ಪಡುಬಿದ್ರಿ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರದ ಆಡಳಿತದ ಅವಧಿಯಲ್ಲಿ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಅನುದಾನವನ್ನು ಕ್ರೋಡೀಕರಿಸಿ, ಗರಿಷ್ಠ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈ ಅಭಿವೃದ್ಧಿ ಕೆಲಸ-ಕಾರ್ಯಗಳನ್ನು ಜನರಿಗೆ ಮನವರಿಕೆಯಾಗುವಂತೆ ಪ್ರಚುರ ಪಡಿಸಿ, ಜನರ ವಿಶ್ವಾಸವನ್ನು ಗಳಿಸುವ ಪ್ರಯತ್ನ ಕಾರ್ಯಕರ್ತರಿಂದ ನಡೆಯಬೇಕಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಪಲಿಮಾರು ಗ್ರಾಮೀಣ
ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.ಪಕ್ಷ ಬೂತ್ ಮಟ್ಟದಲ್ಲಿ ಬಲಿಷ್ಠವಾದರೆ ಮಾತ್ರ ಬ್ಲಾಕ್ ಮಟ್ಟದಲ್ಲಿಯೂ ಬೆಳೆಯಲು ಸಾಧ್ಯವಿದೆ. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿ ಅಧಿಕಾರ ಉಳಿಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ಕಾರ್ಯಕರ್ತರೆಲ್ಲರೂ ಪಕ್ಷದ ಸಾಧನೆಯನ್ನು ಮನೆ ಮನೆಗೆ ಮುಟ್ಟಿಸುವುದರ ಜೊತೆಗೆ ಪಕ್ಷಕ್ಕೆ ಇನ್ನಷ್ಟು ಮತದಾರರನ್ನು ಸೆಳೆಯಲು ಸಾಧ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಸುವರ್ಣ ಮಾತನಾಡಿ, ಪಲಿಮಾರು ಗ್ರಾಮವು ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು ಇಲ್ಲಿ ಬಿ.ಜೆ.ಪಿ ಗೆ ಅಸ್ತಿತ್ವವೇ ಇರಲಿಲ್ಲ. ಕಾರ್ಯಕರ್ತರು ಇನ್ನಷ್ಟು ಸಕ್ರಿಯರಾದರೆ ಕಾಂಗ್ರೆಸ್‌ನ ಭದ್ರಕೋಟೆಯನ್ನು ಮರಳಿ ಭದ್ರಪಡಿಸಬಹುದು ಎಂದರು.
ಪಲಿಮಾರು ಗ್ರಾಮೀಣ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಜಿತೇಂದ್ರ ಫುರ್ತಾದೋ, ಪಕ್ಷದ ಮುಖಂಡರಾದ ಎಂ. ಪಿ. ಮೊದಿನಬ್ಬ, ಗೋಪಾಲ್ ಪೂಜಾರಿ, ದೀಪಕ್ ಕುಮಾರ್ ಎರ್ಮಾಳ್, ವೈ. ಸುಧೀರ್ ಕುಮಾರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ಅಮೀರ್ ಮೊಹಮ್ಮದ್, ಪ್ರಶಾಂತ್ ಜತ್ತನ್, ರೋಹನ್ ಕುಮಾರ್ ಕುತ್ಯಾರ್, ಮುಖಂಡರಾದ ಗ್ರಾ.ಪಂ ಸದಸ್ಯರು, ಸ್ಥಳೀಯ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.ತಾ.ಪಂ. ಸದಸ್ಯ ದಿನೇಶ್ ಕೋಟ್ಯಾನ್ ಸ್ವಾಗತಿಸಿದರು. ಪಕ್ಷದ ಮುಖಂಡ ಯೋಗಾನಂದ್ ವಂದಿಸಿದರು.