Advertisement

ಚುನಾವಣಾ ಭರವಸೆಗಳು ಕಾರ್ಯಸಾಧುವಾಗಿರಲಿ

10:42 PM Jan 12, 2023 | Team Udayavani |

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಮೂರು ತಿಂಗಳುಗಳಷ್ಟೇ ಬಾಕಿ ಉಳಿದಿದೆ. ರಾಜ್ಯದ ಪ್ರಮುಖ ಮೂರು ಪಕ್ಷಗಳಾದ ಆಡಳಿತಾರೂಢ ಬಿಜೆಪಿ, ವಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಈಗಾಗಲೇ ಪ್ರಚಾರ ಕಾರ್ಯದಲ್ಲಿ ನಿರತವಾಗಿವೆ. ಚುನಾವಣೆ ಘೋಷಣೆಗೆ ಮುನ್ನ ಬಿಜೆಪಿ ಸರಕಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಪಕ್ಷದ ಘಟಾನುಘಟಿ ನಾಯಕರನ್ನು ರಾಜ್ಯಕ್ಕೆ ಕರೆತಂದು ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರದ ಸಾಧನೆ ಮತ್ತು ಭವಿಷ್ಯದ ಯೋಜನೆಗಳನ್ನು ಜನರ ಮುಂದಿಡುವ ಪ್ರಯತ್ನ ನಡೆಸಿದೆ. ವಿಪಕ್ಷ ಕಾಂಗ್ರೆಸ್‌ ಕೂಡ ಈಗಾಗಲೇ ಒಂದು ಸುತ್ತಿನ ಯಾತ್ರೆ ನಡೆಸಿ ಇದೀಗ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿದೆ. ಜೆಡಿಎಸ್‌ ತನ್ನದೇ ಆದ ಕಾರ್ಯ ತಂತ್ರದೊಂದಿಗೆ ಚುನಾವಣ ಪ್ರಚಾರದಲ್ಲಿ ನಿರತವಾಗಿದೆ.

Advertisement

ಇದೇ ವೇಳೆ ಪಕ್ಷಗಳ ನಾಯಕರು ರಾಜ್ಯದ ಜನತೆಗೆ ಪ್ರಚಾರದ ಸಂದರ್ಭದಲ್ಲಿ ಹತ್ತು ಹಲವು ಭರವಸೆ, ಉಚಿತ ಕೊಡುಗೆಗಳನ್ನು ಘೋಷಿಸಲಾರಂಭಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದೀಚೆಗೆ ದೇಶಾದ್ಯಂತ ಪಕ್ಷ ಗಳು ಚುನಾವಣೆಗೂ ಮುನ್ನ ನೀಡುವ ಈ ಉಚಿತ ಕೊಡುಗೆ, ಭರವಸೆಗಳ ಬಗೆಗೆ ಚರ್ಚೆಗಳು ನಡೆಯುತ್ತಲೇ ಬಂದಿವೆ. ಜನರ ತೆರಿಗೆ ಹಣವನ್ನು ರಾಜಕೀಯ ಪಕ್ಷಗಳು ತಮ್ಮ ಅಧಿಕಾರದ ಲಾಲಸೆಗಾಗಿ ಉಚಿತ ಕೊಡುಗೆಗಳ ಮೂಲಕ ವ್ಯರ್ಥ ಮಾಡುವುದು ಸರಿಯಲ್ಲ ಎಂಬ ವಾದ ಒಂದೆಡೆಯಾದರೆ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳು ಅಥವಾ ಬಡಜನರಿಗೆ ಇಂಥ ಕೊಡುಗೆಗಳನ್ನು ನೀಡುವ ಮೂಲಕ ಅವರನ್ನೂ ಸಮಾಜದ ಮುಖ್ಯವಾಹಿನಿಗೆ ಕರೆತರಲು ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ ಎಂಬ ಪ್ರತಿವಾದವೂ ಇದೆ. ಇತ್ತೀಚೆಗೆ ಚುನಾವಣ ಆಯೋಗ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ನೀಡುವ ಭರವಸೆ ಮತ್ತು ಕೊಡುಗೆಗಳನ್ನು ಹೇಗೆ ಅನುಷ್ಠಾನಗೊಳಿಸಲಾಗುವುದು ಮತ್ತು ಇವುಗಳಿಗಾಗಿ ಹಣವನ್ನು ಹೇಗೆ ಕ್ರೋಡೀಕರಿಸಲಾಗುವುದು ಎಂದು ಘೋಷಣೆಯ ಸಂದರ್ಭದಲ್ಲಿಯೇ ತಿಳಿಸಬೇಕು ಎಂಬ ಪ್ರಸ್ತಾವವನ್ನು ದೇಶದ ಮುಂದಿಡುವ ಮೂಲಕ ಈ ಕುರಿತಾಗಿನ ಚರ್ಚೆಗೆ ಒಂದು ತಾರ್ಕಿಕ ಅಂತ್ಯ ಹಾಡಲು ದಿಟ್ಟ ಹೆಜ್ಜೆ ಇರಿಸಿದೆ. ಬುಧವಾರ ಬೆಳಗಾವಿಯಲ್ಲಿ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಪ್ರತೀ ಮನೆಗೆ ಮಾಸಿಕ 200 ಯೂನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಹತ್ತು ಹಲವು ಭರವಸೆಗಳು, ಉಚಿತ ಕೊಡುಗೆಗಳ ಮಹಾಪೂರವೇ ವಿವಿಧ ಪಕ್ಷಗಳು ಮತ್ತು ನಾಯಕರಿಂದ ಹರಿದು ಬರುವ ಸಾಧ್ಯತೆಗಳಿವೆ.

