Advertisement

ಪ್ರತಿಭಾ ಪ್ರದರ್ಶನಕ್ಕೆ ಕಾರಂಜಿ ವೇದಿಕೆ

05:29 PM Aug 24, 2019 | Naveen |

ಮಾಸ್ತಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ಹೊಮ್ಮಲು ಪ್ರತಿಭಾ ಕಾರಂಜಿ ಕಾರ್ಯಕ್ರಮವು ಉತ್ತಮ ವೇದಿಕೆ ಎಂದು ಮಾಸ್ತಿ ಗ್ರಾಪಂ ಅಧ್ಯಕ್ಷೆ ಸುಗುಣಮ್ಮ ಶ್ರೀನಿವಾಸ್‌ ಹೇಳಿದರು.

Advertisement

ಮಾಸ್ತಿ ಗ್ರಾಮದ ಕರ್ನಾಟಕ ಪಬ್ಲಿಕ್‌ ಶಾಲಾ ಆವರಣದಲ್ಲಿ 2019-20ನೇ ಸಾಲಿನ ಮಾಸ್ತಿ ಕ್ಲಸ್ಟರ್‌ ಮಟ್ಟದ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ, ಕಲೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲಾ ಶಿಕ್ಷಕರು ಪ್ರತಿಭಾವಂತ ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರಿಂದ ಮತ್ತಷ್ಟು ಉತ್ತೇಜನಗೊಂಡು, ಸ್ಪರ್ಧೆಗಳಲ್ಲಿ ಭಾಗವಹಿಸಲು ಮುಂದಾಗುತ್ತಾರೆ. ಪ್ರತಿ ಮಕ್ಕಳಲ್ಲಿಯೂ ಅಗಾಧವಾದ ಪ್ರತಿಭೆ ಇರುತ್ತದೆ. ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಅಂತಹ ವಿದ್ಯಾರ್ಥಿಗಳನ್ನು ಶಿಕ್ಷಕರು ಗುರುತಿಸ ಬೇಕು ಎಂದು ಮನವಿ ಮಾಡಿದರು.

ಎಲ್ಲಾ ರಂಗಗಳಲ್ಲೂ ಪ್ರಗತಿ: ವಿದ್ಯಾರ್ಥಿ ಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸುವ ನಿಟ್ಟಿನಲ್ಲಿ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಬೋಧಕ ವರ್ಗದವರು ಕೆಲಸ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಎಲ್ಲಾ ರಂಗಗಳಲ್ಲೂ ಪ್ರಗತಿ ಹೊಂದಲು ಅನುಕೂಲವಾಗಿದೆ ಎಂದರು.

ರಾಜ್ಯ ಮಟ್ಟದಲ್ಲಿ ವಿಜೇತರಾಗಿ: ಪ್ರತಿ ಮಕ್ಕಳಲ್ಲಿಯೂ ಅಗಾಧವಾದ ಪ್ರತಿಭೆ ಇರುತ್ತದೆ. ಇಂತಹ ಪ್ರತಿಭೆಯುಳ್ಳ ವಿದ್ಯಾರ್ಥಿಗಳನ್ನು ಶಿಕ್ಷಕರು ಗುರುತಿಸಿ ಇಂತಹ ವೇದಿಕೆಗಳಲ್ಲಿ ಅವಕಾಶ ನೀಡಿದಾಗ ಮಾತ್ರ ಅವರ ಪ್ರತಿಭೆ ಹೊರ ಬರಲು ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಕಾರಂಜಿ ಯಂತಹ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿ ಕೊಂಡು, ಕ್ಲಸ್ಟರ್‌ ಮಟ್ಟದಿಂದ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲೂ ಭಾಗವಹಿಸಿ ವಿಜೇತರಾಗಿ ಎಂದು ಹಾರೈಸಿದರು.

Advertisement

ಹಿಂದಿನ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕೂ ವ್ಯತ್ಯಾಸ ಇದೆ: ಸಿ.ಆರ್‌.ಪಿ ಮುರಳಿ ಮಾತನಾಡಿ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಂದಲೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಲಸ್ಟರ್‌ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಕ್ಲಸ್ಟರ್‌ ಮಟ್ಟದಿಂದ ವಿಜೇತರಾಗಿ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದವರೆಗೂ ಮಕ್ಕಳು ಭಾಗವಹಿ ಸುತ್ತಾರೆ. ಹಿಂದಿನ ಕಾಲದ ಶಿಕ್ಷಣಕ್ಕೂ ಪ್ರಸ್ತುತ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣಕ್ಕೂ ವ್ಯತ್ಯಾಸ ಇದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಮೂಲಕ ಉತ್ತಮ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಮಾಸ್ತಿ ಕ್ಲಸ್ಟರ್‌ ವ್ಯಾಪ್ತಿಗೆ ಒಳಪಟ್ಟ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಕ್ಲಸ್ಟರ್‌ ಹಂತದಲ್ಲಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಜಿಪಂ ಸದಸ್ಯ ಎಚ್.ವಿ.ಶ್ರೀನಿವಾಸ್‌, ಅಕ್ರಂಪಾಷ, ಗ್ರಾಪಂ ಸದಸ್ಯ ಎಂ.ಸಿ. ನಾರಾಯಣಸ್ವಾಮಿ ಕೊಡುಗೆ ನೀಡಿದ ಬಹು ಮಾನವನ್ನು ಪ್ರಾಂಶುಪಾಲ ರಾಮಚಂದ್ರಪ್ಪ ಮಕ್ಕಳಿಗೆ ವಿತರಿಸಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ಎಚ್.ಚನ್ನರಾಯಪ್ಪ, ತಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ, ಗ್ರಾಪಂ ಉಪಾಧ್ಯಕ್ಷ ಸತೀಶ್‌, ಸದಸ್ಯ ನಾರಾಯಣಸ್ವಾಮಿ, ಅಲ್ಪ ಸಂಖ್ಯಾತರ ಸಮುದಾಯದ ಮುಖಂಡ ಅಕ್ರಂಪಾಷ, ಸರ್ಕಾರಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಟಿ.ಸುರೇಶ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಸ್ಸಿ, ಎಸ್‌ಟಿ ವಿಭಾಗದ ಜಿಲ್ಲಾ ಸಹ ಕಾರ್ಯದರ್ಶಿ ನಾರಾಯಣಸ್ವಾಮಿ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟಪ್ಪ, ಉಪಾಧ್ಯಕ್ಷ ರಾಮಯ್ಯ, ಕ್ಲಸ್ಟರ್‌ ವ್ಯಾಪ್ತಿಯ ಶಾಲಾ ಮುಖ್ಯ ಶಿಕ್ಷಕರಾದ ಎಸ್‌.ನಾರಾಯಣಸ್ವಾಮಿ, ಸೈಯಾದ್‌ಖಾದರ್‌, ವೀರಭದ್ರಪ್ಪ, ವೆಂಕಟೇಶ್‌, ರಾಮಕೃಷ್ಣಪ್ಪ, ವೆಂಕಟರಾಮಪ್ಪ, ನಾಗರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next