ರಾಮನಗರ: ಜಯಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಬಿಡದಿಯ ತಮ್ಮ ಜಮೀನಿನಲ್ಲಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಸಂಪ್ರದಾಯದಂತೆ ದ್ವಿತೀಯ ಪುತ್ರ ರಿಖೀ ಎಂ ರೈ, ಇಹ ಶರೀರಕ್ಕೆ ಶುಕ್ರವಾರ ಸಂಜೆ 4.45ರ ವೇಳೆಗೆ ಅಗ್ನಿ ಸ್ಪರ್ಶ ಮಾಡಿದರು. ಹಿರಿಯ ಪುತ್ರ ರಾಖೀ ಎಂ ರೈ ಕೆನಡಾದಲ್ಲಿದ್ದು, ಅವರು ಬರಲಾಗದ ಕಾರಣ ಕಿರಿಯ ಪುತ್ರ ಶವ ಸಂಸ್ಕಾರ ನೆರವೇರಿಸಿದರು.
ಮೃತ ದೇಹವನ್ನು ಮೊದಲು ಅವರ ವಾಸದ ಮನೆಯೊಳಗೆ ಕೆಲಕಾಲ ಇರಿಸಲಾಗಿತ್ತು. ರೈ ಅವರ ತೀರಾ ಹತ್ತಿರದ ಸಂಬಂ ಧಿಕರು ಅಂತಿಮ ದರ್ಶನ ಪಡೆದುಕೊಂಡರು. ಬಂಟರ ಸಂಪ್ರದಾಯದಂತೆ ವಿಧಿವಿಧಾನ ಗಳನ್ನು ನೆರೆವೇರಿದ ನಂತರ ಮನೆ ಬಳಿಯಲ್ಲೇ ಮೊದಲ ಪತ್ನಿ ರೇಖಾ ಅವರ ಸಮಾಧಿ ಪಕ್ಕದಲ್ಲೇ ರೈ ಅಂತ್ಯ ಸಂಸ್ಕಾರ ನೆರೆವೇರಿದೆ.
ರೈ ಅವರ ಭದ್ರತಾ ಸಿಬ್ಬಂದಿ 5 ಸುತ್ತು ಕುಶಾಲ ತೋಪು ಹಾರಿಸಿದರು. ರೈ ಸಹೋದರರು ಮತ್ತು ಪುರುಷ ಸಂಬಂಧಿಕರು ಮಾತ್ರ ಅಂತ್ಯಕ್ರಿಯೆಗೆ ಸಾಕ್ಷಿಯಾದರು. ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು.
ಬಿಡದಿಯಲ್ಲಿ ಸಂಸದರಿಂದ ಅಂತಿಮ ನಮನ: ಬೆಂಗಳೂರಿನಿಂದ ಮುತ್ತಪ್ಪ ರೈ, ಮೃತದೇಹ ರಾಮನಗರ ಜಿಲ್ಲೆಯ ಗಡಿ ಭಾಗದಿಂದ ಬಿಡದಿ ಹೋಬಳಿಯ ದಾರಿಯುದ್ದಕ್ಕೂ ಅವರ ಅಭಿಮಾನಿಗಳು ಪುಷ್ಪ ನಮನ ಸಲ್ಲಿಸಿದರು.
ಬಿಡದಿ ಬಸ್ ನಿಲ್ದಾಣದ ಬಳಿ ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಮಾಗಡಿ ಕ್ಷೇತ್ರದ ಹಾಲಿ ಶಾಸಕ ಎ.ಮಂಜು, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ , ತಾಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜ್, ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆದುಕೊಂಡರು.
ಬಿಡದಿ – ಮುದುವಾಡಿ ರಸ್ತೆಯ ಆರಂಭ ದಲ್ಲೇ ಬಿಡದಿ ಪೊಲೀಸರು ಬ್ಯಾರಿಕೇಡ್ ಗಳನ್ನು ಇರಿಸಿ ವಾಹನ ನಿಯಂತ್ರಣ ಮಾಡುತ್ತಿದ್ದದ್ದು ಕಂಡು ಬಂತು. ಮುತ್ತಪ್ಪ ರೈ ಅವರ ತೀರಾ ಹತ್ತಿರದ ಸಂಬಂಧಿಕರನ್ನು ಮಾತ್ರ ಬಿಡಲಾಯಿತು. ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳನ್ನು, ಕಾರ್ಯ ಕರ್ತರನ್ನು ಸಹ ಅಂತ್ಯ ಸಂಸ್ಕಾರ ವೀಕ್ಷಿಸಲು ಅವಕಾಶವಿರಲಿಲ್ಲ.