Advertisement
ಪಟ್ಟಣದ ಸೊಪ್ಪುಗುಡ್ಡೆಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತೀನ್ ಬೆಂಗಳೂರಿನ ಘಟನೆಯ ಬಳಿಕ ನಮ್ಮ ಸಂಪರ್ಕದಲ್ಲಿಲ್ಲ. ನನ್ನ ಮಗ ಹೀಗೆ ಆಗುತ್ತಾನೆ ಅಂತ ನಮಗೇ ಗೊತ್ತಿರಲಿಲ್ಲ. ಅವನು ಚೆನ್ನಾಗಿ ಇರಲಿ ಎಂದು ಓದಿಸಿದ್ದೆವು. ಬೆಂಗಳೂರಿನಲ್ಲಿ ಬಿಇ ಓದುತ್ತಿದ್ದ. ಬಳಿಕ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ಈಗ ತಂತ್ರಜ್ಞಾನ ಚೆನ್ನಾಗಿದೆ. ಮೊಬೈಲ್‌ನಲ್ಲಿ ಯಾರು ಏನು ಮಾಡುತ್ತಿರುತ್ತಾರೆ ಎಂದು ಗೊತ್ತಾಗುವುದಿಲ್ಲ. ಸೋಮವಾರ ಬೆಳಗ್ಗೆ ಮಂಗಳೂರು ಘಟನೆ ಕುರಿತು ಪೊಲೀಸರು ಬಂದು ಮನೆಯಲ್ಲಿ ತನಿಖೆ ನಡೆಸಿದ್ದಾರೆ. ಅವರಿಗೆ ಏನು ಬೇಕೋ ಅದನ್ನು ಪರಿಶೀಲಿಸಿಕೊಂಡು ಹೋಗಿದ್ದಾರೆ. ಮತೀನ್‌ಗೆ ನಾನು ಹೇಳುವುದಿಷ್ಟೆ – “ಎಲ್ಲೇ ಇದ್ದರೂ ಬಂದು ಬಿಡು. ಒಳ್ಳೆಯ ದಾರಿಯಲ್ಲಿ ಜೀವನ ನಡೆಸು’ ಎಂದರು.
Related Articles
Advertisement
ಬೆಂಗಳೂರು: ಸ್ಫೋಟಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಆರೋಪಿಯ ವೈಯಕ್ತಿಕ ಮಾಹಿತಿ, ಆತನ ಸಂಪರ್ಕ ಮುಂತಾದವುಗಳನ್ನು ಸಂಗ್ರಹಿಸಲಾಗುತ್ತಿದೆ. ಆರೋಪಿಯ ನಿಜವಾದ ಹೆಸರು ಗೊತ್ತಾದ ಬಳಿಕ ಯವ್ಯಾವ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶಂಕಿತ ವ್ಯಕ್ತಿ ವಶಕ್ಕೆ :
ಬೆಂಗಳೂರು: ಮಂಗಳೂರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಮೈಸೂರು ಪೊಲೀಸರು ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಮಂಗಳೂರು ಪೊಲೀಸರ ವಶದಲ್ಲಿರುವ ಶಾರೀಖ್ ಜತೆಗೆ ಮೈಸೂರು ಮೂಲದ ಮಹಮದ್ ರುಹುಲ್ಲಾ ಎಂಬಾತ ನಂಟು ಹೊಂದಿದ್ದ ಎನ್ನಲಾಗುತ್ತಿದ್ದು, ಆತನನ್ನು ನಗರದ ಕೆ.ಜಿ. ಹಳ್ಳಿಯಿಂದ ರವಿವಾರ ಪೊಲೀಸರು ವಶಕ್ಕೆ ಪಡೆದು ಮೈಸೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರ ಜತೆ ಇನ್ನೂ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದಾರೆ.
ರವಿವಾರ ರಾತ್ರಿಯೇ ಮಹಮದ್ ರುಹುಲ್ಲಾನನ್ನ ಪೊಲೀಸರು ವಶಕ್ಕೆ ಪಡೆದು, ತಡರಾತ್ರಿ ಮೈಸೂರಿಗೆ ಕರೆದೊಯ್ದಿದ್ದು ಬಳಿಕ ಅಲ್ಲಿಂದ ವಿಚಾರಣೆಗಾಗಿ ಮಂಗಳೂರಿಗೆ ಕರೆದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಕೆ.ಜಿ. ಹಳ್ಳಿಯಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಮಹಮದ್ ರುಹುಲ್ಲಾ ಬಾಂಬ್ ಸ್ಫೋಟದ ಆರೋಪಿ ಶಾರೀಖ್ ಜತೆಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ ಎಂದರು.
ಮೈಸೂರು ಪೊಲೀಸರು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಕೆ.ಜಿ.ಹಳ್ಳಿ ಪೊಲೀಸರು ಹಲವು ಮಜಲುಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಆತನಿಗೆ ಆಶ್ರಯ ನೀಡಿದ ವ್ಯಕ್ತಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಕುಕ್ಕರ್ ಸ್ಫೋಟದ ಹಿಂದೆ ದೊಡ್ಡ ಷಡ್ಯಂತ್ರವಿದೆ. ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಬಹಳಷ್ಟು ಸಾವು-ನೋವು ಉಂಟು ಮಾಡುವುದಕ್ಕಾಗಿ ಶಾರೀಖ್ ಅಲ್ಲಿಗೆ ಹೋಗುತ್ತಿದ್ದುದಾಗಿ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಈಗಾಗಲೇ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಮೇಲ್ನೋಟಕ್ಕೆ ಆತ ಆತ್ಮಹತ್ಯಾ ಬಾಂಬರ್ ಎಂದನಿಸುತ್ತದೆ. ತನಿಖೆಯ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ. -ಆರಗ ಜ್ಞಾನೇಂದ್ರ, ಗೃಹ ಸಚಿವ