Advertisement

ಈ ಋತುವಿನ ಮಾರುಕಟ್ಟೆಯ ಓಟ ನಿಲ್ಲಿಸಿದ ಮಟ್ಟುಗುಳ್ಳ

09:06 AM Jun 27, 2019 | sudhir |

ಕಟಪಾಡಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಜಿ.ಐ. ಮಾನ್ಯತೆಯೊಂದಿಗೆ ಪೇಟೆಂಟ್‌ ಪಡೆದಿರುವ ಮಟ್ಟು ಗುಳ್ಳದ ಬೆಳೆಯು ಈ ಋತುವಿನ ಇಳುವರಿಯು ಮುಗಿಸಿದ್ದು, ಮಾರುಕಟ್ಟೆಯ ಓಟವನ್ನು ನಿಲ್ಲಿಸಿದೆ.

Advertisement

ಪ್ರಮುಖವಾಗಿ ಕಟಪಾಡಿ, ಉಡುಪಿ, ಮಂಗಳೂರು ಸಹಿತ ಬೆಂಗಳೂರು, ಮುಂಬಯಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಹೊಂದಿದ್ದ ಮಟ್ಟುಗುಳ್ಳ ಬಹು ಬೇಡಿಕೆಯಿಂದ ಮಾರಾಟವಾಗುತ್ತಿತ್ತು.

ಭತ್ತದ ಬೇಸಾಯಕ್ಕಾಗಿ ಮಟ್ಟುಗುಳ್ಳದ ಗದ್ದೆ ಬಳಕೆ
ಇಲ್ಲಿನ ಕೃಷಿಕರು ಮುಂಗಾರಿನಲ್ಲಿ ಮಟ್ಟುಗುಳ್ಳ ಕೃಷಿಯನ್ನು ನಿಲ್ಲಿಸಿ ಪ್ರತೀವರ್ಷ ಭತ್ತ ಬೇಸಾಯವನ್ನು ಮಾಡುತ್ತಾರೆ. ಕೆಲವರು ಜೂನ್‌, ಜುಲೆ„ ತಿಂಗಳಲ್ಲಿ ಬೆಳೆಯಲಾಗುವ ಕಾರ್ತಿ ಭತ್ತದ ಬೆಳೆಯನ್ನು ಮೊಟಕುಗೊಳಿಸಿ ಗದ್ದೆ ಹಡಿಲುಬಿಟ್ಟು ಗುಳ್ಳದ ಬಿತ್ತನೆಯನ್ನೂ ನಡೆಸುತ್ತಾರೆ. ಇದೀಗ ಜಿಐ ಮಾನ್ಯತೆಯೊಂದಿಗೆ ಪೇಟೆಂಟ್‌ ಪಡೆದು ಲಾಂಛನ (ಸ್ಟಿಕ್ಕರ್‌) ದೊಂದಿಗೆ ಮುಂಬಯಿ, ಬೆಂಗಳೂರು ಸೇರಿದಂತೆ ದೇಶವಿದೇಶಗಳಿಗೆ ಮಟ್ಟುಗುಳ್ಳ ಸರಬರಾಜು ಮಾಡಲಾಗುತ್ತದೆ.

120.50 ಎಕ್ರೆ ಪ್ರದೇಶದ ಗುಳ್ಳ
ಮಟ್ಟು ಗ್ರಾಮದಿಂದ ಕೈಪುಂಜಾಲು ವರೆಗಿನ ಸುಮಾರು 120.50 ಎಕ್ರೆ ಪ್ರದೇಶದ ಮಟ್ಟುಗುಳ್ಳ ಬೆಳೆ ಈ ಬಾರಿ ಬೆಳೆಗಾರರ ಸಂಘದಲ್ಲಿ ಗ್ರೇಡಿಂಗ್‌ ಆಗಿ ಸ್ಟಿಕ್ಕರ್‌ ಸ‌ಹಿತವಾಗಿ ಮಾರುಕಟ್ಟೆ ಪ್ರವೇಶಿಸಿತ್ತು.

ಅ.10ರಂದು ಮಾರುಕಟ್ಟೆ ಪ್ರವೇಶಿಸಿತ್ತು
ಈ ಋತುವಿನ ಬೆಳೆಯು 2018ರ ಅ.10ರಂದು ಮಾರುಕಟ್ಟೆಯನ್ನು ಪ್ರವೇಶಿಸಿದ್ದು, ಆರಂಭದಲ್ಲಿ ಫಸಲು ಪ್ರಮಾಣ ಕಡಿಮೆ ಇದ್ದುದರಿಂದ ಬೆಲೆ 150 ರೂ. ಗಡಿ ದಾಟಿತ್ತು. ಅನಂತರದಲ್ಲಿ ಫಸಲು ಪ್ರಮಾಣದನ್ವಯ, ಮಾರುಕಟ್ಟೆಯ ಬೇಡಿಕೆಯನ್ವಯ ಬೆಲೆಯು ನಿಗದಿಗೊಂಡು ಮಾರಾಟವಾಗಿದ್ದು, ಇದೀಗ ಕೊನೆಯ ದಿನಗಳ ಮಟ್ಟುಗುಳ್ಳವು ಸುಮಾರು 50 ರಿಂದ 60 ರೂ.ಗಳ ಬೆಲೆಯಲ್ಲಿ ಮಾರಾಟವಾಗುತ್ತಿದೆ ಎಂದು ಬೆಳೆಗಾರರ ಸಂಘ ತಿಳಿಸಿದೆ.

Advertisement

ಬೆಳೆಸುವುದನ್ನು ನಿಲ್ಲಿಸಿದ್ದೇವೆ
ಮಳೆಗಾಲ ಆರಂಭವಾಗಿದ್ದು ಮಟ್ಟುಗುಳ್ಳದ ಗದ್ದೆಗಳಲ್ಲಿ ಭತ್ತದ ಕೃಷಿಯನ್ನು ಕೈಗೊಳ್ಳಲಾಗುತ್ತಿದೆ. ಆ ಮೂಲಕ ಈ ಋತುವಿನ ಮಟ್ಟುಗುಳ್ಳದ ಬೆಳೆಯನ್ನು ನಿಲ್ಲಿಸಲಾಗಿದ್ದು, ಅಕ್ಟೋಬರ್‌ ಅನಂತರ ಮತ್ತೆ ಬೆಳೆಸಲಾಗುತ್ತದೆ. ಬೆಳೆಗಾರರ ಸಂಘ ಸ್ಥಾಪನೆಯಿಂದಾಗಿ ಬೆಳೆಯ ಇಳುವರಿಗೆ ಸೂಕ್ತ ಮಾರುಕಟ್ಟೆ ಸಿಕ್ಕಿದ್ದು ಬೆಳೆಗಾರರಿಗೆ ನ್ಯಾಯ ದೊರಕಿದೆ.
-ಹರೀಶ್‌ ಮಟ್ಟು, ಮಟ್ಟುಗುಳ್ಳ ಬೆಳೆಗಾರ

ಭತ್ತದ ಕೃಷಿಗಾಗಿ ಗದ್ದೆ ಬಳಕೆ
ಅನುಕೂಲಕರ ವಾತಾವರಣಕ್ಕೆ ಅನುಗುಣವಾಗಿ ಮಟ್ಟುಗುಳ್ಳದ ಬೆಳೆಯು ಆರಂಭಗೊಂಡಲ್ಲಿ ಮುಂದಿನ ನವರಾತ್ರಿಯ ಸಂದರ್ಭದಲ್ಲಿ ಮತ್ತೆ ಉತ್ತಮ ಇಳುವರಿಯೊಂದಿಗೆ ಗುಣಮಟ್ಟದ ಬೆಳೆಯು ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂಬ ವಿಶ್ವಾಸ ಇದೆ. ಇದೀಗ ಭತ್ತದ ಕೃಷಿಗಾಗಿ ಹೆಚ್ಚಿನ ಗದ್ದೆಯನ್ನು ಬಳಸಿಕೊಳ್ಳಲಾಗುತ್ತಿದೆ.
– ಪ್ರದೀಪ್‌ ಯಾನೆ ಅಪ್ಪು ಮಟ್ಟು, ಪ್ರಕಾಶ್‌ ಉದ್ಯಾವರ, ಬೆಳೆಗಾರರು

ಆಶಾದಾಯಕ ಇಳುವರಿ
ಬೆಳೆಗಾರರ ಸಂಘದ ಪ್ರಬಂಧಕ ಲಕ್ಷ್ಮಣ್‌ ಮಟ್ಟು ತಿಳಿಸುವಂತೆ ಈ ಬಾರಿ ಮುಂಗಾರು ಆಗಮನದ ವಿಳಂಬದಿಂದಾಗಿ ಸುಮಾರು 22 ದಿನಗಳಿಗೂ ಹೆಚ್ಚಿನ ಕಾಲ ಫಸಲು ಲಭಿಸಿ ಸಾಕಷ್ಟು ಉತ್ತಮ ಆಶಾದಾಯಕ ಇಳುವರಿ ಬಂದಿದ್ದು, ಬೇಡಿಕೆ, ಸೂಕ್ತ ಮಾರುಕಟ್ಟೆ ಮೂಲಕ ಬೆಳೆಗಾರರು ಬೆಳೆದಿರುವ ಬೆಳೆಗೆ ನ್ಯಾಯವನ್ನು ಒದಗಿಸಿರುವ ಸಂತೃಪ್ತಿ ಇದೆ ಎನ್ನುತ್ತಾರೆ.

– ವಿಜಯ ಆಚಾರ್ಯ, ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next