ಮನವಿಲ್ಲದಿದ್ದರೆ ಬದುಕೇ ಇಲ್ಲ. ಮನಸ್ಸಿನಂಥ ವಸ್ತು ವಿಶ್ವದಲ್ಲೇ ಸಿಗಲ್ಲ. “ಮಾಸ್ಟರ್ ಪೀಸ್’ ಮನಸ್ಸು ಬಹಳ ಶಕ್ತಿಯುತವಾದದ್ದು. ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಚಾಣಕ್ಯ, ದೊಡ್ಡ ಸಾಮ್ರಾಜ್ಯ ಕಟ್ಟಿದ; ಕುರಿ ಕಾಯುವ ಹುಡುಗ ಕಾಳಿದಾಸನಾದ; ಸಮುದ್ರದ ದಂಡೆಯಲ್ಲಿ ದೋಣಿ ಕಟ್ಟುವ ಕಾರ್ಮಿಕನ ಮಗ ಅಬ್ದುಲ್ ಕಲಾಂ ವಿಜ್ಞಾನಿಯಾದರು, ದೇಶದ ರಾಷ್ಟ್ರಪತಿಯೂ ಆದರು; ಬೀದಿದೀಪದ ಕೆಳಗೆ ಕುಳಿತು ಓದಿದ ಅಂಬೇಡ್ಕರ್ ಸಂವಿಧಾನವನ್ನೇ ಬರೆದರು. ಇವೆಲ್ಲವೂ ಸಾಧ್ಯವಾಗಿದ್ದು ಅವರ ಮನೋಸಾಮರ್ಥ್ಯದಿಂದ.
ಕಾರಣವಿಲ್ಲದೆ ಯಾವ ಕಾರ್ಯವೂ ನಡೆಯಲ್ಲ. ಕಾರ್ಯ ಇಲ್ಲದಿದ್ದರೆ, ಯಾವ ಕಾರಣವೂ ಹಿಂಬಾಲಿಸುವುದಿಲ್ಲ. ಇದು ಸಾರ್ವತ್ರಿಕ ಸತ್ಯ. ಮಣ್ಣು ಇಲ್ಲದಿದ್ದರೆ, ಗಡಿಗೆ ಇಲ್ಲ. ಹೀಗೆ ಮಾನವನಲ್ಲಿ ಮನಸ್ಸು ಇರದಿದ್ದರೆ, ಸುಖವೂ ಇಲ್ಲ- ದುಃಖವೂ ಇಲ್ಲ. ಮನಸ್ಸು ಇರದೇ ಇದ್ದರೆ, ಜೀವನವೇ ಇಲ್ಲ. ಮನಸ್ಸು ನಿರಾಕಾರ. ಹರಿಯುವ ನೀರಿನಂತೆ. ಅದಕ್ಕೆ ಯಾವುದೇ ಆಕಾರವಿಲ್ಲ. ಮನುಷ್ಯನ ಸಕಲ ಅನುಭವಗಳಿಗೆ ಸಕಲ ಇಂದ್ರಿಯಗಳ ವ್ಯಾಪಾರಕ್ಕೆ ಮೂಲ ಕಾರಣವೇ ಮನಸ್ಸು. ಮನಸ್ಸಿಗೆ ಅಧ್ಯಾತ್ಮದ ಸ್ಪರ್ಶವಾದರೆ, ಅದು ನಿರಾಳವಾಗುತ್ತದೆ.
ಸುವಿಚಾರಗಳನ್ನು ಕೇಳುವುದ ರಿಂದ, ಸತ್ಸಂಗ, ಶರಣರ ನುಡಿಗಳನ್ನು ಕೇಳುವುದರಿಂದ ಮನಸ್ಸು ಸ್ವತ್ಛ- ಪರಿಶುದ್ಧವಾಗುತ್ತದೆ. ಮನುಷ್ಯನ ಬಯಕೆಗಳು ಅಪರಿಮಿತ. ಧನ, ಕನಕ, ಕೀರ್ತಿ, ವಾರ್ತೆ, ವಿದ್ಯಾಬುದ್ಧಿಗಳನ್ನು ಗಳಿಸುವ ಓಟದಿಂದಾಗಿ ಮನುಷ್ಯ, ಮನದೊಳಗಿನ ಶಾಂತಿಯನ್ನು ಕಳಕೊಂಡು ಅತೃಪ್ತನಾಗಿದ್ದಾನೆ. ಲಕ್ಷಾಂತರ ರೂ.ಗಳನ್ನು ವ್ಯಯಿಸಿ ಮನೆ ಕಟ್ಟುತ್ತೇವೆ. ಒಂದೇ ಒಂದು ರೂಪಾಯಿ ಬೆಲೆಯ ಮೇಣದ ಬತ್ತಿಯ ದೀಪದ ಬೆಳಕಿನಿಂದ ಮನೆ ಉದ್ಘಾಟನೆಯಾಗುತ್ತದೆ. ಹೊರಗೆ ದೀಪದ ಬೆಳಕು ಇರದೇ ಇದ್ದರೆ ಮನೆ ಕತ್ತಲಾಗುತ್ತದೆ. ಮನೆ ಕಟ್ಟಲಿಕ್ಕೆ ಲಕ್ಷಾಂತರ ಹಣ ಬೇಕು; ಆದರೆ, ಅದರ ಉದ್ಘಾಟನೆಗೆ ಒಂದೇ ಒಂದು ರೂಪಾಯಿಯ ಮೇಣದ ಬತ್ತಿಯ ದೀಪದ ಬೆಳಕು ಸಾಕು.
ಬೆಲೆ ಇರುವುದು ಮನೆಗಲ್ಲ, ಬೆಳಕಿಗೆ. ಮನಸ್ಸಿನೊಳಗೆ ಜ್ಞಾನದ ಬೆಳಕು ಇರದಿದ್ದರೆ ಮನಸ್ಸೇ ಕತ್ತಲು, ಬದುಕು ಕತ್ತಲಾಗಿ ಎಲ್ಲವೂ ಅವ್ಯವಸ್ಥಿತವಾಗುತ್ತದೆ. ಜ್ಞಾನ ಮನುಷ್ಯನನ್ನು ದೊಡ್ಡವನನ್ನಾಗಿ ಮಾಡುತ್ತದೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ತೋರಿಸುತ್ತದೆ. ಮನುಷ್ಯ ಜೀವನದಲ್ಲಿ ಕೆಟ್ಟದ್ದನ್ನು ಬಿಟ್ಟು ಒಳ್ಳೆಯ ಜ್ಞಾನದ ಬದುಕನ್ನು ಕಟ್ಟಿಕೊಳ್ಳಬೇಕು. ಮನುಷ್ಯನಿಗೆ ಸಾಮಾನ್ಯ ಜ್ಞಾನದ ಕೊರತೆ ಇದೆ. ಬದುಕಿಗೆ ಜ್ಞಾನ ಬೇಕು. ಸಾಮಾನ್ಯ ಜ್ಞಾನ, ವಿಜ್ಞಾನ, ಸುಜ್ಞಾನ ಎಲ್ಲವೂ ಬೇಕು. ಮಕ್ಕಳು ಅಧ್ಯಯನಶೀಲರಾಗಿ ಹೊಸ ಹೊಸ ಕನಸು ಕಾಣುತ್ತಿರಬೇಕು. ಜಗತ್ತಿನಲ್ಲಿ ಯಾರಲ್ಲಿ ಒಳ್ಳೆಯ ಕನಸಿಲ್ಲವೋ ಅವರೆಲ್ಲ ಬಡವರಾಗಿದ್ದಾರೆ.
* ಶ್ರೀ ಗವಿ ಸಿದ್ದೇಶ್ವರ ಸ್ವಾಮೀಜಿ, ಗವಿಮಠ, ಕೊಪ್ಪಳ