Advertisement

ಮತ್ಸ್ಯಾಶ್ರಯ ಯೋಜನೆ: 5 ಸಾವಿರ ಮನೆ ಮಂಜೂರು ಸಾಧ್ಯತೆ

12:49 AM Nov 02, 2022 | Team Udayavani |

ಉಡುಪಿ: ಮತ್ಸ್ಯಾಶ್ರಯ ಯೋಜನೆಯಡಿ ವಸತಿ ರಹಿತ ಮೀನುಗಾರ ಕುಟುಂಬಗಳಿಗೆ ಮನೆ ಹಂಚಿಕೆ ಮಾಡುವ ಯೋಜನೆಯನ್ನು ರಾಜ್ಯ ಸರಕಾರ ಮರು ಪರಿಚಯಿಸಿದ್ದು, ಉಭಯ ಜಿಲ್ಲೆಗಳಲ್ಲಿ 5 ಸಾವಿರಕ್ಕೂ ಅಧಿಕ ಮನೆಗಳು ಶೀಘ್ರ ಮಂಜೂರಾಗುವ ಸಾಧ್ಯತೆಯಿದೆ.

Advertisement

ರಾಜೀವ್‌ ಗಾಂಧಿ ನಿಗಮದಿಂದ ಈ ಯೋಜನೆಯಡಿ ಮನೆ ಹಂಚಿಕೆ ಮಾಡಲು ಸಿಆರ್‌ಝಡ್‌ ಸಹಿತ ವಿವಿಧ ತಾಂತ್ರಿಕ ಸಮಸ್ಯೆ ಎದುರಾಗಲಿದೆ.

ಹೀಗಾಗಿ ಈ ಹಿಂದಿನ ಪದ್ಧತಿಯಂತೆ ಮೀನುಗಾರಿಕೆ ಇಲಾಖೆಯ ನಿರ್ದಿಷ್ಟ ನಿಗಮದ ಮೂಲಕ ಮನೆ ಮಂಜೂರು ಮಾಡಲು ಅವಕಾಶ ನೀಡಬೇಕು ಎಂಬ ಪ್ರಸ್ತಾವನೆಯನ್ನು ಇಲಾಖೆ ಯಿಂದ ಸರಕಾರಕ್ಕೆ ಸಲ್ಲಿಸಲಾಗಿದೆ ಮತ್ತು ಮುಖ್ಯಮಂತ್ರಿಯವರ ಗಮನಕ್ಕೂ ಈ ವಿಷಯವನ್ನು ತರಲಾಗಿದೆ.

2018-19ರಲ್ಲಿ ಮತ್ಸ್ಯಾಶ್ರಯ ಯೋಜನೆಯಡಿ ಹಂಚಿಕೆ ಮಾಡಿದ ಮನೆಗಳಿಗೆ ಈವರೆಗೆ ಪೂರ್ಣ ಪ್ರಮಾಣ ದಲ್ಲಿ ಅನುದಾನ ಬಂದಿಲ್ಲ. ಕೊರೊನಾ ಹಾಗೂ ತಾಂತ್ರಿಕ ಕಾರಣಗಳಿಂದ ಅನುದಾನ ಫ‌ಲಾನುಭವಿಗಳ ಕೈಸೇರಿಲ್ಲ. 2018-19ರ ಅನಂತರ ಯೋಜನೆಯನ್ನು ಸ್ಥಗಿತಗೊಳಿಸಲಾಗಿದ್ದು, ಯಾವುದೇ ಮನೆ ಹಂಚಿಕೆಯಾಗಿಲ್ಲ. ಪ್ರಸಕ್ತ ಸಾಲಿನ ಬಜೆಟ್‌ನ ಘೋಷಣೆಯಂತೆ ಮತ್ಸ್ಯಾಶ್ರಯ ಯೋಜನೆ ಆರಂಭವಾಗಲಿದೆ.

