ಹಾವೇರಿ: ವಿಜ್ಞಾನ, ತಂತ್ರಜ್ಞಾನ, ಆಧುನಿಕ ಉಪಕರಣಗಳು ಶೈಕ್ಷಣಿಕ ಪ್ರಗತಿಗೆ ಸಾಧನವಾಗುವ ರೀತಿಯಲ್ಲಿ ಬಳಸಿಕೊಳ್ಳಬೇಕೇ ವಿನಃ ದುರ್ಬಳಕೆ ಮಾಡಿಕೊಂಡು ಶೈಕ್ಷಣಿಕ ಪ್ರಗತಿಗೆ ಮಾರಕವಾಗುವಂತಿರಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ಹೇಳಿದರು.
ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಹಾಗೂ ಮಕ್ಕಳ ಸಾಹಿತ್ಯ ವೇದಿಕೆ ಸಂಘಟಿಸಿದ್ದ ‘ಗುಣಮಟ್ಟದ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣ ಮತ್ತು ಪರಿಹಾರ’ ಕುರಿತ ಚಿಂತನ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೊತ್ತವರು, ಶಿಕ್ಷಕರು, ಪೋಷಕರು, ಶಿಕ್ಷಣ ಇಲಾಖೆ ಒಟ್ಟಾಗಿ ಮಕ್ಕಳ ಮೇಲಿನ ಕಾಳಜಿಯಿಂದ ದುಡಿದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ವಾತಾವರಣ ನಿರ್ಮಿಸಲು ಸಾಧ್ಯ. ಇದರಿಂದ ನೈತಿಕತೆ ಹಾಗೂ ಮೌಲ್ಯವನ್ನೊಳಗೊಂಡ ಮಾನವೀಯ ಗುಣ ಮೈಗೂಡಿಸಿಕೊಂಡ ವಿದ್ಯಾರ್ಥಿ ಸಮುದಾಯವನ್ನು ಸಮಾಜಕ್ಕೆ ನೀಡಬಹುದು ಎಂದರು.
ಧಾರವಾಡದ ಡಯಟ್‌ನ ನಿವೃತ್ತ ಉಪನ್ಯಾಸಕ ರಾಮಚಂದ್ರ ಪಾಟೀಲ ಮಾತನಾಡಿ, ಮಕ್ಕಳ ಹೃದಯದಲ್ಲಿ ಮೌಲ್ಯಗಳನ್ನು ತುಂಬುವ ಜೊತೆಗೆ ತಲೆಯಲ್ಲಿ ಜ್ಞಾನ ತುಂಬಬೇಕು. ಮೌಲ್ಯಗಳ ಬಗ್ಗೆ ಪರೀಕ್ಷೆಯಲ್ಲಿ ಅಂಕಗಳಿರಬೇಕು. ಪಠ್ಯ ಪುಸ್ತಕ ರಚನಾ ಸಮಿತಿಯಲ್ಲಿ ತಜ್ಞರಿರಬೇಕು ಎಂದರು.
ಮಕ್ಕಳ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಜೆ.ಎಂ. ಮಠದ ಮಾತನಾಡಿ, ಟಿ.ವಿ, ಮೊಬೈಲ್ ಹಾವಳಿಯಲ್ಲಿ ಓದುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗಿದೆ. ಶಿಕ್ಷಣದ ಗುಣಮಟ್ಟ ಕುಸಿಯಲು ಎಲ್ಲರೂ ಕಾರಣ. ಈ ಕುರಿತು ಚಿಂತನ-ಮಂಥನ ನಡೆಯಬೇಕು ಎಂದರು.
ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಶಿವಶಂಕರ ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಾಹಿತಿ ಗಂಗಾಧರ ನಂದಿ, ಶಿಕ್ಷಣ ಚಿಂತಕ ನಿವೃತ್ತ ಪ್ರಾಚಾರ್ಯ ಬಿ.ಬಸವರಾಜ, ನಿಜಲಿಂಗಪ್ಪ ಬಸೇಗಣ್ಣಿ, ಶಶಿಕಲಾ ಅಕ್ಕಿ, ಧಾರವಾಡದ ಬಸವರಾಜ ಗಡದ, ಮಂಜುನಾಥ ಸಣ್ಣಿಂಗಣ್ಣನವರ ವೇದಿಕೆಯಲ್ಲಿದ್ದರು. ಹಿರಿಯ ಸಾಹಿತಿ ಎಂ.ಬಿ. ಹುಲಗಣ್ಣನವರ, ಇಂಗಳಗೊಂದಿ, ಮಹಾವಿದ್ಯಾಲಯದ ಸಿಬ್ಬಂದಿ ಸೇರಿದಂತೆ ಪದವಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಪ್ರಾಚಾರ್ಯೆ ಡಾ. ಸವಿತಾ ಹಿರೇಮಠ ಸ್ವಾಗತಿಸಿದರು. ಶಶಿಕಲಾ ಸಿದ್ದಾಪುರ ನಿರೂಪಿಸಿದರು. ಸಾಹಿತಿ ಹನುಮಂತಗೌಡ ಗೊಲ್ಲರ ವಂದಿಸಿದರು.