Advertisement
ಅದು 80ರ ದಶಕ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ, ಲ್ಯಾಂಡ್‌ಸ್ಯಾಟ್ ಹೆಸರಿನ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಸುತ್ತಿದ್ದ ಕಾಲ. ಈ ಉಪಗ್ರಹಗಳು ಭೂಮಿಯ ಫೋಟೊ ತೆಗೆದು, ಯಾವ ಪ್ರದೇಶ ಯಾವ ಕೃಷಿಗೆ ಸೂಕ್ತ ಎಂಬುದನ್ನು ನಿಷ್ಕರ್ಷಿಸುವುದರಲ್ಲಿ ತೊಡಗಿದ್ದವು. ನಾಸಾದ ನಿಯಂತ್ರಣ ಕೇಂದ್ರಕ್ಕೆ ನಿತ್ಯವೂ ಬಂದು ಬೀಳುತ್ತಿದ್ದ ಮಾಹಿತಿ ಬೆಟ್ಟದ ಗಾತ್ರದಲ್ಲಿತ್ತು. ಅವುಗಳಲ್ಲಿ ಒಂದೊಂದನ್ನೂ ಪರಿಶೀಲಿಸಿ, ಫೋಟೊಗಳಲ್ಲಿದ್ದ ವರ್ಣ- ಛಾಯೆ ವಿನ್ಯಾಸಗಳ ವ್ಯತ್ಯಾಸಗಳನ್ನು ಗುರುತಿಸಿ, ಆಯಾ ಪ್ರದೇಶದ ಭೌಗೋಳಿಕ ಸ್ಥಿತಿಗತಿಗಳನ್ನು ಊಹಿಸಬೇಕಿದ್ದ ಕೆಲಸ ವಿಜ್ಞಾನಿಗಳದು. ಇಡೀ ಯೋಜನೆಗೆ “ಅಗ್ರಿಸ್ಟಾರ್ಸ್’ ಎಂದು ಹೆಸರು. ಈ ಯೋಜನೆಯ ಭಾಗವಾಗಿ ಕೆಲಸ ಮಾಡುತ್ತಿದ್ದವರು ಕನ್ನಡಿಗ, ನವರತ್ನ ಎಸ್. ರಾಜಾರಾಮ್ ಅವರು.
Related Articles
Advertisement
ಚುರುಕಾದ ಯಂತ್ರಗಳು…: ರಾಜಾರಾಮ್ ಅವರ ಮುಂದಿನ ಗುರಿ ಉದ್ದಿಮೆಯಲ್ಲಿ ಬಳಸುವ ಸ್ವಯಂಚಾಲಿತ ಯಂತ್ರಗಳನ್ನು ಬುದ್ಧಿವಂತವಾಗಿಸುವುದು. ಕಂಪ್ಯೂಟರ್ ಏಡೆಡ್ ಡಿಸೈನ್ ಮತ್ತು ಕಂಪ್ಯೂಟರ್ ಏಡೆಡ್ ಮ್ಯಾನುಫಾಕ್ಚರಿಂಗ್ (ಕ್ಯಾಡ್ ಮತ್ತು ಕ್ಯಾಮ್) ಎಂಬ ಎರಡು ಪರಿಕಲ್ಪನೆಗಳಿವೆ. ವಿನ್ಯಾಸ ಮತ್ತು ನಿರ್ಮಾಣ- ಇವೆರಡಕ್ಕೂ ಗಣಕಗಳನ್ನು ಬಳಸಿಕೊಳ್ಳುವುದು ಇದರ ಮೂಲ ಆಶಯ. ಯಾವುದೇ ಒಂದು ಉದ್ದಿಮೆಗೆ ಸೀಮಿತವಾಗಿರುವಂತೆ ಒಂದು ಸ್ವಯಂಚಾಲಿತ ಯಂತ್ರವನ್ನು ನಿರ್ಮಿಸಬೇಕಾದರೆ ಅದು ಹೇಗೆ ಕೆಲಸ ಮಾಡಬೇಕೆಂಬುದನ್ನು ಮೊದಲೇ ಯಂತ್ರಕ್ಕೆ ತಂತ್ರಾಂಶಗಳ ಮೂಲಕ ಕಲಿಸಬೇಕು. ಹಾಗಲ್ಲದೆ, ಯಂತ್ರವೊಂದು ತಾನು ಏನು ಮಾಡಬೇಕೆಂಬುದನ್ನು ತಾನಾಗಿ ಕಲಿಯುತ್ತ, ಪಳಗುತ್ತ ಮುಂದುವರಿಯುವಂತಿದ್ದರೆ ಹೇಗೆ? ರಾಜಾರಾಮ್, ತಮ್ಮ ಶಿಷ್ಯ ಎರಿಕ್ ಸಲ್ಲಿವಾನ್‌ನ ಜತೆಗೂಡಿ “ರೋಬೋಎಡಿಟ್’ ಎಂಬ ಯಂತ್ರಾಂಶವನ್ನೂ ಸಿದ್ಧಪಡಿಸಿದರು. ಭವಿಷ್ಯದಲ್ಲಿ ನಡೆಯಲಿದ್ದ ಕೈಗಾರಿಕಾ ಕ್ರಾಂತಿಗೆ ಇದು ಪ್ರಾರಂಭ ಬಿಂದುವೇ ಆಯಿತು.
ರೋಬೊಟ್‌ಗೆ ಭಾಷೆ ಕಲಿಸುತ್ತಾ…: ರಾಜಾರಾಮ್ ಅವರ ಇನ್ನೊಂದು ಸಾಧನೆ, ಕೃತಕ ನರವ್ಯವಸ್ಥೆಯ ಸಂಶೋಧನೆ. ಪ್ರತಿಪ್ರಾಣಿಗೂ ಅದರ ಸಾಮರ್ಥ್ಯವನ್ನು ನಿರ್ಧರಿಸುವುದು, ಮೆದುಳು. ನರಮಂಡಲ ನಿರಂತರವಾಗಿ ಹೊಸ ವಿಷಯಗಳನ್ನು ಕಲಿಯುತ್ತಲೇ ಇರುತ್ತದೆ. ಕಲಿತಿದ್ದನ್ನು, ಅಗತ್ಯ ಬಿದ್ದರೆ ಮರುನೆನಪಿಸಿಕೊಂಡು ನವೀಕರಿಸಿಕೊಳ್ಳುತ್ತದೆ. ಕೃತಕ ನರವ್ಯವಸ್ಥೆ ಎಂಬುದು ಇಂಥಾದ್ದೇ ಹಲವಾರು ಮಾಹಿತಿಕೋಶಗಳ ಗುತ್ಛ, ಆದರೆ ಕೃತಕ. ಕೃತಕ ನರವ್ಯವಸ್ಥೆಗೆ ನಾಯಿ, ಬೆಕ್ಕು ಇತ್ಯಾದಿ ಪ್ರಾಣಿಗಳ ಯಾವೊಂದೂ ಮಾಹಿತಿ ಕೊಡದೆ,
ಹತ್ತಾರು ಚಿತ್ರಗಳನ್ನು ತೋರಿಸಿ, ಅವುಗಳಲ್ಲಿ ಬೆಕ್ಕು ಯಾವುದು, ಬೆಕ್ಕು ಅಲ್ಲದ್ದು ಯಾವುದು ಎಂಬುದನ್ನು ತೋರಿಸುತ್ತ ಬಂದರೆ ನಂತರ ಅದೇ ವ್ಯವಸ್ಥೆ ಬೆಕ್ಕನ್ನೂ, ಬೆಕ್ಕು ಅಲ್ಲದ ಇತರ ಪ್ರಾಣಿಗಳನ್ನೂ ಗುರುತಿಸುವ ಹಂತಕ್ಕೆ ಬರುತ್ತದೆ. ಅದು ನೂರಾರು ಅಂಕಿ- ಅಂಶಗಳನ್ನೂ ಚಿತ್ರಗಳನ್ನೂ ನೋಡುತ್ತ, ಒಂದಷ್ಟು ವಿಷಯಗಳನ್ನು ತಾನಾಗಿ ಕಲಿಯತೊಡಗುತ್ತದೆ. ವೀಕ್ಷಣೆ, ಪರಿಶೀಲನೆ ಮುಂದುವರಿದಂತೆಲ್ಲ ಅದರ ಕಲಿಕೆ ಮತ್ತು ಅದರಿಂದ ಗಳಿಸಿದ ಜ್ಞಾನ ಹೆಚ್ಚು ನಿಷ್ಕೃಷ್ಟವಾಗುತ್ತ ಹೋಗುತ್ತದೆ. ಜಗತ್ತನ್ನು ಇನ್ನು ಮುಂದೆ ಆಳುವುದು ಇಂಥ ಕೃತಕ ನರಮಂಡಲವಿರುವ ರೋಬೊಟ್‌ಗಳೇ! 92ರಲ್ಲೇ ರಾಜಾರಾಮ್ ಅವರು ಪ್ರಾರಂಭಿಸಿದ ಈ ಸಂಶೋಧನೆ, ಅಮೆರಿಕದಲ್ಲಿ ದೊಡ್ಡ ದೊಡ್ಡ ಉದ್ದಿಮೆಗಳನ್ನೂ ಸಂಶೋಧನಾ ಸಂಸ್ಥೆಗಳನ್ನೂ ಏಕಪ್ರಕಾರವಾಗಿ ಸೆಳೆಯಿತು.
ಸಾಕಷ್ಟು ಅನುದಾನವೂ ಹರಿದುಬಂತು. ಆದರೆ, ಅಷ್ಟುಹೊತ್ತಿಗೆ ರಾಜಾರಾಮ್ ಭಾರತದತ್ತ ಮುಖ ಮಾಡಿದ್ದರು. ತಂತ್ರಜ್ಞಾನದೊಂದಿಗಿನ ಬದುಕು ಸಾಕು ಅನ್ನಿಸಿತ್ತೇನೋ. ಅಮೆರಿಕವನ್ನು ತೊರೆದು, ತಾಯ್ನಾಡಿಗೆ ಬಂದರು. ಅವರ ಮುಂದಿನ ನಿಲ್ದಾಣ ಬೆಂಗಳೂರು. ತನ್ನ ಕಾಲಕ್ಕಿಂತ ಗಾವುದ ಗಾವುದ ದೂರ ಮುಂದೆ ಜಿಗಿದಿದ್ದ ರಾಜಾರಾಮ್, ಭಾರತಕ್ಕೆ ಬಂದಿಳಿದ ಮೇಲೆ ಆಸಕ್ತಿಯ ಕ್ಷೇತ್ರವಾಗಿ ಆರಿಸಿಕೊಂಡದ್ದು ಏಳೆಂಟು ಸಾವಿರ ವರ್ಷಗಳ ಹಿಂದಿನ ಸರಸ್ವತೀ ನಾಗರಿಕತೆಯನ್ನು!
* ರೋಹಿತ್ ಚಕ್ರತೀರ್ಥ