ಎಂ.ಮೂರ್ತಿ
ಮಾಸ್ತಿ: ಸರ್ಕಾರ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಎರಡೂವರೆ ವರ್ಷಗಳ ಹಿಂದೆ ಗ್ರಾಮದಲ್ಲಿ 2 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದೆ. ಆದರೆ, ಈವರೆಗೂ ಅದಕ್ಕೆ ನೀರು ಪೂರೈಕೆ ಮಾಡದ ಕಾರಣ ಗ್ರಾಮಸ್ಥರಿಗೆ ಶುದ್ಧ ನೀರು ಕುಡಿಯುವ ಭಾಗ್ಯ ಸಿಕ್ಕಿಲ್ಲ.
ಒಂದೂವರೆ ಸಾವಿರ ಅಡಿಗಳಲ್ಲಿ ಸಿಗುವ ಫ್ಲೋರೈಡ್‌ಯುಕ್ತ ನೀರು ಸೇವಿಸಿ ಜನ ಹಲವು ರೋಗಗಳಿಗೆ ತುತ್ತಾಗಿದ್ದಾರೆ. ಇದನ್ನು ನಿವಾರಿಸಬೇಕು ಎಂದು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಕೆಲವು ಗ್ರಾಮಗಳಲ್ಲಿ ಈಗಾಗಲೇ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಿ, ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಮಾಸ್ತಿ ಗ್ರಾಮದ ಇಂದಿರಾನಗರ ಹಾಗೂ ದಿನ್ನಹಳ್ಳಿ ರಸ್ತೆಯ ಎ.ಕೆ.ಕಾಲೋನಿಯಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಇದುವರೆಗೂ ಚಾಲನೆ ಸಿಕ್ಕಿಲ್ಲ.
ಕೆ.ಎಸ್.ಮಂಜುನಾಥ್‌ಗೌಡ ಶಾಸಕರಾಗಿದ್ದ ಅವಧಿಯಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಎರಡು ಘಟಕ ಸ್ಥಾಪಿಸಲಾಗಿತ್ತು. ಈಗ ಕೇವಲ ನೆಪಕ್ಕೆ ಮಾತ್ರ ಎಂಬಂದಾಗಿದೆ. ಮಿನರಲ್ ವಾಟರ್ ಸೇವಿಸುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಜನ ಸಾಮಾನ್ಯರ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಮಾಸ್ತಿ ಗ್ರಾಮಸ್ಥರು ಬೇರೆ ಗ್ರಾಮಗಳಿಗೆ ತೆರಳಿ ಶುದ್ಧ ಕುಡಿಯುವ ನೀರು ತರಬೇಕಾಗಿದೆ. ಇಲ್ಲ, 35 ರೂ. ನೀಡಿ 20 ಲೀಟರ್‌ನ ಮಿನರಲ್ ವಾಟರ್ ಖರೀದಿಸಿ ಕುಡಿಯುವಂತಹ ಪರಿಸ್ಥಿತಿ ಬಂದೊದಗಿದೆ.
ಬೇಸಿಗೆ ಪ್ರಾರಂಭವಾಗುವ ಮೊದಲೇ ಈ ಭಾಗಗಳಲ್ಲಿ ನೀರಿನ ಸಮಸ್ಯೆ ಇದೆ. ಜನತೆ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಶೀಘ್ರದಲ್ಲೇ ಮಾಸ್ತಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ನೀಡಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಬಗ್ಗೆ ಕಳೆದ 3 ತಿಂಗಳ ಹಿಂದೆ ಉದಯವಾಣಿಯಲ್ಲಿ ಸುದ್ದಿ ಪ್ರಕಟವಾದ ಬಳಿಕ ಎ.ಕೆ.ಕಾಲೋನಿಯಲ್ಲಿರುವ ಶುದ್ಧ ನೀರಿನ ಘಟಕಕ್ಕೆ 15 ದಿನ ಶುದ್ಧ ನೀರು ಪೂರೈಕೆ ಮಾಡಿ, ನಂತರ ಸ್ಥಗಿತಗೊಳಿಸಲಾಗಿದೆ.