Advertisement

ಪ್ರಕೃತಿ ನಿಯಮಗಳ ಪಾಲನೆಗೆ “ಅಮ್ಮ’ಕರೆ

12:30 AM Mar 09, 2019 | Team Udayavani |

ಮಂಗಳೂರು: ಪ್ರಕೃತಿಯ ಆರಾಧನೆಯೂ ಭಗವಂತನ ಆರಾಧನೆಯಾಗಿದೆ. ಪ್ರಕೃತಿಯ ನಿಯಮಗಳನ್ನು ನಾವು ಪಾಲಿಸಬೇಕಾಗಿದೆ ಎಂದು ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರು ನುಡಿದರು.

Advertisement

ನಗರದ ಬೋಳೂರಿನ ಅಮೃತ ವಿದ್ಯಾಲಯಂನಲ್ಲಿ ಬ್ರಹ್ಮಸ್ಥಾನ ಮಹೋತ್ಸವದ ಅಮೃತ ಸಂಗಮದ ಸತ್ಸಂಗದಲ್ಲಿ ಶುಕ್ರವಾರ ಅವರು ಆಶೀರ್ವಚನ ನೀಡಿದರು. ಪ್ರಕೃತಿಯನ್ನು ಉಳಿಸದೆ ಮಾನವ ಜನಾಂಗಕ್ಕೆ ಉಳಿಗಾಲವಿಲ್ಲ. ಗಿಡ ಮರ ನೆಲ ಜಲಗಳ ಸಂರಕ್ಷಣೆಯಾಗಬೇಕು. ದೇವರಂತೆಯೇ ಪ್ರಕೃತಿಯನ್ನು ಕೂಡ ಪೂಜಿಸಬೇಕು. ಏಕತೆ, ತ್ಯಾಗ, ನಿಸ್ವಾರ್ಥತೆಗಳು ಪ್ರಕೃತಿಯ ನಿಯಮ ಎಂದರು.

ಈಗ ತಂತ್ರಜ್ಞಾನದ ವೇಗದ ಯುಗ. ಈ ವೇಗದಿಂದಾಗಿ ಮನುಕುಲ ಆಂತರಿಕ ಮತ್ತು ಬಾಹ್ಯ ಜಂಜಾಟಕ್ಕೆ ತುತ್ತಾಗಿದೆ. ಇದರ ಪರಿಣಾಮವಾಗಿ ಸಿಟ್ಟು, ನಿರಾಸೆ, ಆತ್ಮವಿಶ್ವಾಸದ ಕೊರತೆ ಉಂಟಾಗಿದೆ. ಈ ಕ್ಷೋಭೆಗಳಿಂದ ಪಾರಾಗಲು ಆಧ್ಯಾತ್ಮಿಕತೆಯನ್ನು ರೂಢಿಸಿಕೊಳ್ಳಬೇಕು. ಪ್ರೇಮದಿಂದಲೇ ಎಲ್ಲ ಶಕ್ತಿಯನ್ನು ಪಡೆದುಕೊಳ್ಳಲು ಸಾಧ್ಯ. ಈ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಧನ್ಯತೆ: ಸಂಧ್ಯಾ ಪೈ
“ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಮುಖ್ಯ ಅತಿಥಿಯಾಗಿದ್ದರು. ಅಮ್ಮನವರ ಸತ್ಸಂಗ ಧನ್ಯತೆಯನ್ನು ತಂದಿದೆ. ಅವರಿಗೆ ಸರ್ವ ಭಕ್ತರ ಪರವಾಗಿ ಕೃತಜ್ಞತೆ ಅರ್ಪಿಸುವುದಾಗಿ ಹೇಳಿದರು. ಕಾರ್ಪೊರೇಷನ್‌ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕಿ ಭಾರತಿ ಪಿ.ವಿ. ಅವರು ಮಾತಾ ಅಮೃತಾನಂದಮಯಿ ಅವರ ಸಂದೇಶಗಳು ಜಗತ್ತಿಗೆ ಮಾರ್ಗದರ್ಶಕವೆಂದರು.

ಸಂಸದ ನಳಿನ್‌ ಕುಮಾರ್‌ ಕಟೀಲು, ಸಚಿವ ಯು.ಟಿ. ಖಾದರ್‌, ಶಾಸಕರಾದ ವೇದವ್ಯಾಸ ಕಾಮತ್‌ ಮತ್ತು ಡಾ| ಭರತ್‌ ಶೆಟ್ಟಿ, ಮೇಯರ್‌ ಭಾಸ್ಕರ್‌ ಕೆ., ಮಾಜಿ ಸಚಿವ ಕೃಷ್ಣ ಪಾಲೆಮಾರ್‌, ಕರ್ಣಾಟಕ ಬ್ಯಾಂಕಿನ ಜಿಎಂ ಚಂದ್ರಶೇಖರ ರಾವ್‌, ಎಂಆರ್‌ಪಿಎಲ್‌ನ ಜಿಜೆಎಂ ಪ್ರಸಾದ್‌, ಮಂಗಳಾಮೃತ ಚೈತನ್ಯ ಅವರು ಮಠದ ವತಿಯಿಂದ ವಿವಿಧ ಸೇವಾ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಿದರು.

Advertisement

ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಪ್ರಸಾದ್‌ರಾಜ್‌ ಕಾಂಚನ್‌ ಸ್ವಾಗತಿಸಿದರು. ಡಾ| ಅಶೋಕ್‌ ಶೆಣೈ ನಿರೂಪಿಸಿದರು. ಸುರೇಶ್‌ ಅಮೀನ್‌ ವಂದಿಸಿದರು.

ಶಿಸ್ತಿನ ಭಕ್ತಸಾಗರ
ಅಮ್ಮನವರ ಆಶೀರ್ವಚನ, ಪ್ರವಚನ, ಸಂಕೀರ್ತನೆಗಳ ಸಹಿತವಾದ ಸತ್ಸಂಗದಲ್ಲಿ ದೇಶ ವಿದೇಶಗಳ ಅಪಾರ ಭಕ್ತಾಧಿಮಾನಿಗಳು ಪಾಲ್ಗೊಳ್ಳುತ್ತಿದ್ದಾರೆ. ಮಾ. 9ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸತ್ಸಂಗ ಮುಂದುವರಿಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next