ಮಾಲೂರು: ಬೇಸಿಗೆಯಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು. ಪುರಸಭಾ ಅಡಳಿತದ ಅವಧಿ ಮಾ.9ಕ್ಕೆ ಪೂರ್ಣಗೊಳ್ಳಲಿದ್ದು, ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ಸಿ.ಪಿ.ನಾಗರಾಜು ಅಧ್ಯಕ್ಷತೆಯಲ್ಲಿ ಕೊನೆ ಸಾಮಾನ್ಯ ಸಭೆ ನಡೆಯಿತು.
ಕುಡಿಯುವ ನೀರು, ಬೀದಿ ದೀಪ, ಸ್ವತ್ಛತೆ ಹಾಗೂ ಅಗತ್ಯ ಸೌಲಭ್ಯಗಳ ಬಗ್ಗೆ ಚರ್ಚಿಸಲಾಯಿತು. ವಾರ್ಡ್ ನಂ.16ರ ಸದಸ್ಯೆ ಗುಲಾಬ್ ಜಾನ್ ಮಾತನಾಡಿ, ತಮ್ಮ ವಾರ್ಡ್‌ನಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಅನುಕೂಲ ಕಲ್ಪಿಸಿಲ್ಲ. ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಸರ್ವಾಧಿಕಾರಿ ಧೋರಣೆ: ಅಧ್ಯಕ್ಷರ ನಿಕಟವರ್ತಿ ಸದಸ್ಯರ ವಾರ್ಡ್‌ಗಳ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ ನೀಡುತ್ತಿದ್ದು, ಕೆಲ ವಾರ್ಡ್‌ಗಳ ಅಭಿವೃದ್ಧಿಯ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಮಾಡುತ್ತಿರುವುದಾಗಿ ಸದಸ್ಯ ರಾಮಮೂರ್ತಿ ಅರೋಪಿಸಿದರು. ಪಟ್ಟಣದಲ್ಲಿ ಕುಡಿಯುವ ನೀರಿನ ಲಭ್ಯತೆ ಉತ್ತಮವಾಗಿದ್ದರೂ ವಿತರಣೆಯು ಸಮರ್ಪಕವಾಗಿಲ್ಲದ ಕಾರಣ ಅನೇಕ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ. ಇನ್ನೂ ಕೆಲ ವಾರ್ಡ್‌ಗಳಲ್ಲಿ ನೀರುಗಂಟಿಗಳು ಸರ್ವಾಧಿಕಾರಿಗಳಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಸೂಕ್ತ ಕ್ರಮ: ಸದಸ್ಯ ಎನ್.ವಿ.ಮುರಳೀಧರ ಮಾತನಾಡಿ, ಜನನ ಮತ್ತು ಮರಣ ಪ್ರಮಾಣ ಪತ್ರಗಳಿಗೆ ಅರ್ಜಿ ಸಲ್ಲಿದ್ದರೂ ನೀಡಲು ವಿಳಂಬ ಮಾಡುತ್ತಿರುವುದಾಗಿ ದೂರಿದರು. ಈ ಬಗ್ಗೆ ಮಾತನಾಡಿದ ಮುಖ್ಯಾಧಿಕಾರಿ ಪ್ರಸಾದ್, ಸೂಕ್ತ ಕ್ರಮವಹಿಸುವುದಾಗಿ ತಿಳಿಸಿದರು.
ಮೂರು ಪಟ್ಟು ಹೆಚ್ಚಳ: ಸದಸ್ಯ ಹನುಮಂತರೆಡ್ಡಿ ಮಾತನಾಡಿ, ಪಟ್ಟಣದಲ್ಲಿ ಐಟಿಎಸ್‌ಎಂಟಿ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ತರಕಾರಿ ಮಾರುಕಟ್ಟೆಯ ವಾಣಿಜ್ಯ ಸಂಕೀರ್ಣದಲ್ಲಿ ಅನೇಕ ಮಳಿಗೆಗಳು ಖಾಲಿ ಇದ್ದು, ವಿದ್ಯುತ್ ಸಂಪರ್ಕವಾಗಿ ಕಲ್ಪಿಸಿಲ್ಲ. ಪಟ್ಟಣದ ಬೀದಿದೀಪಗಳ ನಿರ್ವಹಣೆಯಲ್ಲಿ ಬಾರಿ ಭ್ರಷ್ಟಾಚಾರ ನಡೆಯುತ್ತಿದ್ದು, ಗುತ್ತಿಗೆದಾರರು ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಎರಡು ಮೂರು ಪಟ್ಟು ಹೆಚ್ಚು ಪಡೆದು ಅಳವಡಿಸುತ್ತಿದ್ದಾರೆ ಎಂದರು.
ಮುಖ್ಯಾಧಿಕಾರಿ ಪ್ರಸಾದ್ ಮಾತನಾಡಿ, ಫುಟ್‌ಪಾತ್ ಅಂಗಡಿಗಳನ್ನು ತೆರವುಗೊಳಿಸುವವರೆಗೂ ಪುರಸಭೆ ತರಕಾರಿ ಮಾರುಕಟ್ಟೆಯ ಅಂಗಡಿಗಳಿಂದ ಬಾಡಿಗೆ ವಸೂಲಿ ಸಾಧ್ಯವಾಗದು. ಈ ಬಗ್ಗೆ ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು.
ಸದಸ್ಯರಾದ ಅಲೂಮಂಜು, ಸಿ.ಲಕ್ಷ್ಮೀನಾರಾಯಣ್ ಮಾತನಾಡಿ, ಮಾಲೂರು ಪಟ್ಟಣದಲ್ಲಿ ಎಪಿಎಂಸಿಯಿಂದ ಹರಾಜುಕಟ್ಟೆಗಳ ನಿರ್ಮಾಣ ಕಾಮಗಾರಿಯು ಅರಂಭವಾಗುತ್ತಿದ್ದು, ಎಪಿಎಂಸಿಯು ಈ ಬಗ್ಗೆ ಪುರಸಭೆಯ ಗಮನಕ್ಕೆ ತಂದಿಲ್ಲ ಎಂದು ಅರೋಪಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ಸೇರಿದಂತೆ ಸದಸ್ಯರು ಇದ್ದರು.