ಯಾವುದೇ ವಿಚಾರವಾಗಿ ಭರವಸೆ ನೀಡುವ ಮುನ್ನ ಅದರ ವಾಸ್ತವಿ ಕತೆ, ಆವಶ್ಯಕತೆ, ಕಾರ್ಯಸಾಧ್ಯತೆ ಮತ್ತು ಅದು ರಾಜ್ಯದ ಅಭಿವೃದ್ಧಿಗೆ ಎಷ್ಟು ಪೂರಕ ಹಾಗೂ ಅನುಷ್ಠಾನದ ಬಗ್ಗೆ ನಾಯಕರು ಒಂದಿಷ್ಟು ಪೂರ್ವಾಲೋಚನೆ ಮಾಡಬೇಕಿರುವುದು ಅತ್ಯಗತ್ಯ. ದೂರದೃಷ್ಟಿ ಹೊಂದಿದ ಮತ್ತು ಜನರ ಹಿತದೃಷ್ಟಿಯಿಂದ ಅತೀ ಅಗತ್ಯ ಅಥವಾ ಅನಿವಾರ್ಯ ಎಂಬಂಥ ಭರವಸೆ, ಕೊಡುಗೆಗಳನ್ನು ನಾಯಕರು ಘೋಷಿಸಿ ಅವುಗಳನ್ನು ಅನುಷ್ಠಾನಕ್ಕೆ ತಂದದ್ದೇ ಆದಲ್ಲಿ ಆ ಘೋಷಣೆಗೂ ಒಂದು ಅರ್ಥ ಬರಲು ಸಾಧ್ಯ. ಹೀಗಾಗಿ ಪ್ರತಿಯೊಂದು ಪಕ್ಷ ಮತ್ತು ನಾಯಕರು ಯಾವುದೇ ಭರವಸೆ ಅಥವಾ ಕೊಡುಗೆಯ ಘೋಷಣೆ ಮಾಡುವುದಕ್ಕೂ ಮುನ್ನ ಒಂದಿಷ್ಟು “ಮನೆಕೆಲಸ’ ಮಾಡುವುದು ಅತ್ಯಗತ್ಯ. ಇನ್ನಾದರೂ ಪಕ್ಷಗಳು ಮತ್ತು ನಾಯಕರು ಇತ್ತ ಗಮನ ಹರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next