ಹೊಸದಿಲ್ಲಿ: ಭಾರತದ ಸ್ಪಿನ್ ದಾಳಿಯನ್ನು ಎದುರಿಸಲಾಗದೆ ಬೋರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲೆರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯ ಹೀನಾಯ ಸೋಲು ಕಂಡಿದೆ. ಮೂರೇ ದಿನಗಳಲ್ಲಿ ಶರಣಾಗತಿ ಸಾರಿದೆ. ಕಮಿನ್ಸ್ ಪಡೆಯ ಈ ಕಳಪೆ ಆಟಕ್ಕೆ ಕಾಂಗರೂ ನಾಡಿನ ಮಾಜಿಗಳು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ತಂಡದ ನೆರವಿಗೆ ತಾನು ಸಿದ್ಧನಿದ್ದೇನೆ ಎಂಬುದಾಗಿ ಆಸೀಸ್ ಮಾಜಿ ಆರಂಭಕಾರ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.
“ಆಸ್ಟ್ರೇಲಿಯ ಆಟಗಾರರ ನೆರವಿಗೆ ನಾನು ಯಾವ ಸಂದರ್ಭದಲ್ಲೂ ಸಿದ್ಧನಿದ್ದೇನೆ. ಭಾರತದ ಸ್ಪಿನ್ನರ್‌ಗಳನ್ನು ನಿಭಾಯಿಸಲು, ಭಾರತದ ಪಿಚ್‌ಗಳ ಬಗ್ಗೆ ಮನವರಿಕೆ ಮಾಡಿಕೊಡಲು ನನ್ನಿಂದಾಗುವ ಸಹಾಯ ಮಾಡಬಲ್ಲೆ. ಭಾರತದ ವಾತಾವರಣದ ಬಗ್ಗೆ ನನಗೆ ಹೆಚ್ಚಿನ ಅರಿವು ಇರುವುದರಿಂದ ತಂಡಕ್ಕೆ ನೆರವಾಗಬಲ್ಲದು ಎಂಬ ನಂಬಿಕೆ ನನ್ನದು’ ಎಂದಿದ್ದಾರೆ ಮ್ಯಾಥ್ಯೂ ಹೇಡನ್.
“ರಾತ್ರಿ, ಹಗಲು ಎಂದು ಕಾಯುವ ಅಗತ್ಯವಿಲ್ಲ. ಯಾವ ಹೊತ್ತಿನಲ್ಲಾದರೂ ನಾನು ತಂಡದ ನೆರವಿಗೆ ನಿಲ್ಲಬಲ್ಲೆ. ಆಸೀಸ್ ಕ್ರಿಕೆಟಿಗರು ಯಾವುದೇ ವೇಳೆ ನನ್ನೊಡನೆ ಚರ್ಚಿಸಬಹುದು’ ಎಂದಿದ್ದಾರೆ. ಸರಣಿಯ ವೀಕ್ಷಕ ವಿವರಣೆ ನೀಡುತ್ತಿರುವ ಹೇಡನ್ ಸದ್ಯ ಭಾರತದಲ್ಲೇ ಇದ್ದಾರೆ.
ಮ್ಯಾಥ್ಯೂ ಹೇಡನ್ 2004ರ ಭಾರತ ಪ್ರವಾಸದ ವೇಳೆ ಬೋರ್ಡರ್-ಗಾವಸ್ಕರ್ ಟ್ರೋಫಿ ಗೆದ್ದ ಆಸ್ಟ್ರೇಲಿಯ ತಂಡದ ಸದಸ್ಯರಾಗಿದ್ದರು.