ದಾವಣಗೆರೆ: ಕಾರ್ಮಿಕ ದಿನಾಚರಣೆ ವಿಶ್ವದ ಕಾರ್ಮಿಕರನ್ನ ಒಂದು ಗೂಡಿಸಿದ, ಶೋಷಣೆ ಯಿಂದ ಮುಕ್ತವಾದ ಹೊಸ ನಾಗರಿಕತೆಯ ಸಮಾಜವಾದಿ ವ್ಯವಸ್ಥೆಯ ಸ್ಥಾಪನೆಗೆ ಹೋರಾಡಲು ಪ್ರೇರಣೆಯಾದ ದಿನ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ರಾಜ್ಯ ಕಾರ್ಯದರ್ಶಿ ಕೆ. ಸೋಮಶೇಖರ್ ತಿಳಿಸಿದ್ದಾರೆ.
ಸೋಮವಾರ ರೋಟರಿ ಬಾಲಭವನದಲ್ಲಿ ಸಂಘಟನೆಯಿಂದ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಡೀ ವಿಶ್ವದ ಎಲ್ಲಾ ದುಡಿಯುವ ಜನರು ಹೋರಾಟದ ಸ್ಫೂರ್ತಿಯಿಂದ ಆಚರಿಸುವ, ಮಾಲಿಕ ವರ್ಗದ ವಿರುದ್ಧದ ಕದನದಲ್ಲಿ ಕಾರ್ಮಿಕ ವರ್ಗ ಗಳಿಸಿರುವ ಸ್ಮರಣೀಯ ಜಯಕ್ಕಾಗಿ ಆಚರಿಸುವ ದಿನವಾಗಿದೆ ಎಂದರು.
ಅಮೆರಿಕಾ ಹಾಗೂ ಯೂರೋಪಿನ ದೇಶ ಗಳಲ್ಲಿ ಕಾರ್ಮಿಕರನ್ನು, ತುಂಬು ಗರ್ಭಿಣಿ ಯರನ್ನೂ ಸಹ ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ಯಂತ್ರಗಳೊಂದಿಗೆ ಯಂತ್ರಗಳಂತೆ ದುಡಿಸಿ ಕೊಳ್ಳುವುದರ ವಿರುದ್ಧ ಧ್ವನಿ ಎತ್ತಿದ ಕಾರ್ಮಿಕರು ದಿನಕ್ಕೆ 8 ಗಂಟೆ ಮಾತ್ರ ದುಡಿಸಿಕೊಳ್ಳಬೇಕು ಎಂಬ ಬೇಡಿಕೆಯೊಂದಿಗೆ ಹೋರಾಟ ಪ್ರಾರಂಭಿಸಿದರು.
1886ರ ಮೇ. 1 ರಂದು ಅಮೆರಿಕಾದಲ್ಲಿ ಸುಮಾರು 13 ಸಾವಿರದಷ್ಟು ಕಾರ್ಖಾನೆಗಳ 3 ಲಕ್ಷ ಹೆಚ್ಚು ಕಾರ್ಮಿಕರು ಬಿಳಿ ಬಾವುಟದೊಂದಿಗೆ ಬೇಡಿಕೆಗಾಗಿ ಬೀದಿಗಿಳಿದರು. ಚಿಕಾಗೋದಲ್ಲಿ 80 ಸಾವಿರದಷ್ಟು ಹೆಚ್ಚು ಜನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೇ. 3 ರಂದು ಶಾಂತಿಯುತವಾಗಿ ಸಭೆ ಸೇರಿದ್ದ ಕಾರ್ಮಿಕರ ಮೇಲೆ ಪೊಲೀಸರು ದಾಳಿ ಮಾಡಿದರು ಎಂದು ತಿಳಿಸಿದರು.
ಪೊಲೀಸ್ ದೌರ್ಜನ್ಯವನ್ನು ಪ್ರತಿಭಟಿಸಲು ಮೇ. 4ರಂದು ಬೃಹತ್ ಸಭೆ ಸೇರಿದ್ದಾಗ ಹೇ ಮಾರ್ಕೆಟ್ ದುರಂತ ಸಂಭವಿಸಿತು. ಬಿಳಿ ಬಾವುಟಗಳು ಕಾರ್ಮಿಕರ ರಕ್ತದಲ್ಲಿ ತೋಯ್ದು ಕೆಂಪಾದವು. ಅಂದಿನಿಂದ ಕಾರ್ಮಿಕರ ಶ್ರಮದ ಸಂಕೇತವಾಗಿ ಕೆಂಪು ಬಾವುಟ ಬಳಕೆಗೆ ಬಂದಿತು.
1889 ರಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿ ಸಮ್ಮೇಳನವು ಮೇ. 1 ಅನ್ನು ವಿಶ್ವ ಕಾರ್ಮಿಕರ ದಿನ ಆಚರಿಸಲು ಕರೆ ನೀಡಿತು. ಅಂದಿನಿಂದ ಪ್ರಪಂಚದಾದ್ಯಂತ ಮೇ. 1ರಂದು ಕಾರ್ಮಿಕರ ದಿನ ಆಚರಿಸಲಾಗುತ್ತಿದೆ. 8 ಗಂಟೆಯ ದುಡಿಮೆಯು ಕಾರ್ಮಿಕರು ತ್ಯಾಗ-ಬಲಿದಾನಗಳಿಂದ ಗಳಿಸಿದ ಹಕ್ಕು ಎಂದು ತಿಳಿಸಿದರು.