ಅನುದಾನ ಹೆಚ್ಚಳಕ್ಕೆ ಪ್ರಸ್ತಾವ
ಪ್ರತೀ ಮನೆಗೆ 1.20 ಲಕ್ಷ ರೂ.ಗಳನ್ನು ಯೋಜನೆಯಡಿ ನೀಡಲಾಗುತ್ತಿತ್ತು. ಅದು ತೀರಾ ಕಡಿಮೆಯಾಗಿರುವುದರಿಂದ ಕನಿಷ್ಠ 3ರಿಂದ 5 ಲಕ್ಷ ರೂ.ಗೆ ಏರಿಸಬೇಕು ಎಂಬ ಪ್ರಸ್ತಾವನೆಯನ್ನು ಇಲಾಖೆಯಿಂದ ಸರಕಾರಕ್ಕೆ ಸಲ್ಲಿಸಲಾಗಿದೆ. ಆದರೆ ಸರಕಾರ ಒಪ್ಪಿಗೆ ನೀಡುವುದು ಕಷ್ಟವಿದೆ. ಪ್ರತೀ ಮನೆಗೆ ಕನಿಷ್ಠ 3 ಲಕ್ಷ ರೂ. ನಿಗದಿ ಮಾಡಿದಲ್ಲಿ, ಹಂಚಿಕೆಯಾಗುವ ಮನೆಯ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಹೆಚ್ಚಿನ ಮನೆ ಹಂಚಿಕೆ ಮಾಡುವ ಉದ್ದೇಶದಿಂದ ಅನುದಾನ ಹೆಚ್ಚಳ ಅಸಾಧ್ಯ ಎಂದು ಹೇಳಲಾಗುತ್ತಿದೆ.

Advertisement

ನೇರ ಹಂಚಿಕೆಗೆ ಆಗ್ರಹ
ರಾಜೀವ್‌ ಗಾಂಧಿ ವಸತಿ ನಿಗಮದಿಂದ ಮತ್ಸಾéಶ್ರಯ ಮನೆ ಹಂಚಿಕೆಯಾದರೆ ಫ‌ಲಾನುಭವಿಗಳಿಗೆ ನಿರ್ದಿಷ್ಟ ಕಾಲಮಿತಿಯಲ್ಲಿ ಮನೆ ನಿರ್ಮಾಣ ಸಾಧ್ಯವಾಗುವುದಿಲ್ಲ. ಅನುದಾನ ವಿಳಂಬವಾಗುವ ಜತೆಗೆ ತಾಂತ್ರಿಕ ಸಮಸ್ಯೆಗಳು ಹೆಚ್ಚಿವೆ. ಮನೆ ನಿರ್ಮಾಣಕ್ಕೆ ಮೊದಲು ನಿವೇಶನದ ಜಿಪಿಎಸ್‌ ಮಾಡುವುದು, ಅನಂತರ ಮನೆಯ ಫೌಂಡೇಶನ್‌ ಜಿಪಿಎಸ್‌ ಸಹಿತ ಎಲ್ಲ ಹಂತವನ್ನು ಅಪ್‌ಲೋಡ್‌ ಮಾಡುತ್ತಿರಬೇಕಾಗುತ್ತದೆ. ಇದರಿಂದ ಒಟ್ಟಾರೆ ಪ್ರಕ್ರಿಯೆ ವಿಳಂಬವಾಗುವ ಜತೆಗೆ ಅನುದಾನವೂ ಬೇಗ ಬರುವುದಿಲ್ಲ. ಈ ಹಿಂದಿನ ವ್ಯವಸ್ಥೆಯನ್ನು ಮೀನುಗಾರಿಕೆ ಇಲಾಖೆಯ ಅಧೀನದ ನಿಗಮದಿಂದ ಸ್ಥಳೀಯ ಶಾಸಕರ ಮೂಲಕವಾಗಿ ಮನೆ ಹಂಚಿಕೆ ಮಾಡುವ ವ್ಯವಸ್ಥೆ ಆಗಬೇಕು ಎಂಬ ಆಗ್ರಹವೂ ಇದೆ.

ಸಿಆರ್‌ಝಡ್‌ ನಿಯಮ ಇತ್ಯಾದಿ ಕಾರಣಗಳಿಂದ ಮತ್ಸಾéಶ್ರಯದಡಿ ಮನೆ ನಿರ್ಮಾಣ ಕರಾವಳಿ ಭಾಗದಲ್ಲಿ ಕಷ್ಟವಾಗುತ್ತದೆ. ಹೀಗಾಗಿ ಮೀನುಗಾರಿಕೆ ಇಲಾಖೆಯ ನಿರ್ದಿಷ್ಟ ನಿಗಮದ ಮೂಲಕವೇ ಮನೆ ಹಂಚಿಕೆಗೆ ಅವಕಾಶ ನೀಡಬೇಕು ಮತ್ತು ಮನೆ ನಿರ್ಮಾಣಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಬೇಡಿಕೆ ಇಟ್ಟಿದ್ದೇವೆ.
– ಎಸ್‌. ಅಂಗಾರ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆ ಸಚಿವ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next