ಬೆಳಗಾವಿ: ಸ್ನೇಹಿತನೊಂದಿಗೆ ತಾಲೂಕಿನ ಮುತ್ತ್ಯಾನಟ್ಟಿ ಗುಡ್ಡದ ಕಡೆಗೆ ಹೋಗಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಐವರು ಕಾಮುಕರಿಗೆ ಪೋಕ್ಸೋ ಕಾಯ್ದೆಯಡಿ ಇಲ್ಲಿಯ ೩ನೇ ಅಧಿಕ ಜಿಲ್ಲಾ ಸತ್ರ ಮತ್ತು ಪೋಕ್ಸೋ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಲಕ್ಷ ರೂ.ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಮುತ್ತ್ಯಾನಟ್ಟಿಯ ಸಂಜು ಸಿದ್ದಪ್ಪ ದಡ್ಡಿ(24), ಸುರೇಶ ಭರಮಪ್ಪ ಬೆಳಗಾವಿ(24), ಸುನೀಲ್ ಲಗಮಪ್ಪ ಡುಮ್ಮಗೋಳ(21), ಹುಕ್ಕೇರಿ ತಾಲೂಕಿನ ಮಣಗುತ್ತಿಯ ಮಹೇಶ ಬಾಳಪ್ಪ ಶಿವನ್ನಗೋಳ(23) ಹಾಗೂ ಬೈಲಹೊಂಗಲದ ಸೋಮಶೇಖರ ದುರದುಂಡೇಶ್ವರ ಶಹಾಪುರ(23) ಎಂಬಾತರು ತಪ್ಪಿತಸ್ಥರು ಎಂದು ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ಅವರು ತೀರ್ಪು ನೀಡಿದ್ದಾರೆ.
ಮೊದಲ ಹಾಗೂ ಎರಡನೇ ಆರೋಪಿಗೆ ತಲಾ 5.21 ಲಕ್ಷ ರೂ., ಮೂರನೇ, ನಾಲ್ಕನೇ ಆರೋಪಿಗೆ 5.11 ಲಕ್ಷ ರೂ. ಹಾಗೂ 5.06 ಲಕ್ಷ ರೂ. ದಂಡ ವಿಧಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು 33 ಸಾಕ್ಷಿಗಳು, 186 ದಾಖಲೆ ಹಾಗೂ 46 ಮುದ್ದೆ ಮಾಲುಗಳ ಆಧಾರದ ಮೇಲೆ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಸರ್ಕಾರದ ಪರ ವಕಾಲತ್ತು ವಹಿಸಿದ್ದಾರೆ.
ಇದನ್ನೂ ಓದಿ:ಮಟ್ಟುಗುಳ್ಳ ಪ್ರಿಯರಿಗೆ ಸಿಹಿ ಸುದ್ದಿ: ದೀಪಾವಳಿಗೆ ಮಾರುಕಟ್ಟೆ ಪ್ರವೇಶ
ಏನಿದು ಘಟನೆ?: 15 ಫೆಬ್ರುವರಿ 2017ರಂದು ಹಾಸ್ಟೆಲ್‌ನಲ್ಲಿದ್ದ ಬಾಲಕಿ ಹಾಗೂ ಈಕೆಯ ಸ್ನೇಹಿತ ದ್ವಿಚಕ್ರ ವಾಹನದಲ್ಲಿ ಕಾಕತಿ ಬಳಿಯ ಮುತ್ತ್ಯಾನಟ್ಟಿ ಗುಡ್ಡಕ್ಕೆ ಹೋಗಿದ್ದರು. ಆಗ ಐವರು ದುಷ್ಕರ್ಮಿಗಳು ಬಂದು ಹೆದರಿಸಿ ಹಲ್ಲೆ ನಡೆಸಿದ್ದಾರೆ. ನಂತರ ಈಕೆಯ ಸ್ನೇಹಿತನಿಂದಲೇ ಬಲವಂತವಾಗಿ ಸಂಭೋಗ ನಡೆಸಲು ಪ್ರಚೋದಿಸಿದ್ದಾರೆ. ಇದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಬಾಲಕಿಯನ್ನು ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಪೊಲೀಸರಿಗೆ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದರು. 20 ಸಾವಿರ ರೂ. ತಂದು ಕೊಡಬೇಕು. ಇಲ್ಲವಾದಲ್ಲಿ ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಕೊಲ್ಲುವುದಾಗಿ ಹೆದರಿಸಿದ್ದರು. ದ್ವಿಚಕ್ರ ವಾಹನದ ಪೆಟ್ರೋಲ್ ಪೈಪ್ ಕಿತ್ತು ಹಾಕಿ ಇಬ್ಬರನ್ನೂ ಅಲ್ಲಿಂದ ಓಡಿಸಿದ್ದಾರೆ. ಕಾಲ್ನಡಿಗೆಯಲ್ಲಿಯೇ ಕಾಕತಿಯ ಎನ್‌ಎಚ್- 4 ಹೆದ್ದಾರಿವರೆಗೆ ಬಂದು ಖಾಸಗಿ ವಾಹನ ಹಿಡಿದು ಇಬ್ಬರೂ ಬೆಳಗಾವಿ ತಲುಪಿದ್ದರು. ನಂತರ ಈ ಕುರಿತು ಬಾಲಕಿ ಕಾಕತಿ ಠಾಣೆಗೆ ದೂರು ನೀಡಿದ್ದಳು. ತನಿಖಾಧಿಕಾರಿ ರಮೇಶ ಗೋಕಾಕ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.