Advertisement

ಸಮುದ್ರ, ನದಿ ದಂಡೆ ಸಂರಕ್ಷಣೆಗೆ ಮಾಸ್ಟರ್‌ ಪ್ಲ್ಯಾನ್‌!

10:39 PM Dec 16, 2020 | mahesh |

ಮಹಾನಗರ: ಕರಾವಳಿಯ ಸಮುದ್ರ ಕೊರೆತ ತಗ್ಗಿಸಲು ಹಾಗೂ ನದಿ ದಂಡೆಯ ಸಂರಕ್ಷಣೆಗೆ ಇದೇ ಮೊದಲ ಬಾರಿಗೆ 300 ಕೋ.ರೂ.ಗಳ ಅನುದಾನ ದೊರೆಯಲಿದ್ದು, ಈ ಸಂಬಂಧ ದ.ಕ. ಜಿಲ್ಲೆಯಿಂದ ಕೇಂದ್ರ ಸರಕಾರಕ್ಕೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ.

Advertisement

ವಿಪತ್ತು ತಡೆಗಟ್ಟುವುದು, ಹಾನಿ ತಗ್ಗಿಸುವುದು, ಸ್ಪಂದನ ಪುನಶ್ಚೇತನ ಹಾಗೂ ಪುನರ್‌ ನಿರ್ಮಾಣ ಕ್ಕಾಗಿ ಕೇಂದ್ರದ 15ನೇ ಹಣಕಾಸು ಆಯೋಗವು ಅನುದಾನ ನೀಡುತ್ತದೆ. ದಕ್ಷಿಣ ಕನ್ನಡ, ಕಾರವಾರ, ಉಡುಪಿ ಸಹಿತ ರಾಜ್ಯಕ್ಕೆ ಒಟ್ಟು 300 ಕೋ.ರೂ. ಅನುದಾನ ದೊರೆಯಲಿದ್ದು, ಈ ಪೈಕಿ 100 ಕೋ.ರೂ. ಗಳನ್ನು ದ.ಕ. ಜಿಲ್ಲೆಗೆ ನಿಗದಿಪಡಿಸಲಾಗಿದೆ. ಮಂಗಳೂರು, ಮಂಗಳೂರು ದಕ್ಷಿಣ, ಉತ್ತರ ಹಾಗೂ ಮೂಡುಬಿದಿರೆ ವಿಧಾನಸಭೆ ಕ್ಷೇತ್ರದಲ್ಲಿ ಬರುವ ಸಮುದ್ರ ತೀರ ಹಾಗೂ ನದಿ ತೀರದ ಅಪಾಯಕಾರಿ ಪ್ರದೇಶವನ್ನು ಗುರುತಿಸಲಾಗಿದ್ದು, ಅನುದಾನದ ನಿರೀಕ್ಷೆಯಲ್ಲಿದೆ. ಸಮುದ್ರ ಕೊರೆತ ಹಾಗೂ ನದಿ ಕೊರೆತ ತಗ್ಗಿಸಲು ಎನ್‌ಡಿಆರ್‌ಎಂಎಫ್‌ ಅಡಿಯಲ್ಲಿ ಅನುದಾನ ವಿನಿಯೋಗಿಸಲು ಇತ್ತೀಚೆಗೆ ಕೇಂದ್ರ ಸರಕಾರ ಅವಕಾಶ ನೀಡಿದೆ. ಇದರಂತೆ ಕರಾವಳಿ ಹಾಗೂ ನದಿ ತೀರದ ಅತೀ ಹೆಚ್ಚು ಜನಸಂಖ್ಯೆ ಇರುವ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸಮುದ್ರ, ನದಿ ಕೊರೆತ ತಡೆಗಟ್ಟಲು ಪ್ರಸ್ತಾವ ಕಳುಹಿಸುವಂತೆ ರಾಜ್ಯ ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಯಿಂದ ಕರಾವಳಿಯ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆಗೆ ಕಳೆದ ಎಪ್ರಿಲ್‌ನಲ್ಲಿ ಸೂಚಿಸಲಾಗಿತ್ತು. ಇದರಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಾವಶ್ಯಕವಾಗಿರುವ ದೀರ್ಘ‌ಕಾಲಿಕ ಸಮುದ್ರ ಕೊರೆತ ತಡೆಗೋಡೆ ಹಾಗೂ ಬಂದರು ವ್ಯಾಪ್ತಿಯಲ್ಲಿ ಬರುವ ನದಿ ತೀರಗಳ ಕೊರೆತ ತಡೆಗಟ್ಟಲು ಸಂರಕ್ಷಣ ಕಾಮಗಾರಿಗೆ ವಿಧಾನ ಸಭಾವಾರು ಕ್ರಿಯಾ ಯೋಜನೆ ಪ್ರಸ್ತಾವ ತಯಾರಿಸಲಾಗಿದೆ.

