Advertisement

ಪ್ರತಿಯೊಂದು ಕ್ಷೇತ್ರದಲ್ಲೂ ಗಣಿತ ವ್ಯಾಪಿಸಿದೆ

05:54 PM Dec 25, 2021 | Team Udayavani |

ಬೆಳಗಾವಿ: ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ನಗರದ ಡಾ| ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ನೂತನ ಗಣಿತ ಪ್ರಯೋಗಾಲಯ ಲೋಕಾರ್ಪಣೆ ಮಾಡಲಾಯಿತು. ನೂತನ ಗಣಿತ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದ ಕಲಬುರಗಿ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ. ಬಿ. ಜಿ. ಮೂಲಿಮನಿ ಅವರು, ಮನುಷ್ಯನ ಜೀವನದಲ್ಲಿ ಪ್ರತಿನಿತ್ಯ ಗಣಿತ ಒಂದಲ್ಲ ಒಂದು ರೂಪದಲ್ಲಿ ಬಳಕೆಯಾಗುತ್ತಲೇ ಇರುತ್ತದೆ. ವಿಜ್ಞಾನ, ಆರೋಗ್ಯ, ಕೃಷಿ, ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಗಣಿತ ವ್ಯಾಪಿಸಿದೆ.

Advertisement

ಲೆಕ್ಕಕ್ಕೂ ಮನುಷ್ಯನ ಜೀವನಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು. ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿ ಮಠದ ಡಾ| ಅಲ್ಲಮಪ್ರಭು ಸ್ವಾಮೀಜಿ, ಜಿಲ್ಲೆಯ ವಿದ್ಯಾರ್ಥಿಗಳು ಕಠಿಣ ಎಂದು ಭಾವಿಸುತ್ತಿರುವ ಗಣಿತವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಹಾಗೂ ಗಣಿತವನ್ನು ಪ್ರಯೋಗಗಳ ಮೂಲಕ ಕಲಿತರೆ ಅದು ಶಾಶ್ವತವಾಗಿ ಸ್ಮೃತಿಪಟಲದಲ್ಲಿ ಉಳಿಯುತ್ತದೆ ಎಂಬ ಕಾರಣದಿಂದ ವಿಜ್ಞಾನ ಕೇಂದ್ರದಲ್ಲಿ ನೂತನ ಗಣಿತ ಪ್ರಯೋಗಾಲಯ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿ ಹಾಗೂ ಶಿಕ್ಷಕ ಸಮುದಾಯ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ವೀರಣ್ಣ ಬೋಳಿಶೆಟ್ಟಿ ಮಾತನಾಡಿ, ಗಣಿತವನ್ನು ಆಸಕ್ತಿಯಿಂದ ಕಲಿತರೆ ಅದು ಕಷ್ಟ ಎನ್ನುವ ಭಾವನೆ ಬರುವುದೇ ಇಲ್ಲ. ಶಿಕ್ಷಕರು ಆಟಿಕೆಗಳನ್ನು ಬಳಸಿ ಮನರಂಜನೆಯೊಂದಿಗೆ ಗಣಿತ ಬೋಧನೆ ಮಾಡಬೇಕು ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಿಜ್ಞಾನ ಪರಿಷತ್‌ ಉಪಾಧ್ಯಕ್ಷ ಬಿ. ದೊಡ್ಡಬಸಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಪ್ರಯೋಗಾಧಾರಿತ ಗಣಿತ ಶಿಕ್ಷಣ ನೀಡದೇ ಇರುವುದರಿಂದ ಗಣಿತದಲ್ಲಿ ಅವರಿಗೆ ನಿರಾಸಕ್ತಿ ಉಂಟಾಗುತ್ತಿದೆ. ಶಿಕ್ಷಕರು ಪ್ರಯೋಗಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿಂಡಾಲ್ಕೊ ಇಂಡಸ್ಟ್ರೀಸ್‌ ಲಿ.,ನ ಕೆ. ಕುಮಾರವೇಲ್‌, ವಿಶ್ವಾಸ ಶಿಂಧೆ ಹಾಗೂ ಗಣಿತ ಶಿಕ್ಷಕರ ವೇದಿಕೆಯ ಅಧ್ಯಕ್ಷ ಎಸ್‌. ಎಂ. ಬಡೂರ ಉಪಸ್ಥಿತರಿದ್ದರು. ಬೆಳಗಾವಿ ಅಸೋಸಿಯೇಷನ್‌ ಫಾರ್‌ ಸೆ„ನ್ಸ ಎಜ್ಯುಕೇಶನ್‌ ಸಂಸ್ಥೆಯ ಕಾರ್ಯದರ್ಶಿ ಕೆ. ಬಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಶಿವಲೀಲಾ ಪೂಜಾರ ನಿರೂಪಿಸಿದರು. ಆರ್‌. ಜಿ. ಹಲಗಲಿಮಠ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next