Advertisement

ಫಲಿತಾಂಶ ಪ್ರಕಟ: ದ.ಕ.ಬಿಜೆಪಿ ಪಾಳಯದಲ್ಲಿ ಸಂಭ್ರಮಾಚರಣೆ

07:50 PM May 23, 2019 | Team Udayavani |

ಮಹಾನಗರ: ದಕ್ಷಿಣ ಕನ್ನಡದ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಹ್ಯಾಟ್ರಿಕ್‌ ಗೆಲುವಿನಿಂದಾಗಿ ದ.ಕ. ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಗುರುವಾರ ಸಂಭ್ರಮ ಮನೆ ಮಾಡಿತ್ತು. ಸಂಭ್ರಮೋತ್ಸವವು ಬಂಟ್ಸ್‌ ಹಾಸ್ಟೆಲ್‌ ಬಳಿ ಇರುವ ಬಿಜೆಪಿ ಚುನಾವಣ ಕಚೇರಿಗೆ ಸೀಮಿತವಾಗಿತ್ತು.

Advertisement

ಕೊಡಿಯಾಲ್‌ಬೈಲ್‌ನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕೆಲವೇ ಮಂದಿ ನಾಯಕರು ಟಿ.ವಿ. ವೀಕ್ಷಣೆ ಮಾಡುತ್ತಿದ್ದರು. ಬಂಟ್ಸ್‌ ಹಾಸ್ಟೆಲ್‌ ಬಳಿ ಇರುವ ಬಿಜೆಪಿ ಚುನಾವಣ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ, ಶಾಸಕ ಸಂಜೀವ ಮಠಂದೂರು, ಶಾಸಕ ವೇದವ್ಯಾಸ ಕಾಮತ್‌ ಮತ್ತು ಇತರ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಂಭ್ರಮಿಸಿದರು.

ಫಲಿತಾಂಶ ವೀಕ್ಷಣೆಗಾಗಿ ಬಿಜೆಪಿ ಚುನಾವಣ ಕಚೇರಿಯ ಜಗಲಿಯಲ್ಲಿ ದೊಡ್ಡ ಗಾತ್ರದ ಟಿವಿ ಯನ್ನು ಹಾಕಲಾಗಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲವು ಪ್ರಕಟವಾದಾಗ ಕಾರ್ಯಕರ್ತರು ಜೈಕಾರ ಕೂಗಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಅಲ್ಲದೆ ವಿರೋಧಿ ಪಾಳಯದ ಘಟಾನುಘಟಿ ನಾಯಕರು ಸೋತಾಗ ಕಾರ್ಯಕರ್ತರು ಹೋ… ಎಂದು ಏರು ಧ್ವನಿಯಲ್ಲಿ ಕೂಗಿ ಖುಷಿ ಪಡುತ್ತಿರುವ ದೃಶ್ಯ ಕಂಡು ಬಂತು.

ಮೋದಿ ಟಿ- ಶರ್ಟ್‌, ಕೈಯಲ್ಲಿ ಪಕ್ಷದ ಧ್ವಜ
ಕೆಲವು ಮಂದಿ ಬಿಜೆಪಿ ಕಾರ್ಯಕರ್ತರು ಮೋದಿ ಟೀ- ಶರ್ಟ್‌ ಮತ್ತು ಪಕ್ಷದ ಚಿಹ್ನೆ ಇರುವ ಶಾಲು ಧರಿಸಿ ಜೈಕಾರ ಹಾಕಿದರು. ಮೋದಿ… ಮೋದಿ… ಮೋದಿ…ಘೋಷಣೆಯನ್ನು ಕೂಡ ಕೂಗಿದರು. ಅಲ್ಲದೆ ಕೆಲವು ಜನ ಕಾರ್ಯ ಕರ್ತರು ಬಿಜೆಪಿ ಪಕ್ಷದ ಧ್ವಜವನ್ನು ಹಾಗೂ ಭಗವಾಧ್ವಜವನ್ನು ಹಿಡಿದು ಬೈಕ್‌ ರ್ಯಾಲಿ ನಡೆಸಿದರು.

