Advertisement
ಕೋವಿಡ್ ಹಿನ್ನೆಲೆಯಲ್ಲಿ ಮಾತೃಪೂರ್ಣ ಯೋಜನೆಯಡಿ ಫೆಬ್ರವರಿ ತಿಂಗಳವರೆಗೂ ಆಹಾರ ಸಾಮಗ್ರಿಗಳನ್ನು ಫಲಾನುಭವಿಗಳ ಮನೆಗೆ ಪೂರೈಸಲಾಗುತ್ತಿತ್ತು. ಆದರೆ ಈಗ, ಫೆ. 14ರ ಬಳಿಕ ಪ್ರತೀ ಫಲಾನುಭವಿಗೆ 21 ರೂ. ವೆಚ್ಚದಲ್ಲಿ ಪೌಷ್ಟಿಕ ಬಿಸಿಯೂಟವನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಇದರಿಂದ ಉಡುಪಿ ಜಿಲ್ಲೆಯೊಂದರಲ್ಲೇ ಶೇ. 77ರಷ್ಟು ಮಂದಿ ಫಲಾನುಭವಿಗಳು ಯೋಜನೆಯಿಂದ ದೂರ ಉಳಿಯುವಂತಾಗಿದೆ.
Related Articles
Advertisement
ಯೋಜನೆ ಆರಂಭ ಹೇಗಿತ್ತು? :
ಯೋಜನೆ ಆರಂಭಕ್ಕೆ ಮುನ್ನ ಸಾಮಗ್ರಿಗಳನ್ನು ಫಲಾನುಭವಿಗಳ ಮನೆಮನೆಗೆ ತಲುಪಿಸಲಾಗುತ್ತಿತ್ತು. ಆರಂಭಗೊಂಡ ಬಳಿಕ ಫಲಾನು ಭವಿಗಳು ಅಂಗನವಾಡಿಗೆ ಬಂದು ಆಹಾರ ಸೇವನೆ ಮಾಡಬೇಕಿತ್ತು. ಬರಲು ಸಾಧ್ಯವಾಗದವರ ಮನೆ ಯಿಂದ ಯಾರಾದರೂ ಬಂದು ಊಟ ಕೊಂಡೊಯ್ದು ನೀಡಲು ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್ ಆರಂಭವಾದ ಬಳಿಕ ಮತ್ತೆ ಕೆಲವು ಬದಲಾವಣೆಗಳೊಂದಿಗೆ 21 ರೂ. ವೆಚ್ಚದಲ್ಲಿ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಫಲಾನುಭವಿಗಳ ಮನೆಗೆ ತಲುಪಿಸಲಾಗುತ್ತಿತ್ತು.
ಯೋಜನೆ ಜಾರಿ ಬಳಿಕವೂ ಜಿಲ್ಲೆ ಯಲ್ಲಿ ನೀರಸ ಸ್ಪಂದನೆ ವ್ಯಕ್ತವಾಗಿತ್ತು. ಶೇ. 25 ಮಂದಿ ಮಾತ್ರ ಇದರ ಸದುಪಯೋಗ ಪಡೆಯುತ್ತಿದ್ದರು. ಕೋವಿಡ್ ಬಳಿಕ ಈಗ ಮತ್ತೆ ಫಲಾನುಭವಿಗಳು ಅಂಗನವಾಡಿಗೆ ತೆರಳಿ ಆಹಾರ ಸೇವನೆ ಮಾಡಬೇಕೆಂಬ ನಿಯಮದಿಂದ ಫಲಾನುಭವಿಗಳ ಸಂಖ್ಯೆ ಇನ್ನೂ ಕಡಿಮೆಯಾಗುತ್ತಿದೆ.
ಹಿಂದೆ ಹೇಗಿತ್ತು? :
ಹಿಂದೆ ಆಹಾರದ ಕಿಟ್ ನೀಡಲಾಗುತ್ತಿತ್ತು. ಆಗ ಶೇ. 100ರಷ್ಟು ಗುರಿ ಸಾಧನೆಯಾಗಿತ್ತು. 2017ರ ಬಳಿಕ ಅಂಗನವಾಡಿಗೆ ತೆರಳಿ ಉಣ್ಣುವಂತೆ ಮಾರ್ಪಾಡು ಮಾಡಿದಾಗ ಸ್ಪಂದನೆ ವ್ಯಕ್ತವಾಗಲಿಲ್ಲ. ಕೆಲವರು ಬರಲು ಹಿಂದೇಟು ಹಾಕುತ್ತಿದ್ದರೆ ಮತ್ತೆ ಕೆಲವರು ವಾಹನ ವ್ಯವಸ್ಥೆ ಇಲ್ಲದೆ ವಂಚಿತರಾಗಿದ್ದರು. ಕೋವಿಡ್ ಸಂದರ್ಭ ಆಹಾರ ಧಾನ್ಯ ಮನೆಗೆ ಪೂರೈಕೆ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ಲಭಿಸಿತ್ತು.
ಏನಿದು ಮಾತೃಪೂರ್ಣ ಯೋಜನೆ? :
ಗರ್ಭಿಣಿಯರು, ಬಾಣಂತಿಯರು, ನವಜಾತ ಶಿಶುಗಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದಿಂದ 2017ರಲ್ಲಿ ಜಾರಿಗೆ ಬಂದಿದೆ. ಅವರಿಗೆ ಅಂಗನವಾಡಿಗಳಲ್ಲಿ ಬಿಸಿಯೂಟ ಒದಗಿಸುತ್ತದೆ. ಅನ್ನ, ಬೇಳೆ ಸಾಂಬಾರು, ಬೇಯಿಸಿದ ಮೊಟ್ಟೆ, 200 ಮಿ.ಲೀ. ಹಾಲು, ತರ ಕಾರಿ ಪಲ್ಯ, ಬೆಲ್ಲ ಮತ್ತು ಕಡಲೆ ಬೀಜದ ಚಿಕ್ಕಿ ಒಳಗೊಂಡಿದೆ. ಸಸ್ಯಾಹಾರಿಗಳಿಗೆ ಮೊಳಕೆ ಕಾಳು ನೀಡಲಾಗುತ್ತದೆ.
ಕೋವಿಡ್ ಅನಂತರ ಫೆ. 14ರಿಂದ ಗರ್ಭಿಣಿಯರು ಮತ್ತು ಬಾಣಂತಿಯರು ಅಂಗನವಾಡಿಗಳಿಗೆ ತೆರಳಿ ಬಿಸಿಯೂಟ ಸೇವಿಸುವಂತೆ ಸರಕಾರ ಆದೇಶಿಸಿದೆ. ಜಿಲ್ಲೆಯಲ್ಲಿ ಶೇ. 23ರಷ್ಟು ಮಂದಿ ಮಾತ್ರ ಅಂಗನವಾಡಿಗೆ ಆಗಮಿಸಿ ಬಿಸಿಯೂಟ ಸೇವಿಸುತ್ತಿದ್ದಾರೆ. –ವೀಣಾ ವಿವೇಕಾನಂದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಉಡುಪಿ
- ಪುನೀತ್ ಸಾಲ್ಯಾನ್