ಲಾಭವೇನು?
ಕೆಲವು ಬಾರಿ ಭಾರೀ ಮಳೆಯಿಂದಾಗಿ ನೇತ್ರಾ ವತಿ ಹಾಗೂ ಫಲ್ಗುಣಿ ನದಿಯು ಉಕ್ಕಿ ಹರಿದ ಉದಾ ಹರಣೆಯಿದೆ. ಪರಿಣಾಮವಾಗಿ ನದಿ ದಡದ ಕೆಲವು ಭಾಗಗಳಲ್ಲಿ ನೆರೆ ನೀರು ನುಗ್ಗಿ ಹಲವು ಜನರ ಕೃಷಿ, ವಸತಿ ಪ್ರದೇಶಕ್ಕೆ ಹಾನಿಯಾಗಿತ್ತು. ನದಿ ದಂಡೆ ಇರುತ್ತಿದ್ದರೆ ನೆರೆ ನೀರು ನುಗ್ಗುವ ಪ್ರಮೇಯ ಇರುತ್ತಿರಲಿಲ್ಲ. ಈ ಮೂಲಕ ನದಿ ಪಾತ್ರದ ಜನರಿಗೆ ನೆರೆ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸುವುದು ಈ ಯೋಜನೆಯ ಮುಖ್ಯ ಗುರಿ. ಜತೆಗೆ ನದಿ ದಂಡೆ ನಿರ್ಮಾಣವಾದರೆ ಆ ಮೂಲಕ ಪ್ರವಾಸೋದ್ಯಮಕ್ಕೂ ಪೂರಕವಾದ ವಾತಾವರಣವನ್ನು ಅಲ್ಲಿ ಕೈಗೊಳ್ಳಲು ಅವಕಾಶವಿದೆ.

ನರ್ಮದಾ ಮಾದರಿ ನದಿ ದಂಡೆ?
ನರ್ಮದಾ, ಬ್ರಹ್ಮಪುತ್ರಾ ನದಿ ದಂಡೆಯಲ್ಲಿ ಸಂರಕ್ಷಣ ಕಾಮಗಾರಿ ಕೈಗೊಂಡ ಮಾದರಿಯಲ್ಲಿ ದ.ಕ. ಜಿಲ್ಲೆಯ ನೇತ್ರಾವತಿ ಹಾಗೂ ಫಲ್ಗುಣಿ ನದಿಯ ಆಯ್ದ ಭಾಗದಲ್ಲಿ ನದಿದಂಡೆ ಸಂರಕ್ಷಣ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿದೆ.

ಹಾನಿ ತಪ್ಪಿಸುವ ಉದ್ದೇಶ
ಮಳೆಗಾಲದಲ್ಲಿ ಭಾರೀ ಪ್ರವಾಹದಿಂದ ನದಿದಂಡೆ ಕೊರೆತ ಉಂಟಾಗಿ ಕೃಷಿ ಭೂಮಿ ಹಾಗೂ ವಸತಿ ಪ್ರದೇಶಗಳಿಗೆ ಆಗುವ ಹಾನಿಯನ್ನು ತಪ್ಪಿಸುವ ಸಲುವಾಗಿ ಎರಡೂ ನದಿಗಳ ಭಾಗಗಳಲ್ಲಿ ನದಿ ದಂಡೆ ನಿರ್ಮಾಣದ ಉದ್ದೇಶವಿದೆ.

