ಚಾಮರಾಜನಗರ: ದೇಶದಲ್ಲಿ 71ನೇ ವರ್ಷದ ಗಣರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಂವಿಧಾನ ಜಾಗೃತಿಗಾಗಿ ನಗರದಲ್ಲಿ ಜ.24ರ ಬೆಳಗ್ಗೆ 7.30ಕ್ಕೆ ಬೃಹತ್ ವಾಕ್‌ಥಾನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ವಿ.ಪಾಟೀಲ್ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಲಯನ್ಸ್, ರೋಟರಿ, ರೆಡ್-ಕ್ರಾಸ್ ಸಂಸ್ಥೆಗಳ ಸಹಯೋಗದೊಂದಿಗೆ ಸಂವಿಧಾನ ಜಾಗೃತಿ ಕುರಿತು ಬೃಹತ್ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು ಒಂದು ಸಾವಿರ ಮಂದಿ ಈ ಬೃಹತ್‌ವಾಕಥಾನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ ಎಂದು ವಿವರಿಸಿದರು. ಜಾಥಾವು ನ್ಯಾಯಾಲಯದ ಆವರಣದಿಂದ ಹೊರಟು ಕರಿನಂಜನಪುರ ಮುಖ್ಯ ರಸ್ತೆಯ ಮೂಲಕ ಸುಲ್ತಾನ್ ಷರೀಫ್ ಸರ್ಕಲ್, ಗುಂಡ್ಲುಪೇಟೆ ವೃತ್ತ, ದೊಡ್ಡ ಮತ್ತು ಚಿಕ್ಕ ಅಂಗಡಿ ಬೀದಿ, ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ, ಭುವನೇಶ್ವರಿ ವೃತ್ತದ ಮೂಲಕ ಹಾದು ಬಿ. ರಾಚಯ್ಯ ಜೋಡಿ ರಸ್ತೆಯ ಮುಖಾಂತರ ಜಿಲ್ಲಾ ಆಡಳಿತ ಭವನದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಮುಂಭಾಗ ಮುಕ್ತಾಯಗೊಳ್ಳಲಿದೆ ಎಂದರು.
ವರ್ಷವಿಡೀ ಜಾಗೃತಿ ಕಾರ್ಯಕ್ರಮ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ. ವಿಶಾಲಾಕ್ಷಿ ಮಾತನಾಡಿ, ವರ್ಷವಿಡೀ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಕಾರ್ಯಕ್ರಮದ ವಿಶೇಷ ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಆರ್.ಅರುಣ್ ಕುಮಾರ್, ಎ.ಎಸ್. ಮಂಜುನಾಥಸ್ವಾಮಿ ನಿಯೋಜಿತರಾಗಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಎಸ್. ಮಂಜು ಹರವೆ ಉಪಸ್ಥಿತರಿದ್ದರು.