Advertisement
ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಪ್ಲೇಮೌತ್ ವಿವಿಯ ವಿಜ್ಞಾನಿಗಳು ಅಂಟಾರ್ಟಿಕದಲ್ಲಿ ಸಾಗರತಳದ ಭೂ ಕುಸಿತಕ್ಕೆ ಸಂಬಂಧಿಸಿದ ಕಾರಣಗಳನ್ನು ಪತ್ತೆಹಚ್ಚುವ ಕುರಿತು ಸಂಶೋಧನೆ ನಡೆಸಿದ್ದಾರೆ. ಈ ವೇಳೆ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ತಾಪಮಾನದ ಪರಿಣಾಮಗಳನ್ನೂ ವರದಿ ಮಾಡಿದ್ದಾರೆ. ತಾಪಮಾನ ಏರಿಕೆಯು ಈ ಹಿಂದಿನ ದಾಖಲೆಗಳನ್ನೂ ಹಿಂದಿಕ್ಕಿ ಹೆಚ್ಚಾಗುತ್ತಲೇ ಇದೆ. ಈ ಹಿಂದೆ ಅಂಟಾರ್ಟಿಕ್‌ನಲ್ಲಿ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ಇದ್ದಾಗ ಬೃಹತ್ ಸುನಾಮಿ ಸಂಭವಿಸಿತ್ತು. ಇದೇ ರೀತಿಯ ಅಸ್ತಿರತೆ ಮುಂದುವರಿದರೆ ಮತ್ತೂಮ್ಮೆ ಬೃಹತ್ ಸುನಾಮಿ ಸಂಭವಿಸಲಿದೆ. ಈ ಬಾರಿ ದಕ್ಷಿಣ ಅಮೆರಿಕಾ, ನ್ಯೂಜಿಲೆಂಡ್ ಹಾಗೂ ಆಗ್ನೇಯ ಏಷ್ಯಾದ ತೀರಗಳನ್ನು ಸುನಾಮಿಯ ಅಲೆಗಳು ಅಪ್ಪಳಿಸಲಿದ್ದು, ಜಾಗತಿಕ ಕಂಟಕ ಎದುರಾಗಲಿದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ಚೀನಾದ ಶಾಂಘೈನಲ್ಲೂ ಹವಾಮಾನ ವೈಪರೀತ್ಯದ ಪರಿಣಾಮ ಎದುರಾಗಿದ್ದು, 100 ವರ್ಷದಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಿನ ಅತಿಹೆಚ್ಚು ತಾಪಮಾನವನ್ನು ನಗರ ವರದಿಮಾಡಿದೆ. ಶಾಂಘೈನ ಕ್ಸು ಜಿಯಾಹುಯಿ ಎನ್ನವ ಪ್ರದೇಶದಲ್ಲಿ ಸೋಮವಾರ 36.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು 100 ವರ್ಷಗಳಲ್ಲೇ ದಾಖಲಾದ ಅತಿಹೆಚ್ಚು ತಾಪಮಾನ. ಇದಕ್ಕೂ ಮುಂಚೆ 1876ರಲ್ಲಿ 35.7 ಡಿಗ್ರಿ ಸೆಲ್ಸಿಯಸ್ ತಾಪಮಾನ ಶಾಂಘೈನಲ್ಲಿ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.