Advertisement

“ಲಂಚಾವತಾರ”ದ ಮೂಲಕ ರಾಜಕಾರಣಿಗಳ ಬೆವರಿಳಿಸುತ್ತಿದ್ದ ರಂಗ ರತ್ನಾಕರನ ನೆನಪು!

12:36 PM May 05, 2019 | Vishnu Das |

ಕನ್ನಡ ರಂಗಭೂಮಿಯ ಸೂರ್ಯ ಮರೆಯಾದಂತೆ ಭಾಸವಾಗುತ್ತಿದೆ. ಹಲವು ವರ್ಷ ನಾಟಕ ಕ್ಷೇತ್ರದಲ್ಲಿ ಆನೆ ನಡೆದದ್ದೇ ದಾರಿ ಎಂಬಂತೆ ನಿರ್ಭಿಡೆಯಿಂದ ಪಾತ್ರಗಳ ಮೂಲಕ ರಂಜನೆ ಮತ್ತು ಸಂದೇಶಗಳನ್ನು ಯಾವ ಮುಚ್ಚು ಮರೆಯಿಲ್ಲದೆ ನೀಡಿದ ಮಾಸ್ಟರ್‌ ಹಿರಣ್ಣಯ್ಯ ಅವರು ಎಲ್ಲರನ್ನೂ ಅಗಲಿದ್ದಾರೆ.

Advertisement

ಮಾತುಗಳೆಂದರೆ ಹಿರಣ್ಣಯ್ಯ ಅವರ ಹಾಗೆ, ನೇರವಾಗಿ ಹೇಳುತ್ತಾನೆ ಎಂದು ಹಲವರು ಆಡಿಕೊಳ್ಳುತ್ತಿದ್ದರು. ಇದಕ್ಕೆ ಕಾರಣ ಸಮಾಜದಲ್ಲಿರುವ, ರಾಜಕಾರಣದಲ್ಲಿರುವ ಅಂಕು ಡೊಂಕುಗಳು ,ಹುಳುಕುಗಳನ್ನು ಅವರು ರಂಗದಲ್ಲಿ ಪ್ರಸ್ತುತಪಡಿಸುತ್ತಿದ್ದುದೇ ಕಾರಣ.

ನೇರ ನಡೆನುಡಿಯ ಹಿರಣ್ಣಯ್ಯ ಬದುಕೇ ವಿಶಿಷ್ಠತೆಯಿಂದ ಕೂಡಿರುವುದು. ಹೇಗೆ ಬೇಕೋ ಹಾಗೆ ನೋವು , ನಲಿವು ಸವಾಲುಗಳ ಮೂಲಕ ಜನಪ್ರಿಯ ವ್ಯಕ್ತಿತ್ವವಾಗಿ ಉಳಿದುಕೊಂಡವರು ಅವರು. ಲಂಚಾವತಾರ, ಹೆಸರೆ ಹೇಳುವಂತೆ ನಾಟಕದಲ್ಲಿ ಲಂಚದ ಕುರಿತಾಗಿ, ರಾಜಕಾರಣಿಗಳ ಕೋಟಿ ಲೂಟಿಯ ಕುರಿತಾಗಿ ತಮ್ಮದೇ ಶೈಲಿಯಲ್ಲಿ ಜನರಿಗೆ ತಲುಪಿಸಿ ಮನೋರಂಜನೆ ನೀಡಿ ಗಮನಸೆಳೆದವರು. ಮಾಸ್ಟರ್‌ ಹಿರಣ್ಣಯ್ಯ. ಲಂಚಾವತಾರ ನಾಟಕ 12,000 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡದ್ದು ರಂಗಭೂಮಿಯ ದಾಖಲೆಯಾಗಿ ಉಳಿದಿದೆ.

ಯಾವುದನ್ನೂ ಮುಚ್ಚಿಡದಿರುವ ವ್ಯಕ್ತಿತ್ವ ಹಿರಣ್ಣಯ್ಯ ಅವರದ್ದು, ಸಾವಿರ ಸುಳ್ಳು ಹೇಳಿ ಮದುವೆ ಮಾಡಿ ಎನ್ನುತ್ತಾರೆ ಆದರೆ ಮಾಸ್ಟರ್‌ ಹಿರಣ್ಣಯ್ಯ ಅವರು ನಾನು ಸತ್ಯ ಹೇಳಿದ್ದರಿಂದಲೆ ನನಗೆ ಒಳ್ಳೆಯ ಹೆಂಡತಿ ಸಿಕ್ಕಿದಳು ಎಂದು ವೀಕ್‌ ಎಂಡ್‌ ವಿದ್‌ ರಮೇಶ್‌ ಕಾರ್ಯಕ್ರಮದಲ್ಲಿ ಹೇಳಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ.

ನಾನು ಕುಡಿತೇನೆ, ಇಸ್ಪಿಟ್‌ ಆಡ್ತೇನೆ, ನಾಟಕದವನು, ಹಾಗೋ ಹೀಗೋ ಆಚೆ ಈಚೆ ನೋಡುತ್ತೇನೆ, ಇಷ್ಟಾದ ಮೇಲೂ ನಿಮ್ಮ ಮಗಳನ್ನು ನನಗೆ ಕೊಡುವುದಾದರೆ ಕೊಡಿ ಎಂದು ನಾನು ನನ್ನ ಮಾವನಲ್ಲಿ ಕೇಳಿಕೊಂಡಿದ್ದೆ ಎಂದು ಹಿರಣ್ಣಯ್ಯ ಹೇಳಿಕೊಂಡಿದ್ದರು.

Advertisement

ಅನಿವಾರ್ಯ ಎಂಬಂತೆ ಹಿರಣ್ಣಯ್ಯ ಅವರು ಅಂಜದೆ, ಅಳುಕದೆ ರಾಜಕಾರಣಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದವರು. ಇಂದಿರಾ ಗಾಂಧಿ ಅವರ ವಿರುದ್ಧವೂ ಟೀಕೆಯ ಮಳೆಗೈದು ದಾವೆ ಎದುರಿಸಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದವರು.

ವೃದ್ಧಾಪ್ಯದಲ್ಲೂ ಟೀಕೆ ನಿಲ್ಲಿಸದ ಮಾಸ್ಟರ್‌ ಹಿರಣ್ಣಯ್ಯ ಅವರು 80ವರ್ಷ ಕಳೆದ ಬಳಿಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಪದವೊಂದನ್ನು ಟೀಕೆ ಮಾಡಿದದ್ದರು. ಸಿದ್ದರಾಮಯ್ಯ ಅಭಿಮಾನಿಗಳ ಕಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಕ್ಷಮೆಯನ್ನೂ ಯಾಚಿಸಿ ಉದಾರತೆ ಮತ್ತು ಹಿರಿತನವನ್ನು ತೋರಿದ್ದರು.

ಯಾವುದೇ ಪಕ್ಷವೆಂದು ನೋಡದೆ ಟೀಕಿಸುತ್ತಿದ್ದ ಹಿರಣ್ಣಯ್ಯ ಬದುಕಿನ ಯಾತ್ರೆಯಲ್ಲಿ ಗಳಿಸಿದ್ದು ಖ್ಯಾತಿ . ಬದುಕನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ಹಲವರಿಗೆ ತಿಳಿಸಿ ಹೇಳುವಲ್ಲಿ ಹಿರಿಯಜ್ಜನಾಗಿದ್ದ ಅವರು ನಾನೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಮುಂದಾಗಿದ್ದೆ ಎನ್ನುತ್ತಾರೆ. ಸಂಕಷ್ಟಗಳ ಸರಮಾಲೆ ನನ್ನನ್ನು ಆವರಿಸಿದ್ದರೂ ಎಲ್ಲವನ್ನು ಎದುರಿಸಿ ಜೀವನದಲ್ಲಿ ಗೆದ್ದಿದ್ದೇನೆ ಎಂದು ಶಾಂತಿ ನಿವಾಸದಲ್ಲಿ ಹೇಳುತ್ತಿದ್ದ ಮಾಸ್ಟರ್‌ ಹಿರಣ್ಣಯ್ಯ ಮೌನಿಯಾಗಿದ್ದಾರೆ.

ಅಭಿಮಾನಿಗಳಿಗೆ “ಮಕ್ಮಲ್‌ ಟೋಪಿ” ಹಾಕಿ “ದೇವದಾಸಿ”ಯನ್ನು ತೋರಿಸಿ “ನಡುಬೀದಿ ನಾರಾಯಣ”ನಾಗಿ ನೈಜ ಜೀವನದ ”ಪಶ್ಚಾತ್ತಾಪ”ವನ್ನು ವ್ಯಕ್ತಪಡಿಸಿ ಭ್ರಷ್ಟಾಚಾರ , “ಲಂಚಾವತಾರ”, “ಚಪಲಾವತಾರ”ದ ವಿರುದ್ಧ “ಎಚ್ಚಮ ನಾಯಕ”ನಾಗಿ ಹೋರಾಡಿದ ಮಾಸ್ಟರ್‌ ಹಿರಣ್ಣಯ್ಯ ಬಣ್ಣದ ಬದುಕಿನ ಕೊಂಡಿ ಕಳಚಿಕೊಂಡು ಬಲು ದೂರ ಸಾಗಿದ್ದಾರೆ.

ಹಿರಣ್ಣಯ್ಯ ಅವರು ಬಿಟ್ಟು ಹೋಗಿರುವ ನೇರ ನಡೆ ನುಡಿ, ಧೈರ್ಯ ಮತ್ತು ತಪ್ಪನ್ನು ಎತ್ತಿ ತೋರಿಸುವ ಎದೆಗಾರಿಕೆ ಎಲ್ಲರಿಗೂ ಆದರ್ಶಪ್ರಾಯ. ಮುಖವಾಡ ಧರಿಸಿ ಬದುಕಬಾರದು , ಏನೇ ಇದ್ದರು ಪಾರದರ್ಶಕವಾಗಿರಬೇಕು ಎನ್ನುವ ಆದರ್ಶ ಎಲ್ಲರ ಬದುಕಿಗೂ ಅನ್ವಯವಾಗಬೇಕಲ್ಲವೆ?..

Advertisement

Udayavani is now on Telegram. Click here to join our channel and stay updated with the latest news.

Next