Advertisement

ಚೊಚ್ಚಲ ಗರ್ಭಿಣಿಯರಿಗೆ ಮಾತೃವಂದನ ಯೋಜನೆ

12:22 AM Dec 03, 2019 | mahesh |

ಉಡುಪಿ/ ಮಂಗಳೂರು: ಚೊಚ್ಚಲ ಬಾರಿಗೆ ಗರ್ಭಿಣಿಯಾಗುವ ಮಹಿಳೆ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಪ್ರೋತ್ಸಾಹ ಧನ ರೂಪದಲ್ಲಿ ಕೇಂದ್ರ ಸರಕಾರವು ಪ್ರಧಾನಮಂತ್ರಿ ಮಾತೃವಂದನ ಯೋಜನೆ ಜಾರಿಗೆ ತಂದಿದೆ. ಅರ್ಹ ತಾಯಂದಿರಿಗೆ ಮೂರು ಕಂತುಗಳಲ್ಲಿ 5 ಸಾವಿರ ರೂ.ಗಳನ್ನು ನೇರ ವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು. ಎಪಿಎಲ್‌ ಮತ್ತು ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬದ ಮಹಿಳೆಯರೂ ಯೋಜನೆಯ ಪ್ರಯೋಜನ ಪಡೆಯಬಹುದು. ಕೇಂದ್ರ/ರಾಜ್ಯ ಸರಕಾರಿ ನೌಕರರು ಮತ್ತು ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಅವಕಾಶವಿಲ್ಲ.

Advertisement

ನೋಂದಣಿ ವಿಧಾನ
ಗರ್ಭಿಣಿಯರು ಸಮೀಪದ ಅಂಗನವಾಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮೊದಲನೇ ಕಂತಿನ ಅನುದಾನ ಪಡೆಯಲು ತನ್ನ ಮತ್ತು ಪತಿಯ ಆಧಾರ್‌ ಪ್ರತಿ, ಮೊಬೈಲ್‌ ಸಂಖ್ಯೆ, ತಾಯಿ ಮತ್ತು ಮಗುವಿನ ರಕ್ಷಣಾ ಕಾರ್ಡ್‌ನ ಪ್ರತಿ, ಬ್ಯಾಂಕ್‌/ಅಂಚೆ ಕಚೇರಿಯ ವಿವರ ಗಳೊಂದಿಗೆ ನಿಗದಿತ ಅರ್ಜಿ ಭರ್ತಿ ಮಾಡಿ ನೀಡಬೇಕು. ಮೊದಲ ಹಂತ ದಲ್ಲಿ 1 ಸಾವಿರ ರೂ. ಪ್ರೋತ್ಸಾಹಧನ ಮಹಿಳೆಯ ಖಾತೆಗೆ ಜಮೆ ಆಗಲಿದೆ. ಗರ್ಭಿಣಿ ಆದ 150 ದಿನಗಳಲ್ಲಿ ಈ ಪ್ರೋತ್ಸಾಹ ಧನ ದೊರೆಯುತ್ತದೆ.

2ನೇ ಕಂತಿನ ಪ್ರೋತ್ಸಾಹ ಧನ ಪಡೆಯಲು ಕನಿಷ್ಠ ಒಂದು ಬಾರಿ ಆರೋಗ್ಯ ತಪಾಸಣೆ ನಡೆಸಿರಬೇಕು, ತಾಯಿ ಮತ್ತು ಮಗುವಿನ ರಕ್ಷಣಾ ಕಾರ್ಡ್‌ನ ಪ್ರತಿ ನೀಡಬೇಕು. ಗರ್ಭಿಣಿ ಆದ 180 ದಿನದಲ್ಲಿ 2 ಸಾವಿರ ಪ್ರೋತ್ಸಾಹಧನ ಜಮೆ ಆಗಲಿದೆ. 3ನೇ ಮತ್ತು ಕೊನೆಯ ಹಂತದ ಅನುದಾನ ಪಡೆಯಲು ಮಗುವಿನ ಜನನ ಪ್ರಮಾಣಪತ್ರ ಮತ್ತು ಮಗುವಿಗೆ ಚುಚ್ಚುಮದ್ದು ನೀಡಿರುವ ಮಾಹಿತಿಯೊಂದಿಗೆ ತಾಯಿ ಮತ್ತು
ಮಗುವಿನ ರಕ್ಷಣಾ ಕಾರ್ಡ್‌ನ ಪ್ರತಿ ನೀಡಬೇಕು. 2 ಸಾವಿರ ರೂ. ಪ್ರೋತ್ಸಾಹ ಧನ ಲಭಿಸಲಿದೆ. ಜನನಿ
ಸುರಕ್ಷಾ ಯೋಜನೆಯಡಿ 1 ಸಾವಿರ ರೂ. ಹೆಚ್ಚುವರಿ ಪ್ರೋತ್ಸಾಹ ಧನವೂ ದೊರೆಯಲಿದೆ.

ಡಿ. 2ರಿಂದ 8ರ ವರೆಗೆ ಮಾತೃ ವಂದನ ಸಪ್ತಾಹ ನಡೆಯುತ್ತಿದ್ದು, ಜಿಲ್ಲೆಯ ಎಲ್ಲ ಅಂಗನವಾಡಿಗಳಲ್ಲಿ ಗರ್ಭಿಣಿಯರ ನೋಂದಣಿ ಕಾರ್ಯ ನಡೆಯುತ್ತಿದೆ. ಗರ್ಭಿಣಿಯರು ತಮ್ಮ ಸಮೀಪದ ಅಂಗನವಾಡಿಗಳಲ್ಲಿ ನೋಂದಣಿ ಮಾಡಿಕೊಂಡು ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next