ಚೀನದ ಹ್ಯಾಂಗ್‌ಝೂನಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್ ಆರಂಭವಾಗಿದ್ದು, ಭಾರತೀಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸೋಮ ವಾರ ಈ ಕೂಟ ಆರಂಭವಾಗಿದ್ದು, ಇದುವರೆಗೆ ಭಾರತ 9 ಬಂಗಾರದ ಪದಕ ಸಹಿತ ಒಟ್ಟು 34 ಪದಕಗಳನ್ನು ಗೆದ್ದಿದೆ. ಸೋಮವಾರ ಆರು ಬಂಗಾರ, ಆರು ಬೆಳ್ಳಿ ಮತ್ತು 5 ಕಂಚಿನ ಪದಕಗಳೊಂದಿಗೆ 17 ಪದಕಗಳನ್ನು ಭಾರತ ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಮಂಗಳವಾರವೂ ಭಾರತ 17 ಪದಕ ಜಯಿಸಿದ್ದು ಇದರಲ್ಲಿ 3 ಬಂಗಾರ, ಆರು ಬೆಳ್ಳಿ ಮತ್ತು ಎಂಟು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಈ ಬಾರಿಯ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ 313 ಕ್ರೀಡಾಪಟುಗಳು ಭಾಗಿಯಾಗಿದ್ದಾರೆ. ಒಟ್ಟು 22 ವಿಭಾಗಗಳಿದ್ದು, ಭಾರತ 17ರಲ್ಲಿ ಭಾಗಿಯಾಗಿದೆ. ಏಷ್ಯನ್ ಗೇಮ್ಸ್‌ನಂತೆ ಇದರಲ್ಲಿಯೂ 100 ಪದಕ ಗೆಲ್ಲುವುದು ಭಾರತದ ಗುರಿಯಾಗಿದೆ. 2018ರ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ 190 ಆ್ಯತ್ಲೀಟ್‌ಗಳು ಭಾಗಿಯಾಗಿದ್ದರು. ಆಗ 15 ಚಿನ್ನ ಸಹಿತ ಭಾರತ 72 ಪದಕ ಜಯಿಸಿತ್ತು. 2014ರ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತ 33 ಪದಕ ಜಯಿಸಿತ್ತು.
ಭಾರತ ಮೊದಲ ಎರಡು ದಿನವೇ ಉತ್ತಮ ಸಾಧನೆ ಮಾಡಿದ್ದು, 100 ಪದಕಗಳ ಭರವಸೆಯನ್ನು ಇನ್ನಷ್ಟು ಖಾತ್ರಿಗೊಳಿಸಿದೆ. ಸದ್ಯ ಅಂಕುರ್ ಧಾಮಾ, ನಿಷದ್ ಕುಮಾರ್, ಶೈಲೇಶ್ ಕುಮಾರ್, ಪ್ರಣವ್ ಸೂರ್ಮ, ಅವನಿ ಲೇಖಾರ, ಪ್ರವೀಣ್ ಕುಮಾರ್, ದೀಪ್ತಿ ಜೀವನ್‌ಜಿà, ಪ್ರಾಚಿ ಯಾದವ್, ನೀರಜ್ ಯಾಜವ್ ಬಂಗಾರ ಗೆದ್ದಿದ್ದಾರೆ.
ಸದ್ಯ ಪದಕ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. 165 ಪದಕ ಗೆದ್ದಿರುವ ಚೀನ ಮೊದಲ ಸ್ಥಾನದಲ್ಲಿದ್ದರೆ, 47 ಪದಕ ಗೆದ್ದಿರುವ ಇರಾನ್ 2ನೇ ಸ್ಥಾನ, 45 ಪದಕ ಗೆದ್ದಿರುವ ಜಪಾನ್ ಮೂರನೇ ಸ್ಥಾನದಲ್ಲಿವೆ.
2020ರಲ್ಲಿ ಟೋಕಿಯೊದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲೂ ಭಾರತ ಉತ್ತಮ ಸಾಧನೆಯನ್ನೇ ಮಾಡಿತ್ತು. ಆಗ ಭಾರತ ಒಟ್ಟಾರೆಯಾಗಿ 19 ಪದಕ ಗೆದ್ದಿತ್ತು. ಇದರಲ್ಲಿ ಐದು ಬಂಗಾರ, 8 ಬೆಳ್ಳಿ ಮತ್ತು 6 ಕಂಚಿನ ಪದಕ ಗೆದ್ದಿತ್ತು.
ಈಗ ಪ್ಯಾರಾ ಏಷ್ಯನ್ ಗೇಮ್ಸ್‌ನ ಶೂಟಿಂಗ್‌ನಲ್ಲಿ ಚಿನ್ನ ಗೆದ್ದಿರುವ ಅವನಿ ಲೇಖಾರ ಅವರು ಭಾರತದ ಪರವಾಗಿ ಮೊದಲ ಚಿನ್ನ ಗೆದ್ದ ಪ್ಯಾರಾಲಿಂಪಿಕ್ಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆಗಲೂ ಅವನಿ ಲೇಖಾರ ಜತೆಗೆ ಸುಮಿತ್ ಅಂಟಿಲ್, ಮನೀಷ್ ನರ್ವಾಲ್, ಪ್ರಮೋದ್ ಭಗತ್, ಕೃಷ್ಣ ನಗರ್ ಚಿನ್ನ ಗೆದ್ದಿದ್ದರು.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಕ್ರೀಡೆಗೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದ್ದು, ಇದಕ್ಕೆ ಉದಾಹರಣೆಯಾಗಿ ಕೂಟದಿಂದ ಕೂಟಕ್ಕೆ ಪದಕಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಉತ್ತಮವಾಗಿ ತರಬೇತಿ ಮತ್ತು ಪ್ರೋತ್ಸಾಹ ಸಿಕ್ಕರೆ ಭಾರತ ದ ಕ್ರೀಡಾಪಟುಗಳು ಶ್ರೇಷ್ಠ ಪ್ರದರ್ಶನ ನೀಡಬಲ್ಲರು ಎಂಬುದಕ್ಕೆ ಈಗ ಪದಕ ಗೆಲ್ಲುತ್ತಿರುವವರೇ ಸಾಕ್ಷಿಯಾಗಿದ್ದಾರೆ. ಹೀಗೆಯೇ ಭಾರತದ ಪದಕಗಳ ಗಳಿಕೆ ಇನ್ನಷ್ಟು ಹೆಚ್ಚಾಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.