Advertisement

ವೇಗಿಯ ದುಗುಡ

06:23 PM Oct 28, 2019 | mahesh |

ಅಮೆರಿಕದಲ್ಲಿ ನೆಲೆಸಿದ ಹಂಗೆರಿಯ ಗಣಿತಜ್ಞ ಜಾನ್‌ ಫಾನ್‌ ನೊಯ್ಮಾನ್‌, ಅಸಾಧಾರಣ ವೇಗಕ್ಕೆ ಹೆಸರುವಾಸಿ. ಅವನು ಎಷ್ಟು ವೇಗವಾಗಿ ಗಣಿಸುತ್ತಿದ್ದ ಎನ್ನುವುದಕ್ಕೆ ಒಂದು ಕತೆ ಇದೆ. ಒಮ್ಮೆ, ನೊಯ್ಮಾನ್‌ನ ಈ ಮೇಧಾಶಕ್ತಿಯ ಬಗ್ಗೆ ಬಹಳ ಕೇಳಿದ್ದ ಮತ್ತು ತುಸು ಅಸೂಯೆಪಟ್ಟಿದ್ದ ತರುಣನೊಬ್ಬ ಐದು ಕ್ಲಿಷ್ಟ ಪ್ರಶ್ನೆಗಳನ್ನು ರಾತ್ರಿಯೆಲ್ಲ ನಿದ್ದೆಗೆಟ್ಟು ಕೂತು ಬಿಡಿಸಿದನಂತೆ. ಇವನ್ನು ಬಿಡಿಸಲು ನೊಯ್ಮಾನ್‌ ಎಷ್ಟು ಗಂಟೆ ತೆಗೆದುಕೊಳ್ಳಬಹುದು ಎನ್ನುವುದನ್ನು ನೋಡುವ ಕುತೂಹಲದಿಂದ, ಮರುದಿನ, ನೊಯ್ಮಾನ್‌ ಎದುರು ಅವನ್ನು ಇಟ್ಟನಂತೆ. ಪ್ರಶ್ನೆ ನೋಡಿದವನೇ ನೊಯ್ಮಾನ್‌ ಮಣಮಣ ಎನ್ನುತ್ತ ಬಾಯಾಡಿಸುತ್ತ ಲೆಕ್ಕ ಮಾಡಿ ಒಂದೊಂದೇ ಉತ್ತರಗಳನ್ನು ಹೇಳುತ್ತಾಹೋದ! ತರುಣನಿಗೆ ಏಳೆಂಟು ಗಂಟೆ ಬೇಡಿದ ಲೆಕ್ಕವನ್ನು ನೊಯ್ಮಾನ್‌ ಉತ್ತರಿಸಿದ್ದು 2 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ!

Advertisement

ನೊಯ್ಮಾನ್‌ ನಾಲ್ಕು ಪ್ರಶ್ನೆಗಳಿಗೆ ಸರಸರನೆ ಉತ್ತರ ಕೊಟ್ಟು ಐದನೆಯದಕ್ಕೆ ಬರುವ ಹೊತ್ತಿಗೆ ತರುಣ ಮೂರ್ಛೆ ತಪ್ಪುವಂತಾಗಿದ್ದ. ಆದರೂ ಸಾವರಿಸಿಕೊಂಡು, ತಾನೂ ಅವನ ಜೊತೆ ಜೊತೆಗೇ ಲೆಕ್ಕ ಮಾಡಿದಂತೆ ಪೋಸ್‌ ಕೊಡುತ್ತ ಅದರ ಉತ್ತರ 65.25 ಅಲ್ಲವೆ! ಎಂದುಬಿಟ್ಟ. ನೊಯ್ಮಾನ್‌ ಒಂದು ಕ್ಷಣ ಲೆಕ್ಕವನ್ನೂ ಆ ತರುಣನ ಮುಖವನ್ನೂ ನೋಡಿ ಸ್ವಲ್ಪ ಯೋಚಿಸಿ, ಹೌದು! ನೀನು ಹೇಳಿದ ಉತ್ತರ ಸರಿ! ಎಂದ. ತರುಣ ಹೊರಟುಹೋದ ಮೇಲೆ ನೊಯ್ಮಾನ್‌ ಮುಖ ಸಪ್ಪೆಯಾಗಿ ಬಾಡಿಹೋಗಿತ್ತು. ಆ ತರುಣ ಅಷ್ಟು ವೇಗದಿಂದ ಉತ್ತರ ಹೇಳಲು ಹೇಗೆ ಸಾಧ್ಯವಾಯಿತು? ಎನ್ನುವ ಗುಂಗಿಹುಳವೇ ಇಡೀ ದಿನ ಅವನ ತಲೆ ಕೊರೆಯುತ್ತಿತ್ತು. ಅವನ ಸಂಕಟವನ್ನು ನೋಡಿ ಮುಸಿನಗುತ್ತಿದ್ದ ಗೆಳೆಯರು ಕೊನೆಗೆ, ತರುಣ ರಾತ್ರಿ ಇಡೀ ಕೂತು ಲೆಕ್ಕ ಮಾಡಿ ಉತ್ತರ ಬರೆದುಕೊಂಡೇ ಬಂದಿದ್ದ ರಹಸ್ಯವನ್ನು ಹೇಳಿದ ಮೇಲೆಯೇ ನೊಯ್ಮಾನನ ದುಗುಡ ಇಳಿದದ್ದು!

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next