Advertisement

ಅನುಮೋದನೆಯ ನಿರೀಕ್ಷೆಯಲ್ಲಿರುವ ಕ್ರಿಯಾಯೋಜನೆ
ಮಂಗಳೂರು ಕ್ಷೇತ್ರ
1. ಸೋಮೇಶ್ವರ-ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶ: 7.80 ಕೋ.ರೂ.
2. ಸೋಮೇಶ್ವರ-ಉಚ್ಚಿಲ
ಕಡಲ್ಕೊರೆತ ಪ್ರದೇಶ: 11 ಕೋ.ರೂ.
3. ಉಳ್ಳಾಲ ಸಿ ಗ್ರೌಂಡ್‌ ಕಡಲ್ಕೊರೆತ
ಪ್ರದೇಶ : 6.20 ಕೋ.ರೂ.

ಮೂಡುಬಿದಿರೆ
1. ಸಸಿಹಿತ್ಲು ಕಡಲ್ಕೊರೆತ ಪ್ರದೇಶ: 5 ಕೋ.ರೂ.
2. ಸಸಿಹಿತ್ಲುವಿನಲ್ಲಿ 1.20 ಕಿ.ಮೀ
ಕಡಲ್ಕೊರೆತ ಪ್ರದೇಶದಲ್ಲಿ
ಸಂರಕ್ಷಣ ಕಾಮಗಾರಿ: 10 ಕೋ.ರೂ.
3. ಸಸಿಹಿತ್ಲು ಭಾಗದ 1 ಕಿಮೀ ಪ್ರದೇಶದಲ್ಲಿ ಸಂರಕ್ಷಣ ಕಾಮಗಾರಿ: 10 ಕೋ.ರೂ.

ಮಂಗಳೂರು ಉತ್ತರ
1. ಮೀನಕಳಿಯ ( 2 ಪ್ರತ್ಯೇಕ ಸ್ಥಳ)ಕಡಲ್ಕೊರೆತ ಪ್ರದೇಶ: 10.25 ಕೋ.ರೂ.
2. ಚಿತ್ರಾಪುರ (2 ಪ್ರತ್ಯೇಕ ಸ್ಥಳ) ಕಡಲ್ಕೊರೆತ ಪ್ರದೇಶ: 7.50 ಕೋ.ರೂ.
3. ಸುರತ್ಕಲ್‌ ಲೈಟ್‌ಹೌಸ್‌ ಪ್ರದೇಶ: 4.25 ಕೋ.ರೂ.
4. ಮುಕ್ಕದಲ್ಲಿ ಕಡಲ್ಕೊರೆತ  ಪ್ರದೇಶ: 2 ಕೋ.ರೂ.
5. ತಣ್ಣೀರುಬಾವಿಯ ಫಾತಿಮಾ ಚರ್ಚ್‌ ಭಾಗದಿಂದ ನಾಯರ್‌ಕುದ್ರು ಭಾಗ ನದಿ ದಂಡೆ: 1 ಕೋ.ರೂ

ಮಂಗಳೂರು ದಕ್ಷಿಣ
1. ತೋಟ ಬೆಂಗ್ರೆ ಕಡಲ್ಕೊರೆತ  ಪ್ರದೇಶ: 1.80 ಕೋ.ರೂ.
2. ಫಲ್ಗುಣಿ ನದಿಯಲ್ಲಿ ತಣ್ಣೀರುಬಾವಿ ಫಾತಿಮಾ ಚರ್ಚ್‌ ವ್ಯಾಪ್ತಿ ದಂಡೆ ನಿರ್ಮಾಣ: 4.20 ಕೋ.ರೂ.
3. ಬೊಕ್ಕಪಟ್ಣ ಬೆಂಗ್ರೆಯಲ್ಲಿ ನದಿ ದಂಡೆ ನಿರ್ಮಾಣ: 4.40 ಕೋ.ರೂ.
4. ಸುಲ್ತಾನ್‌ಬತ್ತೇರಿ ವ್ಯಾಪ್ತಿಯಲ್ಲಿ ದಂಡೆ ನಿರ್ಮಾಣ: 4.60 ಕೋ.ರೂ.
5. ಕಸ್ಬಾ ಬೆಂಗ್ರೆಯಲ್ಲಿ ಕಡಲ್ಕೊರೆತ ಪ್ರದೇಶ: 10 ಕೋ.ರೂ.

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next