ವಿಜಯದ ಘೋಷಣೆಯ ಮೊದಲೇ ಸಂಭ್ರಮ ಆರಂಭ
ಬೆಳಗ್ಗಿನಿಂದಲೇ ಕಾರ್ಯಕರ್ತರು ಪಕ್ಷದ ಚುನಾವಣ ಕಚೇರಿಯ ಆವರಣದಲ್ಲಿ ಜಮಾಯಿಸಿ ಟಿವಿ ಎದುರು ಕುಳಿತಿದ್ದರು. ನಳಿನ್‌ಕುಮಾರ್‌ ಕಟೀಲು ಅವರಿಗೆ 50 ಸಾವಿರ ಲೀಡ್‌ ಬರುತ್ತಿದ್ದಂತೆ ಬಂಟ್ಸ್‌ ಹಾಸ್ಟೆಲ್‌ನಲ್ಲಿರುವ ದ.ಕ. ಬಿಜೆಪಿ ಚುನಾವಣಾ ಕಚೇರಿ ಮುಂಭಾಗದಲ್ಲಿ ಬೆಳಗ್ಗೆ 10.30ರ ಸುಮಾರಿಗೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಲೀಡ್‌ ಅಂತರ ಲಕ್ಷ ದಾಟುತ್ತಿದ್ದಂತೆ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವಿಶಂಕರ್‌ ಮಿಜಾರ್‌ ಸಹಿತ ನೂರಾರು ಕಾರ್ಯಕರ್ತರು ಬೆಳಗ್ಗೆಯೇ ಚುನಾವಣ ಕಚೇರಿಗೆ ಆಗಮಿಸಿ ಟಿವಿ ವೀಕ್ಷಣೆಯಲ್ಲಿ ತೊಡಗಿದ್ದರು.

Advertisement

ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುವುದು ಸುದ್ದಿವಾಹಿನಿಗಳ ಮೂಲಕ ಗೊತ್ತಾಗುತ್ತಿಂದಂತೆ ಕಾರ್ಯಕರ್ತರು ಚಪ್ಪಾಳೆ ತಟ್ಟಿ ಖುಷಿ ವ್ಯಕ್ತಪಡಿಸುತ್ತಿದ್ದರು.

ಕೊಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಯೂ ಕಾರ್ಯ ಕರ್ತರು ಬೆಳಗ್ಗೆಯೇ ಕಚೇರಿಗೆ ಆಗಮಿಸಿ ಟಿವಿ ಮುಂದೆ ಕುಳಿತಿದ್ದರು. ಬಿಜೆಪಿ ಮುನ್ನಡೆಯ ಕುರಿತು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸುತ್ತಿದ್ದರು. ಎರಡೂ ಕಡೆಗಳಲ್ಲಿಯೂ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಸೋಲು-ಗೆಲುವಿನ ಬಗ್ಗೆ ಕುತೂಹಲವಿತ್ತು.

ದ್ವಿಚಕ್ರ ವಾಹನ ಸವಾರರು ದಾರಿ ಮಧ್ಯೆ ವಾಹನ ನಿಲ್ಲಿಸಿ ಮೊಬೈಲ್‌ ಫೋನ್‌ನಲ್ಲಿ ಫಲಿತಾಂಶವನ್ನು ವೀಕ್ಷಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಬಿಕೋ ಎನ್ನುತ್ತಿದ್ದ ಕಾಂಗ್ರೆಸ್‌ ಕಚೇರಿ
ದ. ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ಕುಮಾರ್‌ ಕಟೀಲು ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದರೆ ಅತ್ತ ಕಾಂಗ್ರೆಸ್‌ ಕಚೇರಿ ಬಿಕೋ ಎನ್ನುತ್ತಿತ್ತು.

ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಅವರ ಸೋಲು ಖಚಿತವಾಗುತ್ತಿದ್ದಂತೆ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್‌ ಕಚೇರಿಯಲ್ಲಿ ಕಾರ್ಯಕರ್ತರ ಸಂಖ್ಯೆ ವಿರಳವಾಗಿತ್ತು. ಬೆಳಗ್ಗೆ 11ರ ಸುಮಾರಿಗೆ ಕಾಂಗ್ರೆಸ್‌ ಕಚೇರಿಯಲ್ಲಿ ಕೇವಲ ಐದು ಮಂದಿ ಟಿವಿ ವೀಕ್ಷಣೆಯಲ್ಲಿ ತೊಡಗಿದ್ದರು. ಕಾರ್ಯಕರ್ತರು, ಮುಖಂಡರಿಲ್ಲದೆ, ಕಚೇರಿ ಬಿಕೋ ಎನ್ನುತ್ತಿತ್ತು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ಕುಮಾರ್‌ ಅವರು ತಮ್ಮ ಕ್ಯಾಬಿನ್‌ನೊಳಗೆ ಕುಳಿತು ಫಲಿತಾಂಶ ವೀಕ್ಷಿಸುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next