Advertisement

ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು: ಎಂ.ಸಿ. ವೇಣುಗೋಪಾಲ

02:59 PM Dec 08, 2023 | Team Udayavani |

ಬೆಳಗಾವಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸುಮಾರು ಮೂರು ವರ್ಷಗಳ ಕಾಲ ಸಮೀಕ್ಷೆ ಮಾಡಿ, ಸಿದ್ದಪಡಿಸಿದ ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಸಿ. ವೇಣುಗೋಪಾಲ ಮನವಿ ಮಾಡಿದರು.

Advertisement

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗದ ಮೂಲಕ ಮಾಡಿರುವ “ಜಾತಿವಾರು ಸಮೀಕ್ಷಾ ವರದಿ”ಯನ್ನು ಸ್ವೀಕರಿಸಿ, ಆಯೋಗ ನೀಡಿರುವ ಅಂಕಿಅಂಶಗಳ ಆಧಾರದ ಮೇಲೆ ಈಗಿರುವ ಪಟ್ಟಿಗಳನ್ನು ಪುನರ್ ಪರಿಶೀಲಿಸಿ, ಪರಿಷ್ಕೃತ ಪಟ್ಟಿಗಳನ್ನು ರೂಪಿಸುವ ಅವಶ್ಯಕತೆ ಇದೆ. ಹೀಗಾಗಿ ಜಾತಿ ಸಮೀಕ್ಷೆ ವರದಿ ಜಾರಿಗೆ ಮಠಾಧೀಶರು ಅಡ್ಡಿಪಡಿಸಬಾರದು ಎಂದರು.

ಹಾಲಿ ಎಲ್ಲಾ ಹಿಂದುಳಿದ ವರ್ಗಗಳಿಗೂ ಒಟ್ಟಾರೆ ಶೇ.32 ಮೀಸಲಾತಿ ಇದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿ ಹಾಗೂ ಯಾವುದೇ ಮಾನದಂಡಗಳನ್ನು ಅನುಸರಿಸದೆ, ಯಾವುದೇ ಆಯೋಗಗಳಿಂದ ಶಿಫಾರಸ್ಸು ಇಲ್ಲದೆ, ಕೇವಲ ರಾಜಕೀಯ ಉದ್ದೇಶಗಳಿಗಾಗಿ ಹಿಂದಿನ ಸರ್ಕಾರಗಳು ನೀಡಿದ್ದು, ಆಯಾ ಜಾತಿಗಳ ಜನಸಂಖ್ಯಾನುಸಾರ ನೀಡದೇ ಇರುವುದರಿಂದ ಶೇ.90 ರಷ್ಟು ಜಾತಿಗಳಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಯಾವುದೇ ಸವಲತ್ತುಗಳು ಸಿಗದೆ ಅವಕಾಶ ವಂಚಿತರಾಗಿದ್ದಾರೆ ಎಂದರು.

ಸಿಎಂ ಸಿದ್ಧರಾಮಯ್ಯ ಅವರು 2015ರಲ್ಲಿ ರಾಷ್ಟ್ರದಲ್ಲೇ ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಆದೇಶ ನೀಡಿ, ರೂ. 178.00 ಕೋಟಿ ರೂ. ಹಣ ಬಿಡುಗಡೆಗೊಳಿಸಿದ್ದಾರೆ. ಆದರೆ ಈಗ ಜಾತಿ ಸಮೀಕ್ಷೆ ವರದಿ ಜಾರಿಗೆ ಯಾರೇ ಅಡ್ಡಿ ಪಡಿಸುವುದು ಸರಿಯಲ್ಲ ಎಂದು ಹೇಳಿದರು.

ಜಾತಿ ಸಮೀಕ್ಷೆ ವರದಿ ಕುರಿತು ಜಾಗೃತಿ ಮೂಡಿಸಲು ಹುಬ್ಬಳ್ಳಿಯಲ್ಲಿ ನಾಳೆ ಸಭೆಯನ್ನು ಕರೆಯಲಾಗಿದೆ ಎಂದು ಹೇಳಿದರು. 2015ರಲ್ಲಿ 178 ರೂ. ಕೋಟಿ ರೂ. ಖರ್ಚು ಮಾಡಿ, ಹಿಂದುಳಿದ ವರ್ಗಗಳ ಆಯೋಗದಲ್ಲಿರುವ ಜಾತಿ ಸಮೀಕ್ಷಾ ವರದಿಯನ್ನು ತರಿಸಿಕೊಂಡು ಕೂಡಲೇ ಅನುಷ್ಠಾನಗೊಳಿಸುವ ಮೂಲಕ ಎಲ್ಲಾ ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಆಗ್ರಹಿಸಿದರು.

Advertisement

ಸಂವಿಧಾನದ ಪ್ರಕಾರ ಜಾತಿಗಣತಿಯು ಪ್ರತಿ 10 ವರ್ಷಕ್ಕೆ ಒಮ್ಮೆ ನಡೆಸಬೇಕಾಗಿರುತ್ತದೆ. ಆದರೆ 1995ರಲ್ಲಿ ಕಾನೂನು ಜಾರಿಯಾಗಿ 25 ವರ್ಷಗಳು ಕಳೆದರೂ ದೇಶದ ಯಾವುದೇ ರಾಜ್ಯ ಸರ್ಕಾರಗಳು ಅನುಷ್ಠಾನ ಗೊಳಿಸುವಲ್ಲಿ ವಿಫಲರಾಗಿರುವುದು ವಿಪರ್ಯಾಸವೇ ಸರಿ ಎಂದ ಅವರು, ಇದೇ ವೇಳೆ ದೇಶದಲ್ಲಿ ಮೊಟ್ಟ ಮೊದಲು ಬಾರಿಗೆ ಜಾತಿ ಸಮೀಕ್ಷೆ ವರದಿ ಜಾರಿಗೆ ತಂದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾ‌ರ್‌ ಅವರಿಗೆ ವೇದಿಕೆಯಿಂದ ಅಭಿನಂದನೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next