಯೋಗ ಮಾರುಕಟ್ಟೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಒಂದು ಉದ್ಯೋಗದಲ್ಲಿ ದೀರ್ಘ‌ ಅವಧಿಗೆ ಮುಂದುವರಿಯುವವರ ಸಂಖ್ಯೆ ಕಡಿಮೆಯೇ ಎನ್ನಬಹುದು. 4/5 ವರ್ಷ ಎಳೆಯ ವಯಸ್ಸಿನಲ್ಲಿ ನಾಗರಿಕ ಬದುಕಿಗೆ ಮರಳುವವರು ಬೇರೊಂದು ಉದ್ಯೋಗಕ್ಕೆ ಸುಲಭವಾಗಿ ಒಗ್ಗಿಕೊಳ್ಳಬಲ್ಲರು. ಅಗ್ನಿಪಥ ಯೋಜನೆ ಸೇನೆಯ ಆವಶ್ಯಕತೆ ಮತ್ತು ವರ್ತಮಾನದ ಟ್ರೆಂಡ್‌ ಎರಡನ್ನೂ ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎನ್ನಬಹುದು. ನೂರರಲ್ಲಿ 25ರಷ್ಟು ಆಸಕ್ತ ಯೋಧರನ್ನು ಉಳಿಸಿಕೊಳ್ಳುವುದರಿಂದ ಹಿರಿತನ ಮತ್ತು ಉತ್ಸಾಹ ಎರಡಕ್ಕೂ ಸಮಾನ ಆದ್ಯತೆ ನೀಡಿದಂತಾಗುತ್ತದೆ. ಯಾವುದೇ ಹೊಸ ಸುಧಾರಣೆ ಜಾರಿಗೆ ತಂದ ಅನಂತರವೇ ಅದರಲ್ಲಿನ ನ್ಯೂನತೆ ಕಂಡು ಬರುತ್ತದೆ ಮತ್ತು ಅವುಗಳನ್ನು ಮುಂದೆಯೂ ಸರಿಪಡಿಸಬಹುದು. ಅಗ್ನಿಪಥದ ನಾಲ್ಕು ವರ್ಷದ ಸೇವಾವಧಿ ಕೊಂಚ ಕಡಿಮೆಯಾಯಿತು ಎನ್ನಬಹುದು.

ಸಮರ್ಪಕ ಪುನರ್ವಸತಿ ವ್ಯವಸ್ಥೆಯಾಗಲಿ
ನಿವೃತ್ತ ಅಗ್ನಿವೀರರಿಗೆ ಕಾನೂನುಬದ್ಧ ಪುನರ್ವಸತಿಯ ಅವಕಾಶ ಒದಗಿಸಿಕೊಡಬೇಕು ಎನ್ನುವ ಬೇಡಿಕೆ ನ್ಯಾಯೋಚಿತವಾದದ್ದೇ ಎನ್ನಬಹುದು. ಯೋಜನೆಯ ಕುರಿತಂತೆ ಮಾಜಿ ಸೈನಿಕರ, ಯುವಕರ ಸಂದೇಹಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರ ಸೂಕ್ತ ಮಾರ್ಪಾಟು ಮಾಡಿದರೆ ಇದು ಸೇನೆಯ ಶಕ್ತಿ, ಸ್ಫೂರ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಬಹುದು. 5 ವರ್ಷಕ್ಕೆ ಆಯ್ಕೆಯಾಗುವ ಜನಪ್ರತಿನಿಧಿಗಳಿಗೆ ಪೆನ್ಶನ್‌ ನೀಡುವ ಸರಕಾರ ದೇಶಕ್ಕಾಗಿ ತ್ಯಾಗ ಮಾಡುವ ಯೋಧರ ಭವಿಷ್ಯವನ್ನು ಅತಂತ್ರ ಮಾಡ ಹೊರಟಿದೆ ಎನ್ನುವ ಜನಾಕ್ರೋಶ ಹುರುಳಿಲ್ಲದ್ದಲ್ಲ.

ಹತ್ತು ವರ್ಷ ಅವಧಿಯ ಶಾರ್ಟ್‌ ಸರ್ವಿಸ್‌ ಕಮಿಷನ್ಡ್ ಹುದ್ದೆ ನಿಭಾಯಿಸಿ ನಾಗರಿಕ ಬದುಕಿಗೆ ಮರಳುವ ಅಧಿಕಾರಿಗಳು ಪೆನ್ಶನ್‌ ಇಲ್ಲದೆಯೂ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಏಕೆಂದರೆ ಅವರಿಗೆ ಸೇನೆಯಿಂದ ಹೊರಬರುತ್ತಿದ್ದಂತೆ ಭರಪೂರ ಅವಕಾಶಗಳು ಲಭ್ಯ. ಅಂತಹದೇ ಅವಕಾಶ ಅಗ್ನಿವೀರರಿಗೂ ಲಭ್ಯವಾಗುವ ಸ್ಪಷ್ಟ ಕಾನೂನಾತ್ಮಕ ವ್ಯವಸ್ಥೆ ಜಾರಿಗೆ ಬರಬೇಕು. ಪ್ರಸ್ತುತ ಅಧಿಕಾರದಲ್ಲಿರುವ ರಾಜಕಾರಣಿಗಳ ಭರವಸೆ ಬಾಯಿ ಮಾತಿಗೆ ಸೀಮಿತವಾಗಬಾರದು. ಅಗ್ನಿವೀರರನ್ನು ಪೆನ್ಶನ್‌ ನೀರೀಕ್ಷಿಸದಷ್ಟು ಸಬಲರನ್ನಾಗಿಸುವ ಉತ್ತಮ ವ್ಯವಸ್ಥೆ ಜಾರಿಗೆ ಬರಲಿ.

-ಬೈಂದೂರು ಚಂದ್ರಶೇಖರ ನಾವಡ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next