Advertisement

ಮಾಸ್ಟರ್‌ ಸೃಷ್ಟಿಸಿದ “ದತ್ತು’ಎದ್ದು ಬಂದಾಗ…

03:55 PM May 27, 2017 | |

ಈಗೀಗ ಮಾಸ್ಟರ್‌ ಹಿರಣ್ಣಯ್ಯ, ನಾಟಕಗಳಲ್ಲಿ ಕಾಣಸಿಗುವುದು ಅಪರೂಪ. ಅವರಿಗೆ ವಯಸ್ಸಾಯ್ತು ಅಂತಲ್ಲ. ಈಗಲೂ ಅವರ ವ್ಯಂಗ್ಯದ ಸಿಡಿಲುಗಳು ವಿಧಾನಸೌಧವನ್ನೂ ಮುಟ್ಟಬಲ್ಲವು. ದಪ್ಪ ಚರ್ಮದ ಭ್ರಷ್ಟ ರಾಜಕಾರಣಿಗಳಿಗೆ ಹಾಸ್ಯದ ಮೂಲಕವೇ ತಿವಿದು, ಎಚ್ಚರಿಸುವ ಕಲೆ ಅವರಿಗೆ ಮಾತ್ರವೇ ಗೊತ್ತಿರುವುದು. ಈಗ ಇದೇ ಹಿರಣ್ಣಯ್ಯನವರ ರಂಗಪಾತ್ರ, ಬದುಕಿನ ಕುರಿತು ವಿಶಿಷ್ಟ ನಾಟಕವೊಂದು ರೂಪುಗೊಂಡಿದೆ. “ನಟರತ್ನಾಕರ’ ಎಂಬ ಹೆಸರಿನ ಈ ನಾಟಕ, ತನ್ನ ಮೊದಲ ಪ್ರಯೋಗಕ್ಕೆ ಸಜ್ಜಾಗಿದೆ.

Advertisement

ಏನಿದೆ ನಾಟಕದಲ್ಲಿ?
ಅದು ಮೂರು ವರುಷಗಳ ಹಿಂದಿನ ಒಂದು ಘಟನೆ. ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಹಿರಣ್ಣಯ್ಯ ರಾಜಕೀಯ ವ್ಯವಸ್ಥೆಯನ್ನು ಕುಟುಕುತ್ತಿದ್ದರು: ರಾಜಕಾರಣಿಗಳು ಹಾಗೇನೆ, ಚುನಾವಣೆಗೂ ಮುಂಚೆ ಎಲ್ಲರ ಕಾಲು ಹಿಡೀತಾರೆ; ನಂತರ ಎಲ್ಲರ ತಲೆ ಒಡೀತಾರೆ… ಅಂತ ಅನ್ನಬೇಕಿದ್ದವರು “ಎಲ್ಲರ ತಲೆ ಹಿಡೀತಾರೆ’ ಎನ್ನುತ್ತಾರೆ. ದೃಶ್ಯ ಮಾಧ್ಯಮಗಳಿಗೆ ಇದು ಆಹಾರವಾಗುತ್ತದೆ. ಉದ್ದೇಶಪೂರ್ವಕ ಅಲ್ಲದೆ, ಬಾಯಿ ತಪ್ಪಿನಿಂದ ಹೀಗೆ ಹೇಳಿದ್ದರೂ, ಕೊನೆಗೆ ಹಿರಣ್ಣಯ್ಯ ಕ್ಷಮೆ ಕೇಳುತ್ತಾರೆ. “ಇನ್ನು ಮುಂದೆ ನಾನು ವೇದಿಕೆ ಏರಲಾರೆ’ ಎಂದು ನೋವಿನಿಂದ ಸಂಕಲ್ಪ ತೊಡುವ ಹಿರಣ್ಣಯ್ಯನವರೇ ಈ ನಾಟಕದ ಹುಟ್ಟಿಗೆ ಪ್ರೇರಣೆ.

ಮಾಸ್ಟರ್‌ ಅವರೇ ಸೃಷ್ಟಿಸಿದ “ದತ್ತು’ ಪಾತ್ರದ ಬಗ್ಗೆ ಹೆಚ್ಚೇನೂ ವಿವರಿಸಬೇಕಾಗಿಲ್ಲ. ಈ “ದತ್ತು’ ಬಹಳ ಕಿಲಾಡಿ. ವೇದಿಕೆಯಲ್ಲಿಯೇ ನಿಂತು ಸಾಂಕೇತಿಕವಾಗಿ ಅವರವರ ಆಂಗಿಕದಲ್ಲಿ ಪ್ರತಿಕ್ರಿಯಿಸುವುದು ಇದಕ್ಕೆ ರೂಢಿ. ಆದರೆ, ಯಾವಾಗ ಮಾಸ್ಟರ್‌ ತಾವು ರಂಗದ ಮೇಲೆ ಬರುವುದೇ ಇಲ್ಲ ಎಂದು ತಿಳಿಸುತ್ತಾರೋ, ಆಗ ದತ್ತು ಪಾತ್ರ ತಳಮಳಕ್ಕೆ ಗುರಿಯಾಗುತ್ತದೆ. ಮಾಸ್ಟರ್‌ ರಂಗದಿಂದ ನಿರ್ಗಮಿಸಿದ ನಂತರ ಮತ್ತೆ ಟಿವಿ ಹಾಕಿ ನೋಡುತ್ತದೆ. ಅಲ್ಲಿ ಮತ್ತೆ ಮಾಸ್ಟರ್‌ ಗಪ್‌ಚುಪ್‌ ಆಗಿರುವುದು, ರಾಜಕಾರಣಿಗಳು ಆನಂದದಲ್ಲಿ ತೇಲುತ್ತಿರುವ ಸುದ್ದಿ ತಿಳಿದುಬರುತ್ತದೆ.

ದತ್ತು ಸುಮ್ಮನೆ ಕೂರುವುದಿಲ್ಲ. ಚಾನೆಲ್‌ನವರಿಗೆ ಫೋನು ಮಾಡಿ, ತರಾಟೆಗೆ ತೆಗೆದುಕೊಳ್ಳುತ್ತದೆ. “ಯಾರು ನೀನು?’ ಎಂದು ಚಾನೆಲ್‌ನವರು ಕೇಳಿದಾಗ, “ನಾನು ಮಾಸ್ಟರ್‌ ಹಿರಣ್ಣಯ್ಯನವರ ವಂಶದ ಒಂದು ಚೂರು; ಅವರ ಒಂದು ಕವಲು; ಇಷ್ಟು ದಿನ ಅವರೊಳಗೆ ಒಂದು ಪಾತ್ರವಾಗಿ ತುಂಬಾ ಸುಪ್ತವಾಗಿದ್ದೆ. ಅವರು ಮೇಕಪ್‌ ಹಾಕಿಕೊಂಡಾಗ ಮಾತ್ರ ಮೂರ್ತವಾಗಿ ಪ್ರಕಟಗೊಳ್ಳುತ್ತಿದ್ದೆ. ಈಗ ಅವರು ರಂಗದ ಮೇಲೆ ಬರಲ್ಲ, ಮೇಕಪ್‌ ಹಾಕಿಕೊಳ್ಳಲ್ಲ ಅಂತಿದ್ದಾರೆ. ಆದರೆ, ಜನತೆಗೆ ನನ್ನ ಪಾತ್ರದ ಅಗತ್ಯವಿದೆ. ಅದಕ್ಕೆ, ಪಾತ್ರವಾದ ನಾನು ಜೀವಂತವಾಗಿ ಮೈದಳೆದು ಬಂದು, ಮತ್ತೆ ರಂಗದ ಮೇಲೆ ನಿಲ್ಲಬೇಕು ಅಂತಿದ್ದೇನೆ’ ಎನ್ನುತ್ತದೆ.

ಸುದ್ದಿ ಸೆನ್ಸೇಶನ್‌ ಅನಿಸಿದರೂ ಇದು ಒಂದು ರೀತೀಲಿ ಗೊಂದಲ ಸೃಷ್ಟಿಸುತ್ತದೆ. ಅಥವಾ ಇದು ಫೇಕ್‌ ಕಾಲ್‌ ಇದ್ದಿರಬಹುದಾ ಎಂಬ ಅನುಮಾನ ಹುಟ್ಟಿ, ಚಾನೆಲ್‌ನವರು ಸ್ಪಷ್ಟತೆ ತಂದುಕೊಳ್ಳಲು ಬಾಬು ಹಿರಣ್ಣಯ್ಯನವರಿಗೆ ಕರೆ ಮಾಡುತ್ತಾರೆ. ಬಾಬು ಹಿರಣ್ಣಯ್ಯ ಮತ್ತು ಮಾಸ್ಟರ್‌ ಹಿರಣ್ಣಯ್ಯ ಆಶ್ಚರ್ಯದಿಂದ ಇದನ್ನು ಆಲಿಸಿ, ದತ್ತು ಎಂದು ಕರೆಮಾಡಿದವರ ಫೋನ್‌ ನಂಬರ್‌ ಅನ್ನು ತೆಗೆದುಕೊಳ್ಳುತ್ತಾರೆ. ನಂತರ ಏರ್ಪಡುವುದೇ ದತ್ತು ಮತ್ತು ಮಾಸ್ಟರ್‌ ಹಿರಣ್ಣಯ್ಯನವರ ಸಂಭಾಷಣೆ. ನಾಟಕದ ಪೂರ್ವಾರ್ಧದಲ್ಲಿ ಕಥೆಯ ತೇರು ಸಾಗುವ ಬಗೆ ಇದು.

Advertisement

ಉತ್ತರಾರ್ಧದಲ್ಲಿ ಮಾಸ್ಟರ್‌ ಹಿಸ್ಟರಿ
ನಾಟಕದ ಉತ್ತರಾರ್ಧದಲ್ಲಿ ಮಾಸ್ಟರ್‌ “ನಟರತ್ನಾಕರ’ ಆಗಿದ್ದರ ರಂಗರೂಪ ಕಟ್ಟಿಕೊಡುತ್ತಾರೆ ನಿರ್ದೇಶಕರು. “ಲಂಚಾವತಾರ’ ನಾಟಕದ ದತ್ತು ಮತ್ತು ಮುನಿಯಪ್ಪನವರ ಕಾಂಬಿನೇಷನ್‌ ಪಾತ್ರಗಳ ಸಂಯೋಜನೆಯನ್ನು ಇಲ್ಲಿ ವಿಶಿಷ್ಟವಾಗಿ ಅಳವಡಿಸಲಾಗಿದೆ.

ನಾನೇಕೆ ಮಾಸ್ಟರ್‌ ಅವರನ್ನು ಚಿತ್ರಿಸಿದೆ?
ಮಾಸ್ಟರ್‌ರಿಗೆ ವಯಸ್ಸಾದರೇನಂತೆ? ತಾವು ಸೃಷ್ಟಿಸಿದ ಪಾತ್ರದ ಮೂಲಕ ಅವರು ವ್ಯಕ್ತಿ ಚೌಕಟ್ಟಿನ ಆಚೆಗೆ ಬೆಳೆದವರು. ಪರಿಣಾಮವಾಗಿ ಇಂದು ಮಾಸ್ಟರ್‌ ಹಿರಣ್ಣಯ್ಯ ಎಂದರೆ ಒಂದು ವ್ಯಕ್ತಿಯ ಹೆಸರಾಗಿ ಉಳಿದಿಲ್ಲ. ನಾನು ಅವರನ್ನು ಫಿನಾಮಿನನ್‌ ಎನ್ನುತ್ತೇನೆ. ಫಿನಾಮಿನನ್‌ ಎಂದರೆ, ಒಂದು ವಿದ್ಯಮಾನ ಎಂದರ್ಥ. ಒಂದು ಘಟನೆ, ಅದಕ್ಕೆ ಒಂದು ರಿಯಾಕ್ಷನ್‌ ಅಂತಾದರೂ ಅರ್ಥೈಸಿಕೊಳ್ಳಬಹುದು. ಮಾಸ್ಟರ್‌ ಹಿರಣ್ಣಯ್ಯನವರು ಫಿನಾಮಿನೆನ್‌ ಆಗಿರುವುದು ಹೇಗೆ ಎಂದು ಚಿತ್ರಿಸಬೇಕೆನಿಸಿ ಇದರ ರಂಗರೂಪ ಅಣಿಮಾಡಿದೆ. ಮಾತುಕತೆ, ಚರ್ಚೆಯಲ್ಲಿ ಬಾಬು ಹಿರಣ್ಣಯ್ಯನವರು ನನಗೆ ಸಂಪೂರ್ಣ ಸಹಕಾರ ನೀಡಿದರು. ಕೆಲವು ಅಗತ್ಯ ದೃಶ್ಯಗಳನ್ನು ಕಟ್ಟಿಕೊಟ್ಟರು. ಅವರಿಗೆ ನಾನು ಕೃತಜ್ಞ.
– ಎನ್‌.ಸಿ. ಮಹೇಶ್‌, ರಂಗ ನಿರ್ದೇಶಕ

ನಾಟಕಕ್ಕೆ ಸೆನ್ಸಾರ್‌ ಇಲ್ಲ,ಅದೇ ದೊಡ್‌ ಪುಣ್ಯ!
ನಾನು ನಾಟಕ ಆಗುವಷ್ಟು ದೊಡ್ಡ ವ್ಯಕ್ತಿ ಅಲ್ಲ. ಆದರೆ, ನನ್ನ ಪಾತ್ರವೂ ಇಲ್ಲಿ ಅರಳಿ ನಿಂತಿರುವ ಬಗ್ಗೆ ಖಂಡಿತ ಖುಷಿ ಇದೆ. ನನಗೆ ಈಗ ವಯಸ್ಸು 84. ಬೆನ್ನು ನೋವಿನ ಆಪರೇಶನ್‌ ಆಗಿದೆ. ರಂಗ ಚಟುವಟಿಕೆಯಲ್ಲಿ ಮೊದಲಿನಷ್ಟು ಸಕ್ರಿಯನಾಗಿಲ್ಲ. ಈಗಿನ ತಲೆಮಾರಿನ ರಂಗಕರ್ಮಿಗಳು ಸಮಾಜದ ಅಂಕುಡೊಂಕುಗಳನ್ನು, ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ನಾಟಕಗಳ ಮೂಲಕ ಖಂಡಿಸಬೇಕು. ಸಿನಿಮಾಗಳಿಗಾದರೆ ಸೆನ್ಸಾರ್‌ ಎಂಬುದಿದೆ. ಆದರೆ, ನಾಟಕಗಳಿಗೆ ಅದರ ಭಯ ಇರುವುದಿಲ್ಲ. ಹೆಚ್ಚೆಂದರೆ ಪ್ರೇಕ್ಷಕ ಎದ್ದುನಿಂತು, “ಆ ಡೈಲಾಗ್‌ ಸರಿಪಡಿಸ್ಕೋ’ ಎಂದು ಕೂಗಿ, ಕರೆಕ್ಷನ್‌ ಹಾಕಬಹುದಷ್ಟೇ. ಹಾಗಾಗಿ, ಸಮಾಜದ ತಪ್ಪುಗಳನ್ನು ತಿದ್ದಲು ನಾಟಕಗಳಿಂದ ಮಾತ್ರ ಸಾಧ್ಯ. ಈ ಪ್ರಯತ್ನ ನಿರಂತರವಾಗಿರಲಿ…
– ಮಾಸ್ಟರ್‌ ಹಿರಣ್ಣಯ್ಯ, ರಂಗಕರ್ಮಿ
– ಸೌರಭ

Advertisement

Udayavani is now on Telegram. Click here to join our channel and stay updated with the latest